74,000 ಹುದ್ದೆಗಳ ಭರ್ತಿಗೆ ಹೈಟೆಕ್ ಭದ್ರತೆ: ಅಕ್ರಮ ತಡೆಗೆ ರಾಜ್ಯ ಸರ್ಕಾರದಿಂದ ‘ಡಿಜಿಟಲ್ ಕೋಟೆ’!
ಕರ್ನಾಟಕ ಸರ್ಕಾರವು 74,000 ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಹೈಟೆಕ್ ಭದ್ರತಾ ವ್ಯವಸ್ಥೆ ಜಾರಿಗೆ ತಂದಿದೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಸ್ಮಾರ್ಟ್ ಲಾಕ್ ಟ್ರಂಕ್, ಕೊಠಡಿಗಳಲ್ಲಿ ಜ್ಯಾಮರ್, ಸಿಸಿಟಿವಿ ಕಣ್ಗಾವಲು ಹಾಗೂ ಪರೀಕ್ಷೆ ಮುಗಿದ 24 ಗಂಟೆಯೊಳಗೆ ಒಎಂಆರ್ ಶೀಟ್‌ಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವ ಪಾರದರ್ಶಕ ನಿಯಮಗಳನ್ನು ರೂಪಿಸಲಾಗಿದೆ.

ಮುಖ್ಯಾಂಶಗಳು
- 74,000 ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸ್ಮಾರ್ಟ್ ಸೆಕ್ಯೂರಿಟಿ ಟ್ರಂಕ್‌ಗಳ ಬಳಕೆ.
- ಪರೀಕ್ಷಾ ಕೊಠಡಿಗಳಲ್ಲಿ ಹೈ-ಟೆಕ್ ಜ್ಯಾಮರ್ ಹಾಗೂ ಸಿಸಿಟಿವಿ ಕಣ್ಗಾವಲು ಅಳವಡಿಕೆ.
- ಪರೀಕ್ಷೆ ಮುಗಿದ 24 ಗಂಟೆಯಲ್ಲಿ ಒಎಂಆರ್ ಶೀಟ್ ಅಪ್‌ಲೋಡ್ ಮಾಡಲು ಕ್ರಮ.
ಬೆಂಗಳೂರು, ಆಗಸ್ಟ್ 02: ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 74,000 ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನು ಪಾರದರ್ಶಕ ಹಾಗೂ ಅಕ್ರಮ-ರಹಿತವಾಗಿ ನಡೆಸಲು ಕರ್ನಾಟಕ ಸರ್ಕಾರವು ಹೈಟೆಕ್ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಪಶ್ನೆಪತ್ರಿಕೆ ಸೋರಿಕೆ ಮತ್ತು ನಕಲು ತಡೆಯಲು ತಂತ್ರಜ್ಞಾನ ಆಧಾರಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸ್ಮಾರ್ಟ್ ಸೆಕ್ಯೂರಿಟಿ ಟ್ರಂಕ್ ಹಾಗೂ 5 ಹಂತದ ಪ್ಯಾಕಿಂಗ್
ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಈ ಬಾರಿ ಅತ್ಯಾಧುನಿಕ ಭದ್ರತಾ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಪ್ರಶ್ನೆಪತ್ರಿಕೆಗಳನ್ನು ಸಾಗಿಸಲು ‘ಒನ್-ಟೈಮ್ ಲಾಕಬಲ್ ಸೆಕ್ಯೂರಿಟಿ ಟ್ರಂಕ್’ಗಳನ್ನು ಬಳಸಲಾಗುತ್ತಿದ್ದು, ಅನಧಿಕೃತವಾಗಿ ತೆರೆಯಲು ಯತ್ನಿಸಿದರೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಆಟೋಮ್ಯಾಟಿಕ್ ಅಲರ್ಟ್ ರವಾನೆಯಾಗುತ್ತದೆ. ಪ್ರಶ್ನೆಪತ್ರಿಕೆಗಳನ್ನು 5 ಹಂತದ ಟ್ಯಾಂಪರ್-ಪ್ರೂಫ್ ಪ್ಯಾಕಿಂಗ್‌ನಲ್ಲಿ ಸಾಗಿಸಲಾಗುತ್ತಿದ್ದು, ರಾಜ್ಯದ ಹೊರಗಿನ ಹೈ-ಸೆಕ್ಯೂರಿಟಿ ಪ್ರಿಂಟಿಂಗ್ ಪ್ರೆಸ್‌ಗಳಲ್ಲಿ ಮುದ್ರಿಸಲಾಗುತ್ತಿದೆ.
ಪರೀಕ್ಷಾ ಕೊಠಡಿಗಳಲ್ಲೇ ಜ್ಯಾಮರ್, ಸಿಸಿಟಿವಿ ಕಣ್ಗಾವಲು
ಇಡೀ ಸೆಂಟರ್ ಬದಲಾಗಿ, ಈ ಬಾರಿ ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲೂ ಹೈ-ಟೆಕ್ ಜ್ಯಾಮರ್‌ಗಳನ್ನು ಅಳವಡಿಸಲಾಗುತ್ತಿದೆ. ಒಂದೇ ಕೊಠಡಿಯಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರಶ್ನೆಗಳು ಮತ್ತು ಉತ್ತರಗಳ ಕ್ರಮಸಂಖ್ಯೆ (Option Sequence) ಬೇರೆ ಬೇರೆಯಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಪರೀಕ್ಷಾ ಕೇಂದ್ರಗಳನ್ನು 24 ಗಂಟೆ ಮುಂಚಿತವಾಗಿ ತಪಾಸಣೆ ನಡೆಸಿ, ಸಿಸಿಟಿವಿ ಕ್ಯಾಮೆರಾ ಹಾಗೂ ಫ್ಲೈಯಿಂಗ್ ಸ್ಕ್ವಾಡ್ಗಳ ಮೂಲಕ ನಿರಂತರ ಕಣ್ಗಾವಲಿನಲ್ಲಿ ಇಡಲಾಗುತ್ತದೆ.
ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ
ವಾಟ್ಸಾಪ್, ಟೆಲಿಗ್ರಾಂ, ಬಿಟ್‌ಚಾಟ್ ಹಾಗೂ ಸ್ನ್ಯಾಪ್‌ಚಾಟ್‌ಗಳ ಮೂಲಕ ಸುಳ್ಳು ಸುದ್ದಿ ಅಥವಾ ಪ್ರಶ್ನೆಪತ್ರಿಕೆ ಸೋರಿಕೆ ವದಂತಿ ಹಬ್ಬಿಸುವವರ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಲಿದ್ದಾರೆ. ಪರೀಕ್ಷೆ ಮುಗಿದ 24 ಗಂಟೆಯೊಳಗೆ ಒಎಂಆರ್ (OMR) ಶೀಟ್‌ಗಳನ್ನು ಮೌಲ್ಯಮಾಪನಕ್ಕೂ ಮುನ್ನವೇ ಕೆಇಎ (KEA) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.
ಇದನ್ನೂ ಓದಿ ನಾಳೆ ಪೊಲೀಸ್ ನೇಮಕಾತಿ ಪರೀಕ್ಷೆ: ಅಭ್ಯರ್ಥಿಗಳಿಗೆ ಮಹತ್ವದ ಸೂಚನೆ ಕೊಟ್ಟ ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಹಿಂದೆ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿದ್ದ ಶಂಕಿತರ ಮೇಲೆ ತನಿಖಾ ಸಂಸ್ಥೆಗಳು ಕಣ್ಣಿಟ್ಟಿದ್ದು, ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡದ ಕೋಚಿಂಗ್ ಸೆಂಟರ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಅಕ್ರಮ ಎಸಗುವವರ ವಿರುದ್ಧ ದೂರು ನೀಡಲು 112 ಸಹಾಯವಾಣಿ ಹಾಗೂ ಪರೀಕ್ಷಾ ನಿಯಂತ್ರಣ ಕೊಠಡಿ ಸಂಖ್ಯೆಗಳನ್ನು (9480800308, 9480800106) ಬಿಡುಗಡೆ ಮಾಡಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




