ಪಾರ್ಟಿ ಮಾಡುತ್ತಿದ್ದವರ ಬಳಿ ಹಣ ಕೇಳಿದ ಪೊಲೀಸರು; ಹೆದರಿ ಬಿಲ್ಡಿಂಗ್ನಿಂದ ಕೆಳಗೆ ಹಾರಿದ ಯುವತಿ?
ಕಳ್ಳನಿಂದಲೇ ಹಣ ಪಡೆತಂತಹ ಹಲವು ಆರೋಪಗಳು ಬೆಂಗಳೂರು ಪೊಲೀಸರ ವಿರುದ್ಧ ಕೇಳಿ ಬಂದಿತ್ತು. ಇದೇ ಬೆನ್ನಲ್ಲೇ ಬೆಂಗಳೂರು ಪೊಲೀಸರ ವಿರುದ್ಧ ಹಣ ವಸೂಲಿಯ ಗಂಭೀರ ಆರೋಪ ಕೇಳಿಬಂದಿದೆ. ಪಾರ್ಟಿ ನಡೆಸುತ್ತಿದ್ದ ಯುವಕರಿಂದ ಪೊಲೀಸರು ಹಣ ಕೇಳಿದಾಗ, ಭಯಭೀತಳಾದ 21 ವರ್ಷದ ವೈಷ್ಣವಿ ಹೋಟೆಲ್ ಬಾಲ್ಕನಿಯಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಆಕೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಘಟನೆ ಕುರಿತು ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.

ಬೆಂಗಳೂರು, ಡಿಸೆಂಬರ್ 15: ಇತ್ತೀಚಿಗೆ ಬೆಂಗಳೂರಿನ ಒಬ್ಬ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಕಳ್ಳತನದ ಆರೋಪಿಯನ್ನು ಬಂಧಿಸಿದ ನಂತರ ಆತನಿಂದಲೇ ಹಣ ವಸೂಲು ಮಾಡಿದ ಘಟನೆ ನಡೆದಿತ್ತು. ಈ ರೀತಿ ಬೆಂಗಳೂರಿನ (Bengaluru) ಪೊಲೀಸರೇ ಅಪರಾಧಗಳಲ್ಲಿ ಶಾಮೀಲಾಗಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದ ಬೆನ್ನಲ್ಲೇ ಬೆಂಗಳೂರು ಪೊಲೀಸರ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಪಾರ್ಟಿ ಮಾಡುತ್ತಿದ್ದ ಯುವಕ–ಯುವತಿಯರಿಂದ ಪೊಲೀಸರು ಹಣ ಕೇಳಿದ್ದಕ್ಕಾಗಿ ಭಯಗೊಂಡ ಯುವತಿಯೊಬ್ಬಳು ಹೋಟೆಲ್ ಬಾಲ್ಕನಿಯಿಂದ ಕೆಳಗೆ ಹಾರಿರುವ ಘಟನೆ ನಗರದಲ್ಲಿ ಸಂಚಲನ ಮೂಡಿಸಿದೆ.
ಸಾವು, ಬದುಕಿನ ನಡುವೆ ಹೋರಾಡುತ್ತಿರುವ ಯುವತಿ
ಹೋಟೆಲ್ ಬಾಲ್ಕನಿಯಿಂದ ಜಿಗಿದ ಯುವತಿಯನ್ನು ಕುಂದಲಹಳ್ಳಿ ನಿವಾಸಿ ವೈಷ್ಣವಿ (21) ಎಂದು ಗುರುತಿಸಲಾಗಿದೆ. ಆಕೆಯ ತಲೆ, ಕೈ ಮತ್ತು ದೇಹದ ಹಲವು ಭಾಗಗಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ವೈಷ್ಣವಿ ಸದ್ಯ ಕುಂದಲಹಳ್ಳಿಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಶನಿವಾರ ರಾತ್ರಿ ವೈಷ್ಣವಿ ಸ್ನೇಹಿತರೊಂದಿಗೆ ಎಚ್‌ಎಎಲ್ ಎಇಸಿಎಸ್ ಲೇಔಟ್‌ನಲ್ಲಿರುವ ಹೋಟೆಲ್‌ಗೆ ಪಾರ್ಟಿಗಾಗಿ ತೆರಳಿದ್ದಳು. ಎಂಟು ಜನ ಸ್ನೇಹಿತರು ಸೇರಿ ಮೂರು ರೂಮ್‌ಗಳನ್ನು ಬುಕ್ ಮಾಡಿಕೊಂಡು ಹಾಡು ಹಾಕಿಕೊಂಡು ಡ್ಯಾನ್ಸ್ ಮಾಡುತ್ತಿದ್ದ ವೇಳೆ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಕೆಲವೇ ಸಮಯದಲ್ಲಿ ಹೊಯ್ಸಳ ಪೊಲೀಸರು ಹೋಟೆಲ್‌ಗೆ ಆಗಮಿಸಿದ್ದಾರೆ. ಈ ವೇಳೆ ಪೊಲೀಸರು ಬಂದ ವಿಚಾರ ತಿಳಿದ ವೈಷ್ಣವಿ ಭಯದಿಂದ ಬಾಲ್ಕನಿಗೆ ತೆರಳಿ, ಅಲ್ಲಿಂದ ಹಾರಿದ್ದಾಳೆ ಎಂದು ಹೇಳಲಾಗಿದೆ. ಕೆಳಗೆ ಬಿದ್ದ ವೇಳೆ ಕಬ್ಬಿಣದ ಗ್ರಿಲ್‌ಗೆ ತಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ ಪೊಲೀಸರೇ ಅಪರಾಧಗಳಲ್ಲಿ ಶಾಮೀಲು: ಡಿಜಿ, ಐಜಿಪಿ ಸಲೀಂರಿಂದ ಖಾಕಿ, ಹಿರಿಯ ಅಧಿಕಾರಿಗಳಿಗೆ ಬಂತು ಖಡಕ್ ಎಚ್ಚರಿಕೆ
ಫೋನ್ ಪೇ ಬೇಡ ಕ್ಯಾಷ್ ಕೊಡಿ ಎಂದ ಪೊಲೀಸರು
ಈ ನಡುವೆ ಪಾರ್ಟಿ ನಡೆಸುತ್ತಿದ್ದ ಯುವಕರ ಬಳಿ ಪೊಲೀಸರು ಹಣ ಕೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದೂರು ಬಂದಿದೆ ಎಂದು ಹೇಳಿ ಪಾರ್ಟಿ ವಿಡಿಯೋ ತೋರಿಸಿದ್ದ ಪೊಲೀಸರು, ಬಳಿಕ ಹಣ ಕೇಳಿದ್ದಾರೆ ಎಂದು ಯುವಕರು ಆರೋಪಿಸಿದ್ದಾರೆ. ಯುವಕರು ಫೋನ್‌ಪೇ ಮಾಡುತ್ತೇವೆಂದಾಗ ನಿರಾಕರಿಸಿದ ಪೊಲೀಸರು ನಗದು ತರಲು ಒತ್ತಾಯಿಸಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯುವಕನೊಬ್ಬ ಎಟಿಎಂಗೆ ಹೋಗಿ ಹಣ ತರುತ್ತೇನೆಂದು ಕೆಳಗೆ ಬಂದ ವೇಳೆ ಯುವತಿ ಹೋಟೆಲ್ ಬಾಲ್ಕನಿಯಿಂದ ಹಾರಿದ್ದಾಳೆ ಎನ್ನಲಾಗಿದೆ. ಘಟನೆ ಕುರಿತು ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:42 am, Mon, 15 December 25



