ಟಿಹೆಚ್‌ಡಿಸಿಎಲ್‌ ಜೊತೆ 15,000 ಕೋಟಿ ರೂ. ವಿದ್ಯುತ್ ಯೋಜನೆಗಳ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ

| Updated By: ಆಯೇಷಾ ಬಾನು

Updated on: Nov 09, 2023 | 2:35 PM

ಗುರುವಾರ ವಿಧಾನಸೌಧದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ಪರವಾಗಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ ಹಾಗೂ ಟಿಹೆಚ್‌ಡಿಸಿಎಲ್‌ ತಾಂತ್ರಿಕ ನಿರ್ದೇಶಕ ಭೂಪೇಂದ್ರ ಗುಪ್ತ ಅವರು ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದಾರೆ.

ಟಿಹೆಚ್‌ಡಿಸಿಎಲ್‌ ಜೊತೆ 15,000 ಕೋಟಿ ರೂ. ವಿದ್ಯುತ್ ಯೋಜನೆಗಳ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ
ಟಿಹೆಚ್‌ಡಿಸಿಎಲ್‌ ಜೊತೆ 15,000 ಕೋಟಿ ರೂ. ವಿದ್ಯುತ್ ಯೋಜನೆಗಳ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ
Follow us on

ಬೆಂಗಳೂರು, ನ.09: ಟಿಹೆಚ್‌ಡಿಸಿಎಲ್‌ (THDCL) ಜೊತೆ 15,000 ಕೋಟಿ ರೂ. ವಿದ್ಯುತ್ ಯೋಜನೆಗಳ ಒಪ್ಪಂದಕ್ಕೆ ರಾಜ್ಯ ಸರ್ಕಾರ (Karnataka Government) ಸಹಿ ಹಾಕಿದೆ. ಒಡಂಬಡಿಕೆಗೆ ಕೆಪಿಸಿಎಲ್, ಕ್ರೆಡಲ್‌ ಮತ್ತು ಕೇಂದ್ರ ಸರ್ಕಾರ ಸ್ವಾಮ್ಯದ ತೆಹ್ರಿ ಹೈಡ್ರೋ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಸಹಿ ಹಾಕಿದೆ. ರಾಜ್ಯದಲ್ಲಿ ಪಂಪ್ಡ್ ಸ್ಟೋರೇಜ್, ಹೈಡ್ರೋ, ಸೋಲಾರ್ ಸೇರಿದಂತೆ 15,000 ಕೋಟಿ ರೂ. ಮೊತ್ತದ ವಿವಿಧ ವಿದ್ಯುತ್ ಯೋಜನೆಗಳನ್ನು ಕೈಗೊಳ್ಳುವ ಸಂಬಂಧ ಕೇಂದ್ರ ಸರ್ಕಾರ ಸ್ವಾಮ್ಯದ ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ ಜೊತೆ ರಾಜ್ಯ ಸರ್ಕಾರ ಸಹಿ ಹಾಕಿದೆ.

ಗುರುವಾರ ವಿಧಾನಸೌಧದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ಪರವಾಗಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ ಹಾಗೂ ಟಿಹೆಚ್‌ಡಿಸಿಎಲ್‌ ತಾಂತ್ರಿಕ ನಿರ್ದೇಶಕ ಭೂಪೇಂದ್ರ ಗುಪ್ತ ಅವರು ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದಾರೆ.

ದೆಹಲಿಯಲ್ಲಿ ಈ ಹಿಂದೆ ಕೇಂದ್ರ ಇಂಧನ ಸಚಿವ ಆರ್‌.ಕೆ. ಸಿಂಗ್ ಮತ್ತು ಟಿಹೆಚ್‌ಡಿಸಿಎಲ್‌ನ ಸಿಎಂಡಿ ಆರ್.ಕೆ. ವಿಷ್ಣೋಯ್ ಅವರನ್ನು ರಾಜ್ಯ ಇಂಧನ ಸಚಿವ ಜಾರ್ಜ್ ಭೇಟಿಯಾದ ಸಂದರ್ಭದಲ್ಲಿ ಈ ಒಪ್ಪಂದ ಕುರಿತು ವಿಸ್ತೃತ ಚರ್ಚೆ ನಡೆಸಿದ್ದರು. ಅದರ ಫಲವಾಗಿ ಇಂದು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇನ್ನು ಒಪ್ಪಂದದಂತೆ ಆದ್ಯತೆ ಮೇರೆಗೆ ಕರ್ನಾಟಕಕ್ಕೆ ವಿದ್ಯುತ್‌ ಒದಗಿಸುವುದಾಗಿ ಟಿಹೆಚ್‌ಡಿಸಿಎಲ್‌ ಭರವಸೆ ನೀಡಿದೆ ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಸೇಡಿನ ರಾಜಕೀಯ ಮಾಡುತ್ತಿದೆ, ಈ ತಿಂಗಳ ಅಂತ್ಯದಲ್ಲಿ ಮೂರು ದಿನ ಸತ್ಯಾಗ್ರಹ ಮಾಡುತ್ತೇನೆ -ಬಿಎಸ್​ ಯಡಿಯೂರಪ್ಪ

ಈ ವೇಳೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಹೆಚ್ಚುತ್ತಿರುವ ವಿದ್ಯುತ್‌ ಬೇಡಿಕೆಗಳನ್ನು ಪರಿಹರಿಸಲು ಈ ಒಪ್ಪಂದ ಪೂರಕವಾಗಿದ್ದು, ಯೋಜನೆಯನ್ನು ಆದಷ್ಟು ಬೇಗ ಕಾರ್ಯಗತಗೊಳಿಸಲು ಎಲ್ಲ ರೀತಿಯ ಸಹಕಾರ ನೀಡಲು ರಾಜ್ಯ ಸರ್ಕಾರ ಬದ್ಧ. ಕದ್ರಾ ಅಣೆಕಟ್ಟು ಜಲಾಶಯದಲ್ಲಿ 100 ಮೆಗಾವ್ಯಾಟ್‌ ಸಾಮರ್ಥ್ಯದ ಫ್ಲೋಟಿಂಗ್‌ ಸೋಲಾರ್ ಪಿವಿ ಸ್ಥಾವರದ ಅಭಿವೃದ್ಧಿ, 170 ಮೆಗಾವ್ಯಾಟ್ ಸಾಮರ್ಥ್ಯದ ಗ್ರೌಂಡ್‌ ಮೌಂಟೆಡ್‌ ಯೋಜನೆ, ಕೆಪಿಸಿಎಲ್ ಆವರಣದಲ್ಲಿ ಮೇಲ್ಛಾವಣಿ ಸೌರ ಪಿವಿ ಸ್ಥಾವರ ಮತ್ತು ವಾರಾಹಿಯಲ್ಲಿ 1500 ಮೆಗಾವ್ಯಾಟ್‌ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಘಟಕ ಸ್ಥಾಪನೆ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ.

1 ಗಿ.ವ್ಯಾ. ಹೈಬ್ರಿಡ್ ಯೋಜನೆ ಮತ್ತು 500 ಮೆಗಾ ವ್ಯಾಟ್‌ ಸಾಮರ್ಥ್ಯದ ಬೀದರ್ ಸೋಲಾರ್ ಪಾರ್ಕ್‌ ಅಭಿವೃದ್ಧಿ ಸಂಬಂಧ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ ಜತೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ. ಟಿಹೆಚ್‌ಡಿಸಿಎಲ್‌ನ ತಾಂತ್ರಿಕ ನಿರ್ದೇಶಕ ಭೂಪೇಂದರ್ ಗುಪ್ತಾ ಹಾಗೂ ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ರುದ್ರಪ್ಪಯ್ಯ ಅವರು ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು. ಅದರಂತೆ ಟಿಹೆಚ್‌ಡಿಸಿಎಲ್‌ ಕೈಗೊಳ್ಳುವ ನವೀಕರಿಸಬಹುದಾದದ ಇಂಧನ ಯೋಜನೆಗಳಿಗೆ ನವೀಕರೀಸಬಹುದಾದದ ಇಂಧನ ನೀತಿ 2022-27ರ ಅನ್ವಯ ಕ್ರೆಡಲ್‌ ನೆರವು ಒದಗಿಸಲಿದೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ