ದೇಶದ ಮೊದಲ ‘ಸಸ್ಟೈನಬಲ್ ಡೇಟಾ ಸೆಂಟರ್’ ಸ್ಥಾಪನೆಗೆ ತಣ್ಣೀರುಬಾವಿ ಜಾಗ ಪರಿಶೀಲಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಮಂಗಳೂರಿನ ತಣ್ಣೀರುಬಾವಿಯಲ್ಲಿ ಭಾರತದ ಮೊದಲ 'ಸಸ್ಟೈನಬಲ್ ಡೇಟಾ ಸೆಂಟರ್' ಸ್ಥಾಪಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಸಚಿವ ಪ್ರಿಯಾಂಕ್ ಖರ್ಗೆ ಸ್ಥಳ ಪರಿಶೀಲಿಸಿದ್ದು, 20 ಎಕರೆ ಪ್ರದೇಶದಲ್ಲಿ ಪರಿಸರ ಸ್ನೇಹಿ ಕೇಂದ್ರ ನಿರ್ಮಾಣವಾಗಲಿದೆ. ನವೀಕರಿಸಬಹುದಾದ ಇಂಧನ ಬಳಸಿ, ಕಡಿಮೆ ಇಂಗಾಲ ಹೊರಸೂಸುವಿಕೆ ಗುರಿಯೊಂದಿಗೆ ಕಾರ್ಯನಿರ್ವಹಿಸುವ ಈ ಯೋಜನೆಯು ಕರಾವಳಿ ಭಾಗದ ₹5,000 ಕೋಟಿ ಐಟಿ ರಫ್ತು ಗುರಿಗೆ ಪೂರಕವಾಗಿದೆ.

ಮಂಗಳೂರು, ನ.25: ಕಡಲನಗರಿ ಮಂಗಳೂರಿನಲ್ಲಿ ದೇಶದ ಮೊದಲ ‘ಸಸ್ಟೈನಬಲ್ ಡೇಟಾ ಸೆಂಟರ್’ (Sustainable Data Center) ಸ್ಥಾಪನೆಗೆ ರಾಜ್ಯ ಸರ್ಕಾರ ಭರ್ಜರಿ ಸಿದ್ಧತೆ ನಡೆಸಿದೆ. ಇಂದು (ನ.25) ಮಂಗಳೂರಿನ ತಣ್ಣೀರುಬಾವಿ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಉದ್ದೇಶಿತ ಯೋಜನೆಯ ಜಾಗವನ್ನು ಖುದ್ದು ಪರಿಶೀಲಿಸಿದರು.
ಸ್ಥಳ ಪರಿಶೀಲನೆ ಬಳಿಕ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, “ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ‘ಸಸ್ಟೈನಬಲ್ ಡೇಟಾ ಸೆಂಟರ್ ನೀತಿ’ಯನ್ನು ಜಾರಿಗೆ ತಂದಿದ್ದೇವೆ. ಮಂಗಳೂರಿನ ತಣ್ಣೀರುಬಾವಿಯಲ್ಲಿ ಸುಮಾರು 49 ಎಕರೆ ಜಾಗವಿದ್ದು, ಸಿಆರ್‌ಝಡ್ ನಿಯಮಗಳಡಿಯಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅವಕಾಶವಿದೆ” ಎಂದು ತಿಳಿಸಿದರು. ಈ ಜಾಗದ ಸಾಧಕ-ಬಾಧಕಗಳ ಕುರಿತು ವಿವಿಧ ತಾಂತ್ರಿಕ ಹಾಗೂ ಪರಿಸರ ಏಜೆನ್ಸಿಗಳಿಂದ ಪರಿಶೀಲನೆ ನಡೆಸಲಾಗುವುದು. ಅಲ್ಲದೆ, ಈ ಯೋಜನೆಗೆ ಖಾಸಗಿ ಹೂಡಿಕೆದಾರರನ್ನು ಆಕರ್ಷಿಸಲು ಸರ್ಕಾರದಿಂದ ಶೀಘ್ರದಲ್ಲೇ ಶ್ವೇತಪತ್ರ ಹೊರಡಿಸಲಾಗುವುದು ಎಂದು ಸಚಿವರು ಘೋಷಿಸಿದರು.
ಉಡುಪಿಯಲ್ಲೂ ಜಾಗ ಗುರುತು; ₹5,000 ಕೋಟಿ ಐಟಿ ರಫ್ತು ಸಾಧನೆ:
ಮಂಗಳೂರು ಮಾತ್ರವಲ್ಲದೆ ಉಡುಪಿಯಲ್ಲೂ ಡೇಟಾ ಸೆಂಟರ್ ಸ್ಥಾಪನೆಗಾಗಿ ಜಾಗ ಗುರುತಿಸಲಾಗಿದ್ದು, ಅದು ಅರಣ್ಯ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು. ಕರಾವಳಿ ಭಾಗದಲ್ಲಿ ಈಗಾಗಲೇ ₹5,000 ಕೋಟಿ ಮೌಲ್ಯದ ಐಟಿ ರಫ್ತು ನಡೆಯುತ್ತಿದೆ. ಮಂಗಳೂರು, ಮಣಿಪಾಲ ಮತ್ತು ಉಡುಪಿಯ ಭವಿಷ್ಯದ ತಂತ್ರಜ್ಞಾನ ಮತ್ತು ಕೈಗಾರಿಕಾ ಅಭಿವೃದ್ಧಿಗಾಗಿ ‘ಬಿಯಾಂಡ್ ಬೆಂಗಳೂರು’ ಉಪಕ್ರಮದ ಅಡಿಯಲ್ಲಿ ಸಮಗ್ರ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಇದನ್ನೂ ಓದಿ: ಸಿಎಂ ಜಪಾನ್ ಪ್ರವಾಸ: ವಿದೇಶಾಂಗ ರಾಜ್ಯ ಸಚಿವರ ಜೊತೆ ಡಿಕೆ ಶಿವಕುಮಾರ್ ಮಹತ್ವದ ಮಾತುಕತೆ
ಏನಿದು ‘ಸಸ್ಟೈನಬಲ್ ಡೇಟಾ ಸೆಂಟರ್’
ಸಾಮಾನ್ಯವಾಗಿ ಬೃಹತ್ ಡೇಟಾ ಸೆಂಟರ್‌ಗಳು (ಡಿಜಿಟಲ್ ಮಾಹಿತಿ ಸಂಗ್ರಹಣಾ ಕೇಂದ್ರಗಳು) ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ಅಪಾರ ಪ್ರಮಾಣದ ವಿದ್ಯುತ್ ಮತ್ತು ತಂಪಾಗಿಸಲು ಹೆಚ್ಚಿನ ನೀರನ್ನು ಬಳಸುತ್ತವೆ. ಇದರಿಂದ ಪರಿಸರದ ಮೇಲೆ ಒತ್ತಡ ಹಾಗೂ ಇಂಗಾಲದ ಹೊರಸೂಸುವಿಕೆ ಹೆಚ್ಚಾಗುತ್ತದೆ. ಸೌರಶಕ್ತಿ, ಪವನಶಕ್ತಿಯಂತಹ ನವೀಕರಿಸಬಹುದಾದ ಇಂಧನ ಬಳಸಿ, ಕಡಿಮೆ ನೀರು ಮತ್ತು ಅತ್ಯಾಧುನಿಕ ಇಂಧನ-ದಕ್ಷ ಕೂಲಿಂಗ್ ತಂತ್ರಜ್ಞಾನದ ಮೂಲಕ ಪರಿಸರಕ್ಕೆ ಹಾನಿಯಾಗದಂತೆ (ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿಯೊಂದಿಗೆ) ಕಾರ್ಯನಿರ್ವಹಿಸುವ ಆಧುನಿಕ ಡೇಟಾ ಕೇಂದ್ರಗಳನ್ನೇ ‘ಸಸ್ಟೈನಬಲ್ ಡೇಟಾ ಸೆಂಟರ್’ (ಹಸಿರು ಡೇಟಾ ಸೆಂಟರ್) ಎಂದು ಕರೆಯಲಾಗುತ್ತದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
