ಇದು ಕರ್ನಾಟಕದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ಪ್ರಕರಣ! ಬರೋಬ್ಬರಿ 31.83 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಟೆಕ್ಕಿ

ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆಗೆ ಬರೋಬ್ಬರಿ 31.83 ಕೋಟಿ ರೂ. ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಈವರೆಗೆ ದಾಖಲಾದ ಪ್ರಕರಣಗಳಲ್ಲೇ ಇದು ಗರಿಷ್ಠ ಮೊತ್ತದ ಹಣ ಕಳೆದುಕೊಂಡ ಪ್ರಕರಣವಾಗಿದೆ. ಕೊರಿಯರ್ ಕಂಪನಿ ಹಾಗೂ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಂಚಕರು ಮಹಿಳೆಯನ್ನು ಮೋಸಗೊಳಿಸಿ, ಭಯ ಹುಟ್ಟಿಸಿ ಆರು ತಿಂಗಳ ಕಾಲ ಹಣ ವರ್ಗಾಯಿಸುವಂತೆ ಮಾಡಿದ್ದಾರೆ. ಘಟನೆಯ ವಿವರ ಇಲ್ಲಿದೆ.

ಇದು ಕರ್ನಾಟಕದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ಪ್ರಕರಣ! ಬರೋಬ್ಬರಿ 31.83 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಟೆಕ್ಕಿ
ಸಾಂದರ್ಭಿಕ ಚಿತ್ರ

Updated on: Nov 17, 2025 | 8:32 AM

ಬೆಂಗಳೂರು, ನವೆಂಬರ್ 17: ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್ (Digital Arrest) ಇತ್ಯಾದಿ ಹೆಸರಿನಲ್ಲಿ ಹಣ ಎಗರಿಸುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ. ಡಿಜಿಟಲ್ ಅರೆಸ್ಟ್ ವಂಚನೆಗೆ ಒಳಗಾಗಿ ಬೆಂಗಳೂರಿನ (Bengaluru) ಮಹಿಳಾ ಟೆಕ್ಕಿಯೊಬ್ಬರು ಬರೋಬ್ಬರಿ 31.83 ಕೋಟಿ ರೂ. ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಇದು ಕರ್ನಾಟಕದಲ್ಲೇ, ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ವ್ಯಕ್ತಿಯೊಬ್ಬರು ಕಳೆದುಕೊಂಡ ಗರಿಷ್ಠ ಮೊತ್ತ ಎಂಬುದಾಗಿ ಪೊಲೀಸ್ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.

ಇಂದಿರಾನಗರದ ನಿವಾಸಿ, 57 ವರ್ಷ ವಯಸ್ಸಿನ ಮಹಿಳಾ ಟೆಕ್ಕಿಯನ್ನು ಸೈಬರ್ ಅಪರಾಧಿಗಳು ಆರು ತಿಂಗಳಿಗೂ ಹೆಚ್ಚು ಕಾಲ ನಿರಂತರ ಕಣ್ಗಾವಲಿನಲ್ಲಿರಿಸಿದ್ದರು. ಅಲ್ಲದೆ, ಹಣ ದೋಚಿ ನಂತರ ಹಠಾತ್ತನೆ ಸಂಪರ್ಕ ಕಡಿತಗೊಳಿಸಿದ್ದರು ಎಂದು ಹಿರಿಯ ಸೈಬರ್ ಅಪರಾಧ ತನಿಖಾಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಮಹಿಳೆಯನ್ನು ವಂಚನೆಯ ಖೆಡ್ಡಾಗೆ ಕೆಡವಿದ್ಹೇಗೆ ಸೈಬರ್ ವಂಚಕರು?

2024 ರ ಸೆಪ್ಟೆಂಬರ್ 15 ರಂದು ಮಹಿಳೆಗೆ ಕೊರಿಯರ್ ಸೇವೆಯಾದ ಡಿಎಚ್​ಎಲ್​ನಿಂದ ಬಂದವನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ಆಕೆಯ ಹೆಸರಿನಲ್ಲಿ ಮೂರು ಕ್ರೆಡಿಟ್ ಕಾರ್ಡ್‌ಗಳು, ನಾಲ್ಕು ಪಾಸ್‌ಪೋರ್ಟ್‌ಗಳು ಮತ್ತು ನಿಷೇಧಿತ MDMA ಮಾದಕ ದ್ರವ್ಯಗಳನ್ನು ಒಳಗೊಂಡಿರುವ ಒಂದು ಪ್ಯಾಕೇಜ್ ಮುಂಬೈನ ಅಂಧೇರಿಯಲ್ಲಿರುವ ಡಿಎಚ್​ಎಲ್​ ಕೇಂದ್ರಕ್ಕೆ ಬಂದಿದೆ ಎಂದು ಹೇಳಿದ್ದಾನೆ. ಆದರೆ, ತಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಕೊರಿಯರ್ ಜೊತೆ ಯಾವುದೇ ಸಂಪರ್ಕವಿಲ್ಲ ಎಂದು ಆಕೆ ಹೇಳಿದ್ದಾಳೆ. ಆಗ, ಫೋನ್ ಸಂಖ್ಯೆ ಪ್ಯಾಕೇಜ್‌ಗೆ ಲಿಂಕ್ ಆಗಿರುವುದರಿಂದ ಇದು ಸೈಬರ್ ಅಪರಾಧವಾಗಿರಬಹುದು ಎಂದು ಕರೆ ಮಾಡಿದವ ಹೇಳಿಕೊಂಡಿದ್ದಾನೆ. ಈ ವಿಷಯದ ಬಗ್ಗೆ ಸೈಬರ್ ಅಪರಾಧ ಸೆಲ್​ಗೆ ದೂರು ನೀಡುವಂತೆ ಆಕೆಯನ್ನು ಕೇಳಿಕೊಂಡಿದ್ದಾನೆ. ಆಕೆ ಪ್ರತಿಕ್ರಿಯಿಸುವ ಮೊದಲು, ಕರೆಯನ್ನು ಸಿಬಿಐ ಅಧಿಕಾರಿಯ ಸೋಗಿನಲ್ಲಿರುವ ವ್ಯಕ್ತಿಗೆ ವರ್ಗಾಯಿಸಲಾಗಿತ್ತು ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ.

ನಂತರ, ಮಹಿಳೆಯ ಗುರುತನ್ನು ದುರುಪಯೋಗಪಡಿಸಿಕೊಂಡ ಸೈಬರ್ ವಂಚಕರು ಆಕೆಯ ಮೇಲೆ ನಿಗಾ ಇಡುತ್ತಿದ್ದಾರೆ ಎಂದು ಹೇಳಿ, ಸ್ಥಳೀಯ ಪೊಲೀಸರನ್ನು ಸಂಪರ್ಕಿಸದಂತೆ ಅಥವಾ ಕಾನೂನು ಸಹಾಯ ಪಡೆಯದಂತೆ ಆಕೆಗೆ ಎಚ್ಚರಿಕೆ ನೀಡಿದ್ದಾರೆ. ಆಕೆಗೆ ಮಾಹಿತಿ ನೀಡಿದರೆ ಆಕೆಯ ಕುಟುಂಬವನ್ನು ಪ್ರಕರಣದಲ್ಲಿ ಸಿಲುಕಿಸುವುದಾಗಿಯೂ ಅವರು ಬೆದರಿಕೆ ಹಾಕಿದ್ದರು ಎಂದು ವರದಿ ಉಲ್ಲೇಖಿಸಿದೆ. ಹೀಗಾಗಿ ಭಯದಿಂದ ಮತ್ತು ತನ್ನ ಮಗನ ಮದುವೆ ಸಮೀಪಿಸುತ್ತಿದ್ದರಿಂದ ಹೆದರಿದ್ದ ಸಂತ್ರಸ್ತೆ ವಂಚಕರು ಹೇಳಿದ ರೀತಿಯಲ್ಲೇ ನಡೆದುಕೊಂಡಿದ್ದರು.

ಅದಾದ ನಂತರ ಕೆಲವು ದಿನಗಳ ಬಳಿಕ ಸ್ಕೈಪ್ ವಿಡಿಯೋ ಕರೆಯ ಮೂಲಕ ಸಂತ್ರಸ್ತೆಯನ್ನು ‘ಗೃಹಬಂಧನ’ಕ್ಕೆ ಒಳಪಡಿಸಲಾಯಿತು. ನಂತರ, ಸಿಬಿಐ ಅಧಿಕಾರಿ ಪ್ರದೀಪ್ ಸಿಂಗ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ರಾಹುಲ್ ಯಾದವ್ ಎಂಬ ಇನ್ನೊಬ್ಬ ವ್ಯಕ್ತಿಗೆ ಒಂದು ವಾರದ ಕಾಲ ಆಕೆಯನ್ನು ಮೇಲ್ವಿಚಾರಣೆ ಮಾಡಲು ನಿಯೋಜಿಸಿದ. ಈ ಸಮಯದಲ್ಲಿ, ಸಂತ್ರಸ್ತೆ ವರ್ಕ್ ಫ್ರಂ ಹೋಮ್​ನಲ್ಲಿದ್ದರು.

2024 ರ ಸೆಪ್ಟೆಂಬರ್ 23ರಂದು, ಆರ್‌ಬಿಐನ ಹಣಕಾಸು ಗುಪ್ತಚರ ಘಟಕ (ಎಫ್‌ಐಯು)ಕ್ಕೆ ಆಸ್ತಿಗಳನ್ನು ಘೋಷಿಸುವಂತೆ ಮಹಿಳೆಗೆ ಪ್ರದೀಪ್ ಸಿಂಗ್ ಸೂಚಿಸಿದ್ದ. ಅದರಂತೆ ಮಹಿಳೆ ನಡೆದುಕೊಂಡಿದ್ದರು. ನಂತರ ವಂಚಕರು ಹಂತಹಂತವಾಗಿ ಹಣ ವಸೂಲಿ ಮಾಡಿದ್ದರು.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ವಂಚಕರ ಸೂಚನೆಯಂತೆ ಸಂತ್ರಸ್ತೆ ತನ್ನ ಫಿಕ್ಸೆಡ್ ಡಿಪಾಸಿಟ್​​ಗಳನ್ನು ಹೊರತುಪಡಿಸಿ ಇತರ ಉಳಿತಾಯ ಹಣ 31.83 ಕೋಟಿ ರೂ.ಗಳನ್ನು 187 ವಹಿವಾಟುಗಳಲ್ಲಿ ವಂಚಕರಿಗೆ ವರ್ಗಾಯಿಸಿದ್ದಾಳೆ. 2025 ರ ಫೆಬ್ರವರಿ ಒಳಗೆ ಪರಿಶೀಲನೆ ಮಾಡಿದ ನಂತರ ಹಣವನ್ನು ಹಿಂತಿರುಗಿಸಲಾಗುವುದು ಎಂದು ಸಂತ್ರಸ್ತೆಗೆ ನಕಲಿ ತನಿಖಾ ಅಧಿಕಾರಿಗಳು ಭರವಸೆ ನೀಡಿದ್ದರು. ಅಲ್ಲದೆ, ಸಂತ್ರಸ್ತೆಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೂಡ ಕೊಟ್ಟಿದ್ದರು. ಆದರೆ, ಹಣವನ್ನು ವಾಪಸ್ ನೀಡಲು ವಂಚಕರು ಒಂದಲ್ಲ ಒಂದು ಅಡ್ಡಿ ಹೇಳುತ್ತಲೇ ಇದ್ದರು. ನಂತರ ಅನುಮಾನಗೊಂಡ ಸಂತ್ರಸ್ತೆ ಬೆಂಗಳೂರು ಪೂರ್ವ ಸೈಬರ್ ಕ್ರೈಮ್ ಪೊಲೀಸರಿಗೆ 2025ರ ನವೆಂಬರ್ 14 ರಂದು ದೂರು ನೀಡಿದ್ದರು. ಅದರಂತೆ ಎಫ್​ಐಆರ್ ದಾಖಲಿಸಿರುವ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಕೊಪ್ಪಳ: ಯಲಬುರ್ಗಾದಲ್ಲಿ ಮಹಿಳೆಗೆ ಮದ್ಯ ಸೇವನೆ ಮಾಡಿಸಿ ನಾಲ್ವರಿಂದ ಅತ್ಯಾಚಾರ

ಮಗನ ಮದುವೆ ಮತ್ತು ಇತರ ಕಾರಣಗಳಿಂದ ಹೆದರಿ ದೂರು ದಾಖಲಿಸುವುದು ವಿಳಂಬವಾಗಿದೆ ಎಂದು ಸಂತ್ರಸ್ತೆಯು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ