ಕೆಪಿಎಸ್​​ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಎಎಸ್​ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸಿಎಂ ಡಿ.ಕೆ. ಶಿವಕುಮಾರ್ ಅನುಮತಿ

ರಾಜ್ಯದ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಭಾಗಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ಅಭಿಯೋಜನೆಗೆ ಸಿಎಂ ಡಿ.ಕೆ. ಶಿವಕುಮಾರ್ ಅನುಮತಿ ನೀಡಿದ್ದಾರೆ. ಭ್ರಷ್ಟಾಚಾರ, ಮೌಲ್ಯಮಾಪನ ಅಕ್ರಮ ಆರೋಪಗಳ ಬಗ್ಗೆ ತನಿಖಾ ಸಂಸ್ಥೆಗಳು ಸಾಕ್ಷ್ಯಾಧಾರ ಕಲೆಹಾಕಿದ್ದು, ಅಕ್ರಮ ಹಣಕಾಸು ವ್ಯವಹಾರ ನಡೆದಿದ್ದು ಬೆಳಕಿಗೆ ಬಂದಿದೆ. ಈ ನಿರ್ಧಾರದಿಂದ ತನಿಖೆಗೆ ಹೊಸ ವೇಗ ಸಿಕ್ಕಿದೆ.

ಕೆಪಿಎಸ್​​ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಎಎಸ್​ ಅಧಿಕಾರಿ ಜ್ಞಾನೇಂದ್ರ ಕುಮಾರ್  ವಿರುದ್ಧ ಪ್ರಾಸಿಕ್ಯೂಷನ್‌ಗೆ ಸಿಎಂ ಡಿ.ಕೆ. ಶಿವಕುಮಾರ್ ಅನುಮತಿ
ಸಾಂದರ್ಭಿಕ ಚಿತ್ರ
Edited By:

Updated on: Oct 24, 2026 | 1:00 PM

ಬೆಂಗಳೂರು, ಅ.24: ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಬೃಹತ್ ನಿರ್ಧಾರ ಕೈಗೊಂಡಿದೆ. ಈ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಹಿರಿಯ ಐಎಎಸ್ (IAS) ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಸಂಬಂಧ ಪ್ರಾಸಿಕ್ಯೂಷನ್‌ಗೆ ಅಧಿಕೃತ ಸಮ್ಮತಿ ಸೂಚಿಸಿ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗ ಮೂಲಕ ನಡೆದ ಪಶುವೈದ್ಯಕೀಯ ಇಲಾಖೆಯ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಮೌಲ್ಯಮಾಪನ ಅಕ್ರಮ ಹಾಗೂ ಅಕ್ರಮ ಹಣಕಾಸು ವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಅರ್ಹ ಅಭ್ಯರ್ಥಿಗಳನ್ನು ಬದಿಗೊತ್ತಿ ಅಕ್ರಮವಾಗಿ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ದೂರನ್ನಾಧರಿಸಿ ತನಿಖೆ ಆರಂಭಿಸಲಾಗಿತ್ತು.

ಹಗರಣದ ತನಿಖೆ ನಡೆಸಿದ ತನಿಖಾ ಸಂಸ್ಥೆಗಳು, ಆಡಳಿತಾತ್ಮಕವಾಗಿ ಪ್ರಮುಖ ಹುದ್ದೆಯಲ್ಲಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಪಾತ್ರದ ಬಗ್ಗೆ ಮಹತ್ವದ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದವು. ಈ ಹಿಂದೆ ಕೆಪಿಎಸ್‌ಸಿ ಹಗರಣಗಳನ್ನು ಮುಚ್ಚಿಹಾಕಲು ಮತ್ತು ತನಿಖೆಯನ್ನು ಹಾದಿತಪ್ಪಿಸಲು ಕೆಲವು ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿರೋಧ ಪಕ್ಷಗಳು ನಿರಂತರವಾಗಿ ಆರೋಪಿಸುತ್ತಾ ಬಂದಿದ್ದವು.

ಸಾಕ್ಷ್ಯಾಧಾರಗಳು ಲಭ್ಯವಾದ ಹಿನ್ನೆಲೆಯಲ್ಲಿ, ಐಎಎಸ್ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಮತ್ತು ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಸಕ್ಷಮ ಪ್ರಾಧಿಕಾರವಾದ ಸರ್ಕಾರದ ಅನುಮತಿ ಅಗತ್ಯವಾಗಿತ್ತು. ಇದೀಗ ಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ತನಿಖಾ ಸಂಸ್ಥೆಗಳಿಗೆ ತನಿಖೆ ಮುಂದುವರಿಸಲು ಹಸಿರು ನಿಶಾನೆ ತೋರಿದ್ದಾರೆ.

ಇದನ್ನೂ ಓದಿ: ಹಗರಣ ಬೆನ್ನಲ್ಲೇ ಕೆಪಿಎಸ್​​​​​​​​​​​​​​​ಸಿ ವೆಬ್‌ಸೈಟ್ ಬದಲಾವಣೆ :ಇಲ್ಲಿದೆ ಹೊಸ ಪೋರ್ಟಲ್ ಲಿಂಕ್

ತನಿಖಾ ವರದಿ ಹಾಗೂ ದೋಷಾರೋಪ ಪಟ್ಟಿ

ಅರ್ಹ ಅಭ್ಯರ್ಥಿಗಳಿಗೆ ಕಡಿಮೆ ಅಂಕ ನೀಡಿ, ಹಣ ನೀಡಿದ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ತಿದ್ದಿ ಅಂಕ ಹೆಚ್ಚಿಸಲಾಗಿದೆ ಎಂಬ ಗಂಭೀರ ಆರೋಪ ದೋಷಾರೋಪ ಪಟ್ಟಿಯಲ್ಲಿದೆ. ಕೆಪಿಎಸ್‌ಸಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಪ್ರಕ್ರಿಯೆಗಳ ದುರ್ಬಳಕೆ ಹಾಗೂ ಅಕ್ರಮಕ್ಕೆ ಆಡಳಿತಾತ್ಮಕ ರಕ್ಷಣೆ ನೀಡಿದ ಆರೋಪದ ಮೇಲೆ ಇವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಈ ಪ್ರಕರಣದಲ್ಲಿ ಕೆಪಿಎಸ್‌ಸಿಯ ಪರೀಕ್ಷಾ ವಿಭಾಗದ ಕೆಲ ವಿಷಯ ತಜ್ಞರು ಹಾಗೂ ಮೌಲ್ಯಮಾಪಕರು ಭಾಗಿಯಾಗಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
Loading...
Unable to load recommendations.
Follow Us