319 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನ.15ರಂದು ಪೂರ್ವಭಾವಿ ಪರೀಕ್ಷೆ: ಅಕ್ರಮ ತಡೆಗೆ ಹೇಗಿದೆ ಗೊತ್ತಾ ಕೆಪಿಎಸ್​​ಸಿ ಮಾಸ್ಟರ್​​ ಪ್ಲ್ಯಾನ್​​?

ನವೆಂಬರ್ 15ರಂದು ನಡೆಯಲಿರುವ 319 ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಅಕ್ರಮ ತಡೆಗೆ ಸಿಸಿಟಿವಿ, ಜಾಮರ್ ಹಾಗೂ ಒಎಂಆರ್ ಶೀಟ್‌ನಲ್ಲಿ 5ನೇ ವೃತ್ತ ಸೇರಿದಂತೆ ಮಹತ್ವದ ಬದಲಾವಣೆಗಳನ್ನು ತರಲಾಗಿದೆ. ಹಿಂದಿನ ಲೋಪದೋಷಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿರುವ ಕೆಪಿಎಸ್‌ಸಿ, ಈ ಬಾರಿ ಸಂಪೂರ್ಣ ಪಾರದರ್ಶಕವಾಗಿ ಪರೀಕ್ಷೆ ನಡೆಸುವ ಭರವಸೆ ನೀಡಿದೆ.

319 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನ.15ರಂದು ಪೂರ್ವಭಾವಿ ಪರೀಕ್ಷೆ: ಅಕ್ರಮ ತಡೆಗೆ ಹೇಗಿದೆ ಗೊತ್ತಾ ಕೆಪಿಎಸ್​​ಸಿ ಮಾಸ್ಟರ್​​ ಪ್ಲ್ಯಾನ್​​?
ಕೆಪಿಎಸ್​​ಸಿ ಕಚೇರಿ
Edited By:

Updated on: Nov 11, 2026 | 11:52 AM

ಬೆಂಗಳೂರು, ನವೆಂಬರ್​ 11: ಕರ್ನಾಟಕ ಲೋಕಸೇವಾ ಆಯೋಗದ (KPSC) ಪರೀಕ್ಷಾ ಅಕ್ರಮ, ಗೊಂದಲಗಳ ನಡುವೆಯೇ ಮತ್ತೊಂದು ಮಹತ್ವದ ಪರೀಕ್ಷೆಗೆ ಕೌಂಟ್‌ಡೌನ್ ಶುರುವಾಗಿದೆ. 319 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನವೆಂಬರ್ 15ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಮುಂದೂಡಿಕೆ ಆಗುತ್ತಾ? ವೇಳಾಪಟ್ಟಿ ಬದಲಾಗುತ್ತಾ? ಎಂಬ ಅಭ್ಯರ್ಥಿಗಳ ಗೊಂದಲಕ್ಕೂ ತೆರೆ ಬಿದ್ದಿದ್ದು, ನಿಗದಿತ ವೇಳಾಪಟ್ಟಿಯಂತೆಯೇ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ, ವ್ಯಕ್ತಿತ್ವ ಪರೀಕ್ಷೆ ಹಾಗೂ ಫಲಿತಾಂಶ ಪ್ರಕಟಣೆ ನಡೆಯಲಿದೆ ಎಂದು ಕೆಪಿಎಸ್‌ಸಿ ಸ್ಪಷ್ಟಪಡಿಸಿದೆ.

ಪರೀಕ್ಷಾ ಅಕ್ರಮ ತಡೆಗೆ ಏನೆಲ್ಲ ಕ್ರಮ?

ಈ ಬಾರಿ ಹಿಂದಿನ ರೀತಿ ಯಾವುದೇ ಘಟನೆ ಮರುಕಳಿಸದಂತೆ ಕೆಪಿಎಸ್‌ಸಿ ಹಲವು ಕ್ರಮಗಳನ್ನು ಕೈಗೊಂಡಿದೆ. ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಕೇವಲ 24 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗ್ತಿದೆ. ವಿಶೇಷ ಅಂದ್ರೆ, ಇದೇ ಮೊದಲ ಬಾರಿಗೆ ಪ್ರತಿ ಕೊಠಡಿಯಲ್ಲಿ ಇಬ್ಬರು ಮೇಲ್ವಿಚಾರಕರನ್ನು ನಿಯೋಜಿಸಲಾಗ್ತಿದೆ. ಇದರ ಜೊತೆಗೆ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ, ಮೊಬೈಲ್ ಸಿಗ್ನಲ್ ಜಾಮರ್ ಅಳವಡಿಕೆ ಮಾಡಲಾಗ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಜಿಲ್ಲಾಧಿಕಾರಿ ಕಚೇರಿಯಿಂದಲೇ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರಶ್ನೆಪತ್ರಿಕೆಗಳನ್ನೂ ಜಿಲ್ಲಾಡಳಿತದ ಮೂಲಕವೇ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಾಗುತ್ತೆ. ಪರೀಕ್ಷೆ ಮುಗಿದ ತಕ್ಷಣ ಒಎಂಆರ್ ಶೀಟ್‌ಗಳನ್ನು ಸ್ಕ್ಯಾನ್ ಮಾಡಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲು ಕೆಪಿಎಸ್‌ಸಿ ಸಿದ್ಧತೆ ಮಾಡಿಕೊಂಡಿದೆ.

Loading...

ಇದನ್ನೂ ಓದಿ: ರೇಷನ್​ ಕಾರ್ಡ್​ದಾರರಿಗೆ ಸಿಹಿ ಸುದ್ದಿ: ಇ-ಕೆವೈಸಿ ಮಾಡಿಸಲು ಗಡುವು ಮತ್ತೆ ವಿಸ್ತರಣೆ

ಒಎಂಆರ್ ಶೀಟ್‌ನಲ್ಲಿ ಮಹತ್ವದ ಬದಲಾವಣೆ

ಇನ್ನು ಈ ಬಾರಿಯ ಪರೀಕ್ಷೆಯಲ್ಲಿ ಒಎಂಆರ್ ಶೀಟ್‌ನ 5ನೇ ವೃತ್ತವೇ ವಿಶೇಷ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಒಎಂಆರ್ ಶೀಟ್‌ನಲ್ಲಿ ನಾಲ್ಕು ಆಯ್ಕೆಗಳಿರುತ್ತವೆ. ಆದರೆ ಈ ಬಾರಿ ಐದನೇ ವೃತ್ತವನ್ನೂ ಪರಿಚಯಿಸಲಾಗಿದೆ. ಅಭ್ಯರ್ಥಿಗಳಿಗೆ ಯಾವುದಾದರೂ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೆ, ಕೊನೆಯ ಬೆಲ್ ನಂತರ ನೀಡುವ ಹೆಚ್ಚುವರಿ ಐದು ನಿಮಿಷಗಳ ಅವಧಿಯಲ್ಲಿ ಐದನೇ ವೃತ್ತವನ್ನು ಶೇಡ್ ಮಾಡಬೇಕು. ಉತ್ತರ ಗೊತ್ತಿಲ್ಲದ ಪ್ರಶ್ನೆಗೆ ನಾಲ್ಕು ವೃತ್ತಗಳನ್ನು ಖಾಲಿ ಬಿಟ್ಟು ಐದನೇ ವೃತ್ತ ಶೇಡ್ ಮಾಡಿದರೆ ಯಾವುದೇ ಅಂಕ ಕಡಿತವಾಗುವುದಿಲ್ಲ. ಆದರೆ ತಪ್ಪು ಉತ್ತರವನ್ನು ಗುರುತಿಸಿದರೆ ಮಾತ್ರ ನೆಗೆಟಿವ್ ಮಾರ್ಕ್ಸ್ ಅನ್ವಯವಾಗಲಿದೆ. ಒಎಂಆರ್ ಶೀಟ್ ತಿದ್ದುಪಡಿ ಆಗುತ್ತಿದೆ ಎಂಬ ಅಭ್ಯರ್ಥಿಗಳ ಅನುಮಾನ ನಿವಾರಣೆ ಮತ್ತು ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಹಿಂದಿನ ಲೋಪದೋಷಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿರುವ ಕೆಪಿಎಸ್‌ಸಿ, ಈ ಬಾರಿ ಸಂಪೂರ್ಣ ಪಾರದರ್ಶಕವಾಗಿ ಪರೀಕ್ಷೆ ನಡೆಸುವ ಭರವಸೆ ನೀಡಿದೆ. ಅಲ್ಲದೆ 2027ರ ಜೂನ್ ವೇಳೆಗೆ ಆಯ್ಕೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವ ಗುರಿ ಹೊಂದಿದೆ. ಈ ಎಲ್ಲಾ ಕ್ರಮಗಳ ನಡುವೆ ಪರೀಕ್ಷೆ ಎಷ್ಟರಮಟ್ಟಿಗೆ ಪಾರದರ್ಶಕವಾಗಿ ನಡೆಯಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us