ಬೆಂಗಳೂರು: ಕಿಡ್ನಾಪ್ ಮಾಡಿ ಲಕ್ಷ ಲಕ್ಷ ಹಣ ಕೀಳುತ್ತಿದ್ದ ನಕಲಿ ಅಧಿಕಾರಿಗಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಹೈದ್ರಾಬಾದ್ ಮೂಲದ ಪ್ರಸಾದ್, ಮಹರಾಷ್ಟ್ರದ ಸಿದ್ಧಾರ್ಥ್, ನಾಗುರಾವ್, ಕಿರಣ್, ಬಾನುದಾಸ್ ಬಂಧಿತರು. ಹೈದ್ರಾಬಾದ್ ಪೊಲೀಸರೆಂದು ಹೇಳಿಕೊಂಡು ದೊಡ್ಡ ದೊಡ್ಡವರನ್ನ ಕಿಡ್ನಾಪ್ ಮಾಡುತ್ತಿದ್ದರು. ವಸಂತ ಶಿವರೆಡ್ಡಿ ಅನ್ನೋರನ್ನ ಕಿಡ್ನಾಪ್ ಮಾಡಿದ್ದ ಆರೋಪಿಗಳು, ವಸಂತ, ಶಿವರೆಡ್ಡಿಗೆ ಹೈದ್ರಾಬಾದ್ ಮೂಲದ ಹರೀಶ್ ಎಂಬಾತ ಪರಿಚಯ ಆಗಿತ್ತು. ಹೈದ್ರಬಾದ್ಗೆ ಕೆಲಸವೊಂದರ ವಿಚಾರವಾಗಿ ಹೋದಾಗ ಪರಿಚಯವಾಗಿತ್ತು. ಜಮೀನು ವಿಚಾರವಾಗಿ ಆರೋಪಿಯನ್ನ ಪರಿಚಯ ಮಾಡಿಕೊಂಡಿದ್ದ ವಸಂತ, ಶಿವರೆಡ್ಡಿ, ಇತ್ತೀಚೆಗೆ ಬೆಂಗಳೂರಿಗೆ ಬಂದು ಮೀಟ್ ಮಾಡಲು ಆರೋಪಿ ಹರೀಶ್ ಕರೆದಿದ್ದ. ಕಡಿಮೆ ರೇಟ್ಗೆ ಜಮೀನಿದೆ ಅದ್ರ ಬಗ್ಗೆ ಮಾತನಾಡಬೇಕು ಅಂತಾ ಕರೆಸಿಕೊಂಡಿದ್ದ. ದೇವನಹಳ್ಳಿ ಕಡೆ ಕರೆಸಿಕೊಂಡು ಹೈದ್ರಬಾದ್ ಕಡೆ ಕರೆದೊಯ್ದು ಕಿಡ್ನಾಪ್ ಮಾಡಲಾಗಿದೆ.
ಕಿಡ್ನಾಪ್ ಮಾಡಿ ಶಿವಾರೆಡ್ಡಿಯನ್ನ ನಗ್ನ ಮಾಡಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ವಿಡಿಯೋ ಮಾಡಿ 50ಲಕ್ಷ ಕೊಡುವಂತೆ ತಾಕೀತು ಮಾಡಿದ್ದು, ಹಣ ತರುವಂತೆ ವಸಂತಳನ್ನ ಬೆಂಗಳೂರಿಗೆ ಕಳಿಸಿದ್ದಾರೆ. ಸಾಲ ಮಾಡಿ ಹನ್ನೊಂದು ಲಕ್ಷ ಸಮೇತ ಹೈದ್ರಾಬಾದ್ಗೆ ಹೋಗಿ ಆರೋಪಿಗಳಿಗೆ ವಸಂತಾ ನೀಡಿದ್ದಾಳೆ. ನಂತರ ಇಬ್ಬರನ್ನೂ ಬಿಟ್ಟು ಕಳಿಸಿದ್ರು. ಈ ಸಂಬಂಧ ವಸಂತ, ಶಿವಾರೆಡ್ಡಿ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದು, ಹೈದರಾಬಾದ್ನ ಜೂಬ್ಲಿ ಹಿಲ್ಸ್ ಕ್ಲಬ್ ಮೇಲೆ ದಾಳಿ ನಡೆಸಿ ಆರೋಪಿಗಳ ಬಂಧನ ಮಾಡಲಾಗಿದೆ. ಆರೋಪಿಗಳ ಬಳಿ ನಕಲಿ ಪೊಲೀಸ್ ಐ.ಡಿ ಕಾರ್ಡ್ಗಳು ಪತ್ತೆಯಾಗಿವೆ. ಈ ಹಿಂದೆ ಆಂದ್ರದಲ್ಲಿ ಶಾಸಕ ಅಭ್ಯರ್ಥಿಯೊಬ್ಬರನ್ನೂ ಕಿಡ್ನಾಪ್ ಮಾಡಿದ್ದರು. ಸದ್ಯ ಆರೋಪಿಗಳನ್ನ ಬಂಧಿಸಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಬೆಳಗಾವಿಯ ಕ್ಯಾಂಪ್ನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ನ ಬರ್ಬರ ಕೊಲೆ
ಬೆಳಗಾವಿ: ರಾತ್ರಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ (Murder) ಘಟನೆ ಬೆಳಗಾವಿಯ (Belagavi) ಕ್ಯಾಂಪ್ ಪ್ರದೇಶದಲ್ಲಿ ನಡೆದಿದೆ. ರಿಯಲ್ ಎಸ್ಟೇಟ್ ಏಜೆಂಟ್ ಸುಧೀರ್ ಕಾಂಬಳೆ(57) ಮೃತ ದುರ್ದೈವಿ. ಸುಧೀರ್ ಕಾಂಬಳೆ ದುಬೈನಲ್ಲಿ ವಾಸ ಮಾಡುತ್ತಿದ್ದು, 2 ವರ್ಷದ ಹಿಂದೆ ಕೊರೊನಾ ಹಿನ್ನೆಲೆ ಬೆಳಗಾವಿಗೆ ಬಂದಿದ್ದರು. ನಿನ್ನೆ ರಾತ್ರಿ ಹೆಂಡತಿ, ಮಕ್ಕಳು ಪಕ್ಕದ ರೂಮ್ನಲ್ಲಿ ಮಲಗಿದ್ದಾಗಲೇ ಆರೋಪಿಗಳು ಮನೆಗೆ ನುಗ್ಗಿ ಹತ್ಯೆಗೈದು ಪರಾರಿಯಾಗಿದ್ದರು. ದುಷ್ಕರ್ಮಿಗಳು ಸುದೀರ್ನ ಹೊಟ್ಟೆ, ಕತ್ತು, ಕೈ, ಮುಖಕ್ಕೆ ಇರಿದು ಹತ್ಯೆಗೈದಿದ್ದಾರೆ. ಸ್ಥಳಕ್ಕೆ ಕ್ಯಾಂಪ್ ಪೊಲೀಸರು, ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
2 ವರ್ಷದ ಮಗು ಜೊತೆ ಮಲಪ್ರಭಾ ನದಿಗೆ ಹಾರಿರುವ ತಾಯಿ
ಬೆಳಗಾವಿ: 2 ವರ್ಷದ ಮಗು ಜೊತೆ ತಾಯಿ ಮಲಪ್ರಭಾ ನದಿಗೆ ಹಾರಿರುವ ಘಟನೆ ರಾಮದುರ್ಗದ ವೆಂಕಟೇಶ್ವರ ದೇಗುಲ ಬಳಿ ನಡೆದಿದೆ. ಓಬಳಾಪುರ ಗ್ರಾಮದ ರುದ್ರವ್ವ ಬಸವರಾಜ ಬನ್ನೂರ (30) , ಶಿವಲಿಂಗಪ್ಪ (2), ಜೊತೆ ಮಲಪ್ರಭಾ ನದಿಯ ಹಳೆ ಸೇತುವೆ ಮೇಲಿಂದ ನದಿಗೆ ಹಾರಿದ್ದಾಳೆ. ಮಹಿಳೆ ನದಿಯ ದಡದಲ್ಲಿ ಚಪ್ಪಲಿ ಬಿಟ್ಟು ಮಗುವಿನೊಂದಿಗೆ ನದಿಗೆ ಹಾರಿದ್ದು, ಚಪ್ಪಲಿ ಪತ್ನಿಯದ್ದೇ ಎಂದು ಪತಿ ಬಸವರಾಜ ಬನ್ನೂರ ಗುರುತಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರಿಂದ ತಾಯಿ ಮಗುವಿಗಾಗಿ ಹುಡುಕಾಟ ನಡೆಯುತ್ತಿದೆ. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:46 pm, Sat, 17 September 22