ಬೆಂಗಳೂರಿನಲ್ಲಿ ಮೊಬೈಲ್​ ಎಂದು ಗ್ಲಾಸ್ ಪೀಸ್ ಮಾರಾಟ ಮಾಡಿ ಎಸ್ಕೇಪ್ ಆಗುತ್ತಿದ್ದ ಖತರ್ನಾಕ್ ಕಿಲಾಡಿಗಳು ಅರೆಸ್ಟ್

ಅಪರಿಚಿತರಿಂದ ಏನೇ ಖರೀದಿಸಬೇಕಿದ್ದರು ಎಚ್ಚರಿಕೆಯಿಂದಿರಿ. ಬಸ್​ಗೆ ಕಾಸಿಲ್ಲ ಮೊಬೈಲ್ ತಗೋತಿರಾ ಎಂದು ಕಾಸ್ಟಿ ಮೊಬೈಲ್ ತೋರಿಸಿ ವಂಚನೆಗೆ ಮಾಡುತ್ತಾರೆ.

ಬೆಂಗಳೂರಿನಲ್ಲಿ ಮೊಬೈಲ್​ ಎಂದು ಗ್ಲಾಸ್ ಪೀಸ್ ಮಾರಾಟ ಮಾಡಿ ಎಸ್ಕೇಪ್ ಆಗುತ್ತಿದ್ದ ಖತರ್ನಾಕ್ ಕಿಲಾಡಿಗಳು ಅರೆಸ್ಟ್
ಆರೋಪಿಯಿಂದಲೇ ವಂಚನೆಯ ಡೆಮೋ
Updated By: Digi Tech Desk

Updated on: Nov 15, 2022 | 2:54 PM

ಬೆಂಗಳೂರು: ಬಸ್​ ಚಾರ್ಜ್​ಗೆ ಕಾಸಿಲ್ಲ. ಕಮ್ಮಿ ರೇಟ್​ನಲ್ಲಿ ಮೊಬೈಲ್ ಖರೀದಿಸಿ ಸಹಾಯ ಮಾಡಿ ಎಂದು ಕೈ ಚಾಚುವ ಖದೀಮರಿಂದ ದೂರ ಇರಿ. ಏಕೆಂದರೆ ಬೆಂಗಳೂರಿನಲ್ಲಿ ಖತರ್ನಾಕ್ ಜಾಲವೊಂದು ಪತ್ತೆಯಾಗಿದೆ. ಪೌಚ್ ನಲ್ಲಿ ಮೊಬೈಲ್ ಇದೆ ಎಂದು 5 ಸಾವಿರಕ್ಕೆ ಮೊಬೈಲ್ ಖರೀದಿಸಿದ್ದ ವ್ಯಕ್ತಿಗೆ ಮೊಬೈಲ್ ತೂಕದ ಗ್ಲಾಸ್ ಪೀಸ್ ಸಿಕ್ಕಿದೆ. ಸದ್ಯ ಈಗ ಮೊಬೈಲ್​ ಅಂತ ಮೋಸ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಪರಿಚಿತರಿಂದ ಏನೇ ಖರೀದಿಸಬೇಕಿದ್ದರು ಎಚ್ಚರಿಕೆಯಿಂದಿರಿ. ಬೆಂಗಳೂರಿನಲ್ಲಿ ಉತ್ತರ ಪ್ರದೇಶದ ಗ್ಯಾಂಗೊಂದು ಆಕ್ಟೀವ್ ಆಗಿದೆ. ಉತ್ತರ ಭಾರತದ ವ್ಯಕ್ತಿಗಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು ಕನ್ನಡ ಭಾಷೆ ಬಾರದ ಹಿಂದಿ ಮಾತ್ರ ತಿಳಿಯುವಂತಹವರನ್ನು ತಮ್ಮ ಕಾಳಕ್ಕೆ ಬೀಳಿಸಿಕೊಳ್ಳುತ್ತಿದ್ದರು. ಅವರ ಬಳಿ ಅಮಾಯಕರಂತೆ ನಟಿಸಿ ರಸ್ತೆಯಲ್ಲೇ ಮೊಬೈಲ್​ ಮಾರಾಟಕ್ಕೆ ನಿಲ್ಲುತ್ತಿದ್ದರು.

ಉತ್ತರ ಭಾರತದವರನ್ನ ಮುಖ ನೋಡಿಯೇ ಗುರುತಿಸುತ್ತಿದ್ದ ಆರೋಪಿಗಳು, ಮೊದಲಿಗೆ ಅವರ ಬಳಿ ಹೋಗಿ ನಮಗೆ ಬಸ್​ಗೆ ಕಾಸಿಲ್ಲ ಮೊಬೈಲ್ ತಗೋತಿರಾ ಎಂದು ಕಾಸ್ಟಿ ಮೊಬೈಲ್ ತೋರಿಸಿ ವಂಚನೆಗೆ ಮುಂದಾಗುತ್ತಿದ್ದರು. ಈ ವೇಳೆ ಪಾಪ ಸಹಾಯ ಮಾಡೋಣ ಎಂದು ಡೀಲ್​ಗೆ ಇಳಿದರೆ 10 ಸಾವಿರ ಕೊಡಿ ಸಾಕು ಇಲ್ಲ ಅಂದ್ರೆ 5 ಸಾವಿರ ಕೊಟ್ಟರೂ ಸಾಕು ಎಂದು ಪುಸಲಾಯಿಸುತ್ತಿದ್ದರು. ಅಲ್ಲದೆ ಮೊಬೈಲ್ ಜೊತೆ ಒರಿಜಿನಲ್ ಬಿಲ್ ಕೂಡ ಕೊಡ್ತೀವಿ. ಕಾಸ್ಟಿ ಮೊಬೈಲ್ ಬೇರೆ ವರ್ಕಿಂಗ್ ಕಂಡಿಷನ್​ನಲ್ಲಿದೆ ಎಂದು ನಂಬಿಸುತ್ತಿದ್ದರು. ಇದೇ ರೀತಿಯ ಮೋಸದ ಗಾಳಕ್ಕೆ ಬಿದ್ದ ದುರ್ಗ ಕುಮಾರ್ ಎಂಬುವವರು ಹತ್ತು ಸಾವಿರದ ಬದಲಿಗೆ ಐದು ಸಾವಿರಕ್ಕೆ ಮೊಬೈಲ್ ಖರೀದಿಸಿದ್ದಾರೆ. ಬಳಿಕ ಮನೆಗೆ ಬಂದವರು ಪೌಚ್ ನಲ್ಲಿದ್ದ ಮೊಬೈಲ್ ನೋಡಲು ಹೋದಾಗ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ವಾಹನ ಕಳ್ಳತನ: ತ್ವರಿತ ತನಿಖೆಗಾಗಿ ಹೊಸ ಸೌಲಭ್ಯ ತೆರೆದ ಕರ್ನಾಟಕ ಪೊಲೀಸ್ ಇಲಾಖೆ!

ಮೊಬೈಲ್​ ಬದಲಿಗೆ ಗ್ಲಾಸ್ ಪೀಸ್

ದುರ್ಗ ಕುಮಾರ್​ಗೆ ಪೌಚ್​ನಲ್ಲಿ ಮೊಬೈಲ್ ತೂಕದ ಗ್ಲಾಸ್ ಪೀಸ್​ಗಳು ಸಿಕ್ಕಿವೆ. ಇದನ್ನು ಕಂಡು ಶಾಕ್ ಆದ ದುರ್ಗ ತಕ್ಷಣವೇ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ದೂರು ಆಧರಿಸಿ ತನಿಖೆಗೆ ಇಳಿದ ಪೊಲೀಸರು ಸಣ್ಣದೊಂದು ಕ್ಲೂನಿಂದ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗೆ ಗ್ಲಾಸ್ ಮಾರಾಟ ಮಾಡ್ತಿದ್ದ ಅಂಗಡಿಯವನಿಂದ ಪೊಲೀಸರಿಗೆ ಆರೋಪಿಯ ಸುಳಿವು ಸಿಕ್ಕಿದೆ. ಇಲ್ಲಿ ಮೊಬೈಲ್ ಗಾತ್ರದ ಗ್ಲಾಸ್ ಪೀಸ್ ಕಟ್ ಮಾಡಿಸಿಕೊಂಡು ಹೋಗ್ತಿದ್ರು ಎಂದು ಶಾಪ್ ಮಾಲೀಕ ಮಾಹಿತಿ ನೀಡಿದ್ದಾನೆ. ಬಳಿಕ ಆರೋಪಿ ಮತ್ತೆ ಇಲ್ಲಿಗೆ ಬರುತ್ತಾನೆ ಎಂದು ಪೊಲೀಸರು ಕಾದು ಕೂತಿದ್ದಾರೆ. ಅದರಂತೆಯೇ ಮತ್ತೊಮ್ಮೆ ಗ್ಲಾಸ್ ಪೀಸ್ ಗಾಗಿ ಆರೋಪಿ ಅಂಗಡಿಗೆ ಬಂದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯಿಂದಲೇ ವಂಚನೆಯ ಡೆಮೋ ಮಾಡಿಸಿದ ಪೊಲೀಸರು

ವಿಚಾರಣೆ ವೇಳೆ ಆರೋಪಿ ಅಸಲಿ ಸಂಗತಿ ಬಾಯ್ಬಿಟ್ಟಿದ್ದಾರೆ. ಮೊಬೈಲ್ ಪೌಚ್ ಗೆ ಫೆವಿಕ್ವಿಕ್ ಹಾಕಿ ಅಂಟಿಸುತ್ತಿದ್ದೆ. ಒಂದೇ ತರಹದ ಎರಡು ಮೊಬೈಲ್ ಪೌಚ್ ಇಟ್ಟು ಕೊಂಡಿದ್ದೆ ಎಂದಿದ್ದಾನೆ. ಗೂಗಲ್ ಪೇ ನಲ್ಲಿ ಹಣ ವರ್ವಾವಣೆ ಮಾಡುವಾಗ ಗಮನ ಬೇರೆಡೆ ಸೆಳೆದು ಗ್ಲಾಸ್ ಪೀಸ್ ಇರುವ ಪೌಚ್ ಕೊಡ್ತಿದ್ದೆ ಎಂದಿದ್ದಾನೆ. ಆರೋಪಿ ಗ್ಲಾಸ್ ಪೀಸ್ ಇದ್ದ ಪೌಚ್ ಜಿಪ್ ನ ಬದಿ ಫೆವಿಕ್ವಿಕ್ ಅಂಟಿಸುತಿದ್ದ. ಜಿಪ್ ಓಪನ್ ಆಗುವಷ್ಟರಲ್ಲಿ ಆರೋಪಿಗಳು ಎಸ್ಕೇಪ್ ಆಗುತ್ತಿದ್ದರು. ಸದ್ಯ ಕುಮಾರಸ್ವಾಮಿ ಲೇಔಟ್ ಪೊಲೀಸರು ಮೊಹಮ್ಮದ್ ಜುಬೇರ್ ಮತ್ತು ಗುಲ್ಜಾರ್ ಎಂಬುವವರನ್ನು ಬಂಧಿಸಿದ್ದಾರೆ.

ಮತ್ತಷ್ಟು ತಾಜಾ ಸುದ್ಧಿಗಳಿಗೆ ಇಲ್ಲಿ ಕ್ಲಿಕ್​ ಮಾಡಿ

Published On - 2:22 pm, Tue, 15 November 22