Karnataka Rain: ರಾಜ್ಯದಲ್ಲಿ ಮುಂಗಾರು ಚುರುಕು; ಬೆಂಗಳೂರಲ್ಲಿ ರಾತ್ರಿಯಿಂದಲೇ ವರಣನ ಆರ್ಭಟ ಜೋರು

|

Updated on: Jun 20, 2023 | 11:32 AM

ರಾಜ್ಯದಲ್ಲಿ ದುರ್ಬಲಗೊಂಡಿದ್ದ ಮುಂಗಾರು ಮತ್ತೆ ಚುರುಕುಗೊಂಡಿದ್ದು ಕೋಲಾರ ನಗರ ಸೇರಿದಂತೆ ಕೆಲವೆಡೆ ರಾತ್ರಿಯಿಂದಲೇ ಜಡಿ ಮಳೆ ಆರಂಭವಾಗಿದೆ. ಜಿಲ್ಲೆಯಲ್ಲಿ ಬೆಂಬಿಡದೆ ಮಳೆ ಸುರಿಯುತ್ತಿದ್ದು, ರೈತ ಸಂತಸಗೊಂಡಿದ್ದಾನೆ.

Karnataka Rain: ರಾಜ್ಯದಲ್ಲಿ ಮುಂಗಾರು ಚುರುಕು; ಬೆಂಗಳೂರಲ್ಲಿ ರಾತ್ರಿಯಿಂದಲೇ ವರಣನ ಆರ್ಭಟ ಜೋರು
ಕೋಲಾರ ಮಳೆ
Follow us on

ಬೆಂಗಳೂರು: ರಾಜ್ಯದಲ್ಲಿ ದುರ್ಬಲಗೊಂಡಿದ್ದ ಮುಂಗಾರು (Monsoon) ಮತ್ತೆ ಚುರುಕುಗೊಂಡಿದ್ದು ಬೆಂಗಳೂರಿನಲ್ಲಿ ಮಂಗಳವಾರ (ಜೂ.20) ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣವಿದ್ದು ತುಂತುರು ಮಳೆ (Rain) ಶುರುವಾಗಿದೆ. ಬೆಂಗಳೂರಿನಲ್ಲಿ ಇಂದು ಕನಿಷ್ಠ 6 ಸೆಮಿವರೆಗೂ ಮಳೆಯಾಗುವ ಸಾಧ್ಯತೆ ಇದೆ. ಇಷ್ಟು ದಿನ ಬಿಸಿಲಿನಿಂದ ಕಂಗೆಟ್ಟಿದ್ದ ನಗರವಾಸಿಗಳು ತುಂತುರು ಮಳೆ, ಕೂಲ್, ಕೂಲ್ ವೆದರ್​​​ ಕಂಡು ಹರ್ಷಗೊಂಡಿದ್ದಾರೆ. ಉದ್ಯಾನನಗರಿ ಜನ ಚುಮುಚುಮು ಚಳಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಅಲ್ಲದೇ ಜಿಟಿ ಮಳೆಯಲ್ಲೇ ಕೆಲಸ, ಕಾರ್ಯಗಳಿಗೆ ತೆರಳುತ್ತಿದ್ದಾರೆ. ಕಾರ್ಪೋರೇಷನ್ , ಮಜೆಸ್ಟಿಕ್ , ಹೆಬ್ಬಾಳ, ಶಾಂತಿನಗರ, ವಿಲ್ಸನ್‌ಗಾರ್ಡನ್ ಸೇರಿದಂತೆ ಹಲವಡೆ ಧಾರಾಕಾರ ಮಳೆ ಹಿನ್ನೆಲೆ ಭಾರಿ ಟ್ರಾಫಿಕ್ ಜಾಮ್ ಆಗಿದೆ. ನೂರಾರು ವಾಹನಗಳು ಜಾಮ್‌ನಲ್ಲಿ ಸಿಲುಕಿದ್ದು, ಗಂಟೆಗಟ್ಟಲೆ ವಾಹನಗಳು ಟ್ರಾಫಿಕ್‌ನಲ್ಲಿ ನಿಂತಿವೆ.

ಇಂದು ರಾಜ್ಯದಲ್ಲಿ ವರುಣ ಆರ್ಭಟ ಸಾಧ್ಯತೆ

ಕರಾವಳಿ, ಒಳನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದು (ಜೂ. 20) ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಬೆಂಗಳೂರಿನ ಕೆಲವು ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇದ್ದು ಸಂಜೆ ಅಥವಾ ರಾತ್ರಿಯ ವೇಳೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ನಗರದ ಸುತ್ತಮುತ್ತಲಿನ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ತುಮಕೂರು, ಹಾಸನ, ಚಾಮರಾಜನಗರ ಹಾಗೂ ಮೈಸೂರಿನಲ್ಲಿ ವರುಣ ಅಬ್ಬರಿಸುವ ಸಂಭವ ಇದೆ.

ಉತ್ತರ ಒಳನಾಡಿನ ಬೀದರ್, ಧಾರವಾಡ, ಗದಗ, ರಾಯಚೂರು, ಕೊಪ್ಪಳ, ವಿಜಯಪುರ, ಯಾದಗಿರಿಯಲ್ಲಿ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ಮಳೆರಾಯ ಧರೆಗೆ ಇಳಿಯಲಿದ್ದಾನೆ.

ಇದನ್ನೂ ಓದಿ: Loan repayment: ಕೋಲಾರ ಜಿಲ್ಲೆಯಲ್ಲಿ ಸಾಲ ಪಡೆದ ಮಹಿಳೆಯರು ಮರುಪಾವತಿ ಮಾಡದಿರಲು ಶಪಥಗೈದಂತಿದೆ!

ಕಾರವಾರ, ಚನ್ನರಾಯಪಟ್ಟಣ, ಹೊನ್ನಾವರ, ಶಿರಾಲಿ, ಮಂಕಿ, ಗೋಕರ್ಣ, ಕೋಟ, ಮಾಗಡಿ, ಮನಿರಾಬಾದ್, ಸಿರಾ, ಅಗ್ರಹಾರ, ಬೆಳ್ಳೂರು, ಕೂಡ್ಲಿಗಿ, ಹೆಬ್ಬೂರು, ಬೇಲಿಕೇರಿ, ಕುಮಟಾ, ಉಪ್ಪಿನಂಗಡಿ, ಮುಲ್ಕಿ, ಸಿದ್ದಾಪುರ, ಉಡುಪಿ, ಗಂಗಾವತಿ, ಯಲಬುರ್ಗಾ, ಇಂಡಿ, ಚನ್ನಗಿರಿ, ಹೊಸಪೇಟೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ತಡರಾತ್ರಿ ರಾಜ್ಯಕ್ಕೆ ಆಗಮಿಸಿದ ಮಳೆರಾಯ

ಕೋಲಾರ ನಗರ ಸೇರಿದಂತೆ ಕೆಲವೆಡೆ ರಾತ್ರಿಯಿಂದಲೇ ಜಡಿ ಮಳೆ ಆರಂಭವಾಗಿದೆ. ಜಿಲ್ಲೆಯಲ್ಲಿ ಬೆಂಬಿಡದೆ ಮಳೆ ಸುರಿಯುತ್ತಿದೆ. ಬಂಗಾಳಕೊಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು ಕೋಲಾರ‌ ಸೇರಿದಂತೆ ಹಲವೆಡೆ ಜಿಟಿ ಜಿಟಿ ಮಳೆಯಾಗುತ್ತಿದೆ. ಮಳೆಯಿಂದ ಮಾವು ಕಟಾವು ತೊಂದರೆಯಾಗುತ್ತಿದ್ದು, ಇದರಿಂದ ಮಾವು ಬೆಳೆಗಾರರಿಗೆ ನಷ್ಟವಾಗಲಿದೆ. ಆದರೆ ಮತ್ತೊಂದು ಕಡೆ ಮಳೆಗಾಗಿ ಕಾದು ಕುಳಿತಿದ್ದ ರೈತರ ಮುಖದಲ್ಲಿ ಸಂತಸ ಮೂಡಿದೆ. ಇನ್ನು ಹವಾಮಾನ ಇಲಾಖೆ ಪ್ರಕಾರ ಇನ್ನೂ‌ ಮೂರು‌ ದಿನಗಳ ಕಾಲ‌ ಮಳೆಯಾಗುವ ಸಾಧ್ಯತೆ ಇದೆ.

ದೇವನಹಳ್ಳಿ:  ದೇವನಹಳ್ಳಿ ಸುತ್ತಾಮುತ್ತ ಬೆಳಗ್ಗೆಯಿಂದಲೇ ಜಿಟಿ ಜಿಟಿ ಮಳೆ ಆರಂಭವಾಗಿದೆ. ಜಿಟಿ ಜಿಟಿ ಮಳೆಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಶಾಲಾ‌ ಕಾಲೇಜು ಮತ್ತು ಕೆಲಸಕ್ಕೆ ತೆರಳಲು ಅಲ್ಪಮಟ್ಟಿಗೆ ಪರದಾಡುವಂತಾಯಿತು. ನಿರಂತರವಾಗಿ 3 ಗಂಟೆಗಳಿಂದ ಮಳೆ ಸುರಿಯುತ್ತಿದೆ. ದೇವನಹಳ್ಳಿಯ ವಾತಾವರಣ ಮಲೆನಾಡಿನಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:43 am, Tue, 20 June 23