ರಾಜ್ಯದಲ್ಲಿ ಎಂಇಎಸ್ ಸಂಘಟನೆ ಸಂಪೂರ್ಣ ನಿಷೇಧಕ್ಕೆ ಆಗ್ರಹಿಸಿದ ಕನ್ನಡಪರ ಸಂಘಟನೆಗಳು: ನಾಳೆ ಬೆಂಗಳೂರಿನಲ್ಲಿ ಪ್ರತಿಭಟನೆ

| Updated By: Pavitra Bhat Jigalemane

Updated on: Dec 18, 2021 | 7:33 PM

ಲ್ಲರೂ ಒಮ್ಮತದ ನಿರ್ಧಾರ ತೆಗೆದುಕೊಂಡು ಬೆಳಗಾವಿ ಹೋಗುವುದರ ಕುರಿತು ತೀರ್ಮಾನ ಮಾಡುತ್ತೇವೆ. ಎಂಇಎಸ್ ಪುಂಡರನ್ನು ಬಗ್ಗು ಬಡಿಯಬೇಕು. ಇಲ್ಲವಾದರೆ ಇಡೀ ಕನ್ನಡಪರ ಸಂಘಟನೆಗಳು ಸುವರ್ಣಸೌಧ ಮುತ್ತಿಗೆ ಹಾಕುತ್ತೇವೆ ಎಂದು ಪ್ರವೀಣ್​ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಎಂಇಎಸ್ ಸಂಘಟನೆ ಸಂಪೂರ್ಣ ನಿಷೇಧಕ್ಕೆ ಆಗ್ರಹಿಸಿದ ಕನ್ನಡಪರ ಸಂಘಟನೆಗಳು: ನಾಳೆ ಬೆಂಗಳೂರಿನಲ್ಲಿ ಪ್ರತಿಭಟನೆ
ಪ್ರವೀಣ್ ಕುಮಾರ್​​ ಶೆಟ್ಟಿ
Follow us on

ಬೆಂಗಳೂರು: ಬೆಳಗಾವಿಯಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆಗೆ ಹಾನಿಗೊಳಿಸಿ ಪುಂಡಾಟ ಮೆರೆದಿದ್ದ ಎಂಇಎಸ್​ ವಿರುದ್ಧ ಕನ್ನಡ ಪರ ಸಂಘಟನೆ ಆಕ್ರೋಶಗೊಂಡಿದೆ. ಈ ಘಟನೆಯ ಕುರಿತು ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯ ಸರ್ಕಾರಕ್ಕೆ ಕನ್ನಡ ಪರ ಸಂಘಟನೆಗಳ ಮುಖಂಡರು ರಾಜ್ಯದಲ್ಲಿ ಎಂಇಎಸ್ ಸಂಘಟನೆ ಸಂಪೂರ್ಣ ನಿಷೇಧಕ್ಕೆ ಆಗ್ರಹಿಸಿದ್ದಾರೆ. ಎಂಇಎಸ್​ ಪುಂಡರು ಕನ್ನಡ ಬಾವುಟ ಸುಟ್ಟಿದ್ದಾರೆ, ರಾಯಣ್ಣ ಪ್ರತಿಮೆ ಭಗ್ನ ಮಾಡಿದ್ದಾರೆ. ಮನೆಗಳ ಮೇಲೆ ಕಲ್ಲೆಸೆದು ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ರೀತಿಯ ದುಷ್ಕೃತ್ಯವೆಸಗಿದ ಗೂಂಡಾಗಳನ್ನು ಬಂಧಿಸಿ ಕ್ರಮಕೈಗೊಳ್ಳಬೇಕು. ಜತೆಗೆ ಕನ್ನಡ ಪರ ಹೋರಾಟಗಾರರ ವಿರುದ್ಧದ ಮೊಕದ್ದಮೆ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕರವೇ ಅಧ್ಯಕ್ಷ ಪ್ರವೀಣ್​ ಶೆಟ್ಟಿ ಬೆಳಗಾವಿ ಕರ್ನಾಟಕದಲ್ಲಿ ಇದೆಯೇ, ಅಥವಾ ಎಲ್ಲಿಯೋ ಅನ್ನೋ ಅನುಮಾನ ಕಾಡುತ್ತಿದೆ. ಬೆಳಗಾವಿಯಲ್ಲಿ ನಮ್ಮ ಸರ್ಕಾರ ಮಹಾಮೇಳ ಮಾಡಿದ್ರೆ, ಎಂಇಎಸ್ ಪುಂಡರು ಪ್ರತಿಭಟನೆ ಮಾಡಿದ್ದಾರೆ. ಆಗ ನಮ್ಮ ಸರ್ಕಾರದವರು, ಪೊಲೀಸರು ಸುಮ್ಮನೆ ಇದ್ದರು. ಹೀಗಾಗೀ ನಮ್ಮವರು ಪ್ರತಿಮೆಗೆ ಮಸಿ ಬಳಿದರು. ಆದರೆ ನಮ್ಮವರನ್ನ ಜೈಲಿಗೆ ಕಳುಹಿಸಿದ್ದಾರೆ. ಗಡಿಯಲ್ಲಿ ಸರಿಯಾದ ವ್ಯವಸ್ಥೆ ಮಾಡಿಲ್ಲ. ಸರ್ಕಾರದವರು ಕನ್ನಡಿಗರನ್ನು ಬಗ್ಗು ಬಡಿಯುವ ಕೆಲಸ ಮಾಡ್ತಿದ್ದಾರೆ. ಶಿವಾಜಿ ಅವರ ಬಗ್ಗೆ ಸಿಟಿ ರವಿ ಪ್ರೀತಿ ತೋರಿಸುತ್ತಿದ್ದಾರೆ. ಹಾಗಾದರೆ ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ ಪ್ರೀತಿ ಇಲ್ವಾ? ಸಾ.ರಾ ಗೋವಿಂದ್, ವಾಟಾಳ್ ನಾಗರಾಜ್, ಕೋಡಿಹಳ್ಳಿ, ನಾರಾಯಣಗೌಡ ಎಲ್ಲರೂ ನಮಗೆ ಬೆಂಬಲ ನೀಡಿದ್ದಾರೆ. ಎಲ್ಲರೂ ಒಮ್ಮತದ ನಿರ್ಧಾರ ತೆಗೆದುಕೊಂಡು ಬೆಳಗಾವಿ ಹೋಗುವುದರ ಕುರಿತು ತೀರ್ಮಾನ ಮಾಡುತ್ತೇವೆ. ಎಂಇಎಸ್ ಪುಂಡರನ್ನು ಬಗ್ಗು ಬಡಿಯಬೇಕು. ಇಲ್ಲವಾದರೆ ಇಡೀ ಕನ್ನಡಪರ ಸಂಘಟನೆಗಳು ಸುವರ್ಣಸೌಧ ಮುತ್ತಿಗೆ ಹಾಕುತ್ತೇವೆ. ನಾಳೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಾಳೆ ಪ್ರತಿಭಟನೆ ನಡೆಸಲಿದ್ದೇವೆ. ಎಂಇಎಸ್, ಶಿವಸೇನೆ ಭೂತ ದಹನ ಮಾಡುತ್ತೇವೆ ಬಳಿಕ ಮೆರವಣಿಗೆಯಲ್ಲಿ ತೆರಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತೇವೆ. ಮೆರವಣಿಗೆ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ನೇತೃತ್ವದಲ್ಲಿ ನಡೆಯಲಿದೆ. ಮಾರ್ಗಮಧ್ಯೆ ಎಲ್ಲಾ ಜಿಲ್ಲೆಗಳ ಹೋರಾಟಗಾರರು ಸೇರಿಕೊಳ್ಳುತ್ತಾರೆ. ನಾವೆಲ್ಲರೂ ಒಗ್ಗಟ್ಟಾಗಿ ನಾಳೆಯೇ ಬೆಳಗಾವಿಗೆ ಹೊರಾಡುತ್ತಿದ್ದೇವೆ ಎಂದು ಬೆಂಗಳೂರಲ್ಲಿ ಕರವೇ ಅಧ್ಯಕ್ಷ ಪ್ರವೀಣ್​ ಕುಮಾರ್​ ಶೆಟ್ಟಿ ಹೇಳಿದ್ದಾರೆ.

ಈ ಬಗ್ಗೆ ಕುರುಬೂರು ಶಾಂತ್ ಕುಮಾರ್ ಹೇಳಿಕೆ ನೀಡಿದ್ದಾರೆ
ನೆಲ,ಜಲ,ನಾಡಿನ ವಿಚಾರದಲ್ಲಿ ದೌರ್ಜನ್ಯ ಆದ್ರೆ ನಾವು ಸುಮ್ಮನೆ ಇರೋದಿಲ್ಲ. ರಾಜ್ಯದಲ್ಲಿ ಆರಿಸಿ, ಕೇಂದ್ರ ಸರ್ಕಾರಕ್ಕೆ ಕಳಿಸಿರೋ ಯಾವ ಎಂಪಿ ಗಳು ಮಾತಾಡುತ್ತಿಲ್ಲ. ಕಾವೇರಿ, ಮೇಕೆದಾಟು, ಜಿಎಸ್ ಟಿ ಬಗ್ಗೆ ಮಾತಾಡಿಲ್ಲ. ಈಗ ಎಂಇಎಸ್ ಪುಂಡರ ಬಗ್ಗೆನೂ ಮಾತನಾಡುತ್ತಿಲ್ಲ. ನಮ್ಮ ಜತೆಗೆ ಇನ್ನು ಅನೇಕ ಸಂಘಟನೆಗಳು ಸೇರಿ ಹೋರಾಡಬೇಕು ಗೋಕಾಕ್ ಚಳುವಳಿಯ ರೀತಿಯಲ್ಲಿ ನಾವು ಈ ಹೋರಾಟವನ್ನು ಒಗ್ಗಟ್ಟಾಗಿ ಮಾಡಬೇಕು. ಕನ್ನಡಿಗರ ಮೇಲೆ ಆಗಿರುವ ಮೊಕದ್ದಮೆಗಳನ್ನು ಸರ್ಕಾರ ವಾಪಸ್ ಪಡೆಯಬೇಕು. ಎಂಇಎಸ್ ಪುಂಡರಿಗೆ ರಾಜ್ಯದಲ್ಲಿ ಅವಕಾಶ ಕೊಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿ ಭಾಗಿಯಾದ ಸಂಘಟನೆ ಹಾಗೂ ಅಧ್ಯಕ್ಷರು

1.ಕುರುಬೂರು ಶಾಂತಕುಮಾರ್, ಕರ್ನಾಟಕ ರಾಜ್ಯ ಕಬ್ಬು ಬೆಳೆಗರಾರ ರಾಜ್ಯಾಧ್ಯಕ್ಷ

2.ಹರೀಶ್ ಕುಮಾರ್, ಕರ್ನಾಟಕ ರಣಧೀರ ಪಡೆ ರಾಜ್ಯಾಧ್ಯಕ್ಷ

3.ಪಿ. ಸಿ ರಾವ್, ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ

4.ಕೆಜಿ ಕನ್ನಡ ಪ್ರಕಾಶ್, ಕನ್ನಡಿಗರ ರಕ್ಷಣಾ ವೇದಿಕೆ ಅಧ್ಯಕ್ಷ

5.ಮಹೇಶ್ ಕೆ ಪಿ, ಕಾನೂನು ಮತ್ತು ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆ

6.ಡಾ. ರವಿ ಶೆಟ್ಟಿ ಬೈಂದೂರು, ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಅಧ್ಯಕ್ಷ

7.ವಿಜಯ್ ಕುಮಾರ್ ಎಸ್, ಮಾತೃಭೂಮಿ ಯುವಸೇನಾ ರಾಜ್ಯಾಧ್ಯಕ್ಷ

8.ಗಿರಿಜಮ್ಮ, ಅಖಿಲ ಭಾರತ ಕಾರ್ಮಿಕ ಹಿತರಕ್ಷಣ ವೇದಿಕೆ ಅಧ್ಯಕ್ಷೆ

9.ಪ್ರಕಾಶ್ ಮತ್ತಿಹಳ್ಳಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ

10.ಶಿವಕುಮಾರ್, ಕರ್ನಾಟಕ ವಿದ್ಯಾರ್ಥಿ ವೇದಿಕೆ ರಾಜ್ಯಾಧ್ಯಕ್ಷ

11.ಮಂಗಳ ಶಂಕರ್, ಅಖಿಲ ಭಾರತ ಕಾರ್ಮಿಕ ಕ್ರಿಯಾ ಹಿತರಕ್ಷಣ ವೇದಿಕೆ ಅಧ್ಯಕ್ಷೆ

12.ಚಂದ್ರಶೇಖರ್ ಶೆಟ್ಟಿ, ಹೋಟೆಲ್ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ

Published On - 7:32 pm, Sat, 18 December 21