
ಬೆಂಗಳೂರು, ನ.25: ರಾಜಧಾನಿಯಲ್ಲಿ ಐಟಿ-ಬಿಟಿ ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ನಿರ್ಣಾಯಕ ಮತ್ತು ಅನಿರ್ದಿಷ್ಟಾವಧಿ ಹೋರಾಟಕ್ಕೆ ಸಜ್ಜಾಗಿದೆ. ಡಿಸೆಂಬರ್ 12ರಿಂದ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸುವುದಾಗಿ ಕರವೇ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಘೋಷಿಸಿದ್ದಾರೆ. ಬೆಂಗಳೂರಿನ ಗಾಂಧಿನಗರದ ಜಯಾನ್ ಹೋಟೆಲ್‌ನಲ್ಲಿ ಇಂದು (ನವೆಂಬರ್ 25) ನಾರಾಯಣ ಗೌಡ ನೇತೃತ್ವದಲ್ಲಿ ಹೋರಾಟದ ಪೂರ್ವಭಾವಿ ಸಭೆ ನಡೆಯಿತು.
800ಕ್ಕೂ ಹೆಚ್ಚು ಐಟಿ ಸಂಸ್ಥೆಗಳಿಂದ ಮಾಹಿತಿ ಸಂಗ್ರಹ:
ಸಭೆಯ ಬಳಿಕ ಮಾತನಾಡಿದ ನಾರಾಯಣ ಗೌಡ, “ನಮ್ಮ ಪ್ರತಿಜ್ಞೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ನವೆಂಬರ್ 2ರಿಂದ ನಮ್ಮ 10 ತಂಡಗಳು ಸುಮಾರು 800ಕ್ಕೂ ಹೆಚ್ಚು ಐಟಿ ಉದ್ಯಮಗಳಿಗೆ ತೆರಳಿ ಒಟ್ಟು ಉದ್ಯೋಗಗಳು, ಅದರಲ್ಲಿ ಕನ್ನಡಿಗರ ಸಂಖ್ಯೆ ಹಾಗೂ ವಿವಿಧ ಹಂತಗಳಲ್ಲಿ ಎಷ್ಟು ಕನ್ನಡಿಗರಿದ್ದಾರೆ ಎಂಬುದರ ಲೆಕ್ಕ ಕೇಳುವ ಆಂದೋಲನ ಆರಂಭಿಸಿವೆ. ನಾನೂ ಹಲವು ಐಟಿ ಪಾರ್ಕ್‌ಗಳಿಗೆ ಭೇಟಿ ನೀಡಿ 40–50 ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳೊಂದಿಗೆ ಗಂಟೆಗಟ್ಟಲೆ ಚರ್ಚಿಸಿದ್ದೇನೆ” ಎಂದು ವಿವರಿಸಿದರು.
ಇದನ್ನು ಸರ್ಕಾರ ಮಾಡಬೇಕಿತ್ತು; ಆದರೆ ಸರ್ಕಾರ ಮರೆತು ಕುಳಿತಿದೆ. ಅಂಕಿಅಂಶ ಸಂಗ್ರಹಿಸಲು ಕಾರ್ಮಿಕ ಇಲಾಖೆ ಪತ್ರ ಬರೆದು ಅನುಮತಿ ಕೇಳಿದರೂ ಸರ್ಕಾರ ನೀಡಿಲ್ಲ. ಕಂಪನಿಗಳಿಗೆ ಭೇಟಿ ನೀಡಿದಾಗ ಕೇವಲ ಶೇ. 10ರಿಂದ 18ರಷ್ಟು ಮಾತ್ರ ಕನ್ನಡಿಗರಿಗೆ ಉದ್ಯೋಗ ಇರುವುದು ಗಮನಕ್ಕೆ ಬಂದಿದೆ. ಬೇರೆ ರಾಜ್ಯಗಳಲ್ಲಿ ಸ್ಥಳೀಯರಿಗೆ ಶೇ. 80ರಷ್ಟು ಅವಕಾಶವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಐಟಿ ಕಂಪನಿಗಳು ಮಾಹಿತಿ ನೀಡದೆ ಇದ್ದರೆ ಅಥವಾ ನಮ್ಮ ಚಳುವಳಿ ವಿರುದ್ಧ ನಿಂತರೆ ಅಲ್ಲಿಯೇ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಇ.ಡಿ ಬೆನ್ನಲ್ಲೇ ಎಸ್ಐಟಿಯಿಂದಲೂ ಚಾರ್ಜ್ಶೀಟ್ ಸಲ್ಲಿಕೆ
ಡಿ.11ಕ್ಕೆ ಬೆಳಗಾವಿ ಅಧಿವೇಶನ ಅಂತ್ಯ – ಡಿ.12ಕ್ಕೆ ಬೃಹತ್ ರ್ಯಾಲಿ; ಮೋಹನ್‌ದಾಸ್ ಪೈಗೆ ತಿರುಗೇಟು:
ಡಿಸೆಂಬರ್ 11ಕ್ಕೆ ಬೆಳಗಾವಿ ಅಧಿವೇಶನ ಮುಗಿಯಲಿದ್ದು, ಡಿಸೆಂಬರ್ 12ರಂದು ನ್ಯಾಷನಲ್ ಕಾಲೇಜ್ ಮೈದಾನದಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ರ್ಯಾಲಿ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯದ 31 ಜಿಲ್ಲೆಗಳ ಜಿಲ್ಲಾ ಕೇಂದ್ರ ಹಾಗೂ ತಾಲೂಕುಗಳಿಂದ ಬಸ್, ರೈಲುಗಳ ಮೂಲಕ ಕಾರ್ಯಕರ್ತರು ಬೆಂಗಳೂರಿಗೆ ಆಗಮಿಸಲಿದ್ದು, ಪ್ರತಿ ಜಿಲ್ಲೆಯಿಂದ ಸುಮಾರು 30,000 ಕಾರ್ಯಕರ್ತರು ಮತ್ತು ಬೆಂಗಳೂರು ವಿಧಾನಸಭಾ ಕ್ಷೇತ್ರಗಳಿಂದ 20–25 ಸಾವಿರ ಜನರನ್ನು ರ್ಯಾಲಿಗೆ ಸೇರಿಸಲು ನಿರ್ಧರಿಸಲಾಗಿದೆ. ಕಾಯ್ದೆ ಜಾರಿಯಾಗುವವರೆಗೂ ಹೋರಾಟ ನಿಲ್ಲದು ಎಂದು ತಿಳಿಸಿದರು. ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದರೆ “ನೂರು ಮೋಹನ್‌ದಾಸ್ ಪೈ ಬಂದರೂ ಏನೂ ಮಾಡಲಾಗಲ್ಲ, ರಾಜ್ಯ ಬಿಟ್ಟು ಹೋಗಲ್ಲ ಅವರು” ಎಂದು ನಾರಾಯಣ ಗೌಡ ಖಡಕ್ ತಿರುಗೇಟು ನೀಡಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ