
ಬೆಂಗಳೂರು, ಡಿಸೆಂಬರ್ 15: ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮೈಕೊರೆಯುವ ಚಳಿ (Weather Forecast) ಜನರನ್ನು ಕಂಗಾಲಾಗಿಸಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಕನಿಷ್ಠ ತಾಪಮಾನ 14–15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಹೆಚ್‌ಎಎಲ್ ವ್ಯಾಪ್ತಿಯಲ್ಲಿ 13 ಡಿಗ್ರಿ ಸೆಲ್ಸಿಯಸ್ ತನಕ ತಾಪಮಾನ ಇಳಿಕೆಯಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 2 ದಿನಗಳಲ್ಲಿ ಶೀತದ ಅಲೆಗಳು ಉಂಟಾಗುವ ಸಾಧ್ಯತೆಯಿದ್ದು, ಬಾಗಲಕೋಟೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಗದಗ, ಚಿಕ್ಕಮಗಳೂರು ಹಾಗೂ ಮೈಸೂರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಿನಲ್ಲಿ ಚಳಿಯ ಆರ್ಭಟ ಮುಂದುವರಿದಿದ್ದು, ತಾಪಮಾನ 14 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಬೆಳಗಿನ ವಾಕಿಂಗ್‌ಗೆ ಹೋಗಲು ಜನರು ಹಿಂದೇಟು ಹಾಕುತ್ತಿದ್ದು, ಲಾಲ್‌ಬಾಗ್‌ನಂತಹ ಉದ್ಯಾನವನಗಳಲ್ಲಿ ವಾಯುವಿಹಾರಕ್ಕೆ ಬರುವವರ ಸಂಖ್ಯೆ ಶೇ.50ರಷ್ಟು ಕಡಿಮೆಯಾಗಿದೆ. ಡಿಸೆಂಬರ್ 17ರಿಂದ ಚಳಿ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದೆ. ವೈದ್ಯರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಲು ಸಲಹೆ ನೀಡಿದ್ದು, ವಿಶೇಷವಾಗಿ ಮಕ್ಕಳು ಹಾಗೂ ಹಿರಿಯರ ಆರೈಕೆಗೆ ಒತ್ತು ನೀಡಬೇಕು ಎಂದು ತಿಳಿಸಿದ್ದಾರೆ. ಬೆಳಗಿನ ವಾಕ್ ಮತ್ತು ವ್ಯಾಯಾಮವನ್ನು ತಾತ್ಕಾಲಿಕವಾಗಿ ತಪ್ಪಿಸಿ, ಬೆಚ್ಚನೆಯ ಉಡುಪು ಧರಿಸಿ ಬಿಸಿ ಆಹಾರ ಸೇವಿಸುವಂತೆ ಸೂಚಿಸಿದ್ದಾರೆ.
ಬಿದರಿನಲ್ಲಿ ಕನಿಷ್ಠ 7.4°C ಉಷ್ಣಾಂಶ ಕಂಡುಬಂದಿದ್ದು, ರಾಜ್ಯದಲ್ಲೇ ಅತಿ ಕಡಿಮೆ ತಾಪಮಾನ ದಾಖಲಾಗಿದೆ. ಹೊನ್ನಾವರದಲ್ಲಿ ಕನಿಷ್ಠ 19.13°C, ಬೆಂಗಳೂರು ಎಚ್ ಎಎಲ್ ವ್ಯಾಪ್ತಿಯಲ್ಲಿ 13.4°C, ಬೆಂಗಳೂರು ನಗರದಲ್ಲಿ 14.5°C, ಬೆಂಗಳೂರು KAIL AP – 12.9°C, ಹಾಸನದಲ್ಲಿ 8.7°C, ಆಗುಂಬೆಯಲ್ಲಿ 9.3°C, ಧಾರವಾಡದಲ್ಲಿ 9.5°C, ವಿಜಯಪುರದಲ್ಲಿ 10°C, ಹಾಸನದಲ್ಲಿ ಕನಿಷ್ಠ 8.7°C ದಾಖಲಾಗಿದೆ.
ಇದನ್ನೂ ಓದಿ ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಚಳಿಯ ಮುನ್ಸೂಚನೆ, 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಮುಂದಿನ ನಾಲ್ಕು ದಿನಗಳ ಕಾಲ ಬೆಳಗ್ಗೆ 3ರಿಂದ 8 ಗಂಟೆಯವರೆಗೆ ಹೆಚ್ಚಿನ ಚಳಿ ಇರಲಿದ್ದು, ಸಿಲಿಕಾನ್ ಸಿಟಿಯಲ್ಲಿ ತೀವ್ರ ಶೀತ ವಾತಾವರಣ ಕಂಡುಬರುವ ಸಾಧ್ಯತೆ ಇದೆ. ಈ ಹಿನ್ನೆಲೆ ಮಕ್ಕಳು ಹಾಗೂ ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.ತಜ್ಞರು ಚಳಿಗಾಲದಲ್ಲಿ ಹೃದಯಾಘಾತದ ಪ್ರಕರಣಗಳು ಶೇ.10ರಿಂದ 15ರಷ್ಟು ಹೆಚ್ಚಾಗುವ ಆತಂಕ ವ್ಯಕ್ತಪಡಿಸಿದ್ದು, ಡಿಸೆಂಬರ್ ಮತ್ತು ಜನವರಿಯಲ್ಲಿ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ತಿಳಿಸಿದ್ದಾರೆ. ಚಳಿಗಾಲದಲ್ಲಿ ಬೆಳಗಿನ ವಾಕ್ ತಪ್ಪಿಸಿ, ಸಂಜೆಯ ವಾಕಿಂಗ್ ಉತ್ತಮ ಎಂದು ಜಯದೇವ ಆಸ್ಪತ್ರೆಯ ವೈದ್ಯರು ಸಲಹೆ ನೀಡಿದ್ದಾರೆ. ಜೊತೆಗೆ ಬಜ್ಜಿ, ಬೋಂಡಾ ಮುಂತಾದ ಕರಿದ ಆಹಾರ ಸೇವನೆ ತಪ್ಪಿಸಿ, ಆರೋಗ್ಯಕರ ಜೀವನಶೈಲಿ ಅನುಸರಿಸುವಂತೆ ಸೂಚಿಸಲಾಗಿದೆ.
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:44 am, Mon, 15 December 25