ಕರ್ನಾಟಕ ಹವಾಮಾನ ವರದಿ: ಕರಾವಳಿ ಭಾಗಗಳಲ್ಲಿ ಉಷ್ಣ ಅಲೆ; ಶಿವಮೊಗ್ಗ ಸೇರಿದಂತೆ ಹಲವೆಡೆ ಮಳೆಯಾಗುವ ಮುನ್ಸೂಚನೆ
Karnataka Weather: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಶುಷ್ಕ ವಾತಾವರಣ ಕಂಡುಬರುತ್ತಿದ್ದು, ಅಲ್ಲಲ್ಲಿ ಸಾಧಾರಣ ಪ್ರಮಾಣದ ಮಳೆಯಾಗುತ್ತಿದೆ. ಇಂದೂ ಸಹ ಕರಾವಳಿಯ ಭಾಗಗಳಲ್ಲಿ ಉಷ್ಣ ಅಲೆಯ ಮುನ್ಸೂಚನೆಯಿದ್ದು, ಎರಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಹೀಟ್ ವೇವ್ನಿಂದ ತಪ್ಪಿಸಿಕೊಳ್ಳಲು ಯಾವೆಲ್ಲಾ ಮುಂಜಾಗೃತಾ ಕ್ರಮ ಕೈಗೊಳ್ಳಬೇಕೆಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು, ಏಪ್ರಿಲ್ 12: ಬೆಂಗಳೂರು ಸೇರಿದಂತೆ ಇಂದು ಹಲವು ಜಿಲ್ಲೆಗಳಲ್ಲಿ ಶುಷ್ಕ ವಾತಾವರಣವಿರಲಿದ್ದು, ಕೆಲ ಜಿಲ್ಲೆಗಳಲ್ಲಿ ಇಂದೂ ಮಳೆಯಾಗುವ (Weather Forecast) ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯಲ್ಲಿ ಇಂದು ತಾಪಮಾನ ಹೆಚ್ಚಳದ ಸಾಧ್ಯತೆಯಿದ್ದು, ಹೀಟ್ ವೇವ್ ಅಲರ್ಟ್ ನೀಡಲಾಗಿದೆ. ಇನ್ನುಳಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣ ಹವೆಯ ಜೊತೆಗೆ ಕೆಲವೆಡೆ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಹೀಟ್ ವೇವ್, ಒಣ ಹವೆ?
ಕರಾವಳಿಯಲ್ಲಿಂದು ಬಿಸಿ ವಾತಾವರಣದ ಜೊತೆ ಒಣ ಹವೆಯೂ ಇರಲಿದೆ. ಉತ್ತರ ಕನ್ನಡ ಮತ್ತುದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಣ ಹವೆಯಿರಲಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿಯೂ ಶುಷ್ಕ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಒಳನಾಡಿನ ಶಿವಮೊಗ್ಗ, ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಉಳಿದೆಡೆ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ.
ಉಷ್ಣಾಘಾತದಿಂದ ರಕ್ಷಣೆ ಹೇಗೆ?
ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ. ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ. ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




