ಬೆಂಗಳೂರು: ನಗರದ ಸುಜಾತ ಥಿಯೇಟರ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಹೋಂಡಾ ಆಕ್ಟೀವಾದಲ್ಲಿ ಬರುತ್ತಿದ್ದ ಮಹಿಳೆ ಮೇಲೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹರಿದು ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ರಸ್ತೆ ಗುಂಡಿ ತಪ್ಪಿಸಲು ಹೋಗಿ ಉಮಾ ಎಂಬ ಮಹಿಳೆ ಕೆಳಗೆ ಬಿದ್ದಿದ್ದು ಈ ವೇಳೆ ಹಿಂದೆ ಬರುತ್ತಿದ್ದ ಬಸ್ ಮಹಿಳೆಯ ಮೇಲೆ ಹರಿದಿದೆ.ಘಟನೆಯಲ್ಲಿ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಇವರ ಜೊತೆ ಇದ್ದ ಮಗಳು ವನಿತಾಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇಬ್ಬರು ಮಹಿಳೆಯರು ಗಾಡಿಯಲ್ಲಿ ಬರುತ್ತಿದ್ರು. ಮುಂದೆ ಗುಂಡಿ ಇರೋ ಕಾರಣ ಆ ಮಹಿಳೆ ಸಡನ್ ಬ್ರೇಕ್ ಹಾಕಿ ನಿಲ್ಲಿಸಿದ್ರು. ಸಡನ್ ಆಗಿ ಗಾಡಿ ನಿಲ್ಲಿಸಿರೋ ಕಾರಣ ಗಾಡಿ ಬಿತ್ತು. ಹಿಂದೆ ಇದ್ದ ಮಹಿಳೆ ಕೆಳಗೆ ಬಿದ್ರು ಈ ಸಂದರ್ಭದಲ್ಲಿ ಮಹಿಳೆಯ ಕಾಲ ಮೇಲೆ ಬಸ್ ಹತ್ತಿದೆ. ಈ ಘಟನೆಗೆ ರಸ್ತೆಗುಂಡಿನೇ ಕಾರಣ. ರಸ್ತೆಗುಂಡಿ ಇರಲಿಲ್ಲ ಅಂದರೆ ಆ ಮಹಿಳೆಗೆ ಏನೂ ಆಗುತ್ತಿರಲಿಲ್ಲ ಎಂದು ಪ್ರತ್ಯಕ್ಷದರ್ಶಿ ಜಮ್ಮೀರ್ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Pension Certificate: ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ: ಈಗ ಡಿಜಿಲಾಕರ್ ಮೂಲಕ ಪಿಂಚಣಿ ಪ್ರಮಾಣಪತ್ರ ಪಡೆಯಿರಿ: ಹೇಗೆ ನೋಡಿ
ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಡಿಸಿಪಿ ಕುಲದೀಪ್ ಜೈನ್ ಮಾತನಾಡಿದ್ದು, ಅಪಘಾತದಲ್ಲಿ ತಾಯಿ-ಮಗಳು ಗಾಯಗೊಂಡಿದ್ದಾರೆ. ಬೈಕ್ ಹಿಂಬದಿ ಕುಳಿತಿದ್ದ ಉಮಾ ಸ್ಥಿತಿ ಗಂಭೀರವಾಗಿದೆ. KSRTC ಬಸ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ಮಹಿಳೆ ಉಮಾದೇವಿ ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಉಮಾದೇವಿ ಗಂಡ ಐದು ವರ್ಷದ ಹಿಂದೆ ಮೃತಪಟ್ಟಿದ್ದರು. ಸದ್ಯ ಗಾಯಿತ್ರಿ ನಗರ ವಾಸವಿದ್ದ ಉಮಾದೇವಿ ನಿನ್ನೆ ಶ್ರೀನಗರದ ಮಗಳ ಮನೆಗೆ ತೆರಳಿದ್ದರು. ಇಂದು ಮಗಳು ಗಾಯಿತ್ರಿ ನಗರಕ್ಕೆಂದು ಕರೆದುಕೊಂಡು ಹೊಗುವಾಗ ಘಟನೆ ನಡೆದಿದೆ. ಮನೆಕೆಲಸ ಮಾಡಿ ಜೀವನ ಮಾಡುತಿದ್ದ ಉಮಾದೇವಿ ಮನೆಯೊಂದರ ಮಗುವಿನ ಕೇರ್ ಟೇಕರ್ ಆಗಿದ್ದರು. ಇವರಿಗೆ ಮೂರು ಜನ ಹೆಣ್ಣು ಮಕ್ಕಳಿದ್ದಾರೆ. ಈಗಾಗಲೇ ಇಬ್ಬರಿಗೆ ಮದುವೆಯಾಗಿದೆ. ಕೊನೆ ಮಗಳ ಮದುವೆ ಇನ್ನು ಆಗಿಲ್ಲ.
ರಸ್ತೆ ಗುಂಡಿ ಮುಚ್ಚದ ಅಧಿಕಾರಿಗಳಿಗೆ ಕ್ಲಾಸ್
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ನಗರದ ಪೂರ್ವ ವಲಯದಲ್ಲಿ ಕಾಲ್ನಡಿಗೆ ಮೂಲಕ ಜನರ ಸಮಸ್ಯೆ ಆಲಿಸುತ್ತಿದ್ದಾರೆ. ಹೆಣ್ಣೂರು ಮುಖ್ಯ ರಸ್ತೆ, ಬಾಣಸವಾಡಿ ಕಡೆಗಳಲ್ಲಿ ಓಡಾಡು ಜನರನ್ನು ಮಾತನಾಡಿಸುತ್ತಿದ್ದಾರೆ. ಇದಕ್ಕೆ ಪಾಲಿಕೆ ವಲಯ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಪರಿಶೀಲನೆ ವೇಳೆ ರಸ್ತೆ ಗುಂಡಿಗಳನ್ನ ಮುಚ್ಚದ ಅಧಿಕಾರಿಗಳ ವಿರುದ್ಧ ತುಷಾರ್ ಗಿರಿನಾಥ್ ಗರಂ ಆಗಿದ್ದಾರೆ. ಈ ವೇಳೆ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಈ ಘಟನೆ ನೋವು ತಂದಿದೆ. ಒಂದು ಅಮೂಲ್ಯ ಜೀವ ಹೋಗಿದೆ. ಈಗ ತನಿಖೆ ನಡೆಯುತ್ತಿದೆ, ಯಾರ ತಪ್ಪು ಅಂತಾ ಗೊತ್ತಾಗುತ್ತೆ. ಅಧಿಕಾರಿಗಳ ತಪ್ಪಾ, ಗುತ್ತಿಗೆದಾರರ ತಪ್ಪು ಅನ್ನೋದು ಗೊತ್ತಾಗುತ್ತೆ. ಸದ್ಯ ಮಳೆ ಬರುತ್ತಿರುವ ಕಾರಣ ರಸ್ತೆ ಗುಂಡಿ ಮುಚ್ಚಲು ಆಗ್ತಿಲ್ಲ. ಅದಕ್ಕೆ ಜಲ್ಲಿಗಳನ್ನ ಹಾಕಿ ಮುಚ್ಚಲಾಗ್ತಿದೆ. ಅವರು ಹೇಗೆ ಬಿದಿದ್ದಾರೆ ಅಂತಾ ಗೊತ್ತಿಲ್ಲ, ಅದರ ಬಗ್ಗೆ ತನಿಖೆ ನಡೆಯುತ್ತದೆ ಎಂದರು.
ಅಪಘಾತ ನಡೆದ ಸುಜಾತ ಟಾಕೀಸ್ ಬಳಿ ಪ್ರತಿಭಟನೆ
ಕನ್ನಡಪರ ಹೋರಾಟಗಾರರು, ಆಮ್ ಆದ್ಮಿ ಪಾರ್ಟಿ, ಕೆ.ಆರ್ ಎಸ್ ಪಾರ್ಟಿ ಕಾರ್ಯಕರ್ತರು ಗುಂಡಿಯಲ್ಲಿ ಕುಳಿತುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 11:25 am, Mon, 17 October 22