ಬೆಂಗಳೂರು: ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಸ್ಟೋರ್​ಗಳಲ್ಲಿ ಸಿಗುತ್ತಿಲ್ಲ ಮದ್ಯ, ಕಾರಣ ಇಲ್ಲಿದೆ

ರಾಜ್ಯ ಸರ್ಕಾರ ಕಳೆದ ವಾರವಷ್ಟೇ ಪ್ರೀಮಿಯಂ ಮದ್ಯದ ದರವನ್ನು ಕಡಿಮೆ ಮಾಡಿದ್ದರೆ, ಇತ್ತ ಅಗ್ಗದ ಮದ್ಯದ ಬೆಕೆಯನ್ನು ಕೊಂಚ ಏರಿಕೆ ಮಾಡಿತ್ತು. ಆದರೆ ಹೊಸ ದರದ ಮದ್ಯ ಇನ್ನೂ ಬೆಂಗಳೂರಿನ ಬಾರ್ ಅಂಡ್ ರೆಸ್ಟೋರೆಂಟ್​​ಗಳಿಗೆ ಪೂರೈಕೆ ಆಗುತ್ತಿಲ್ಲ. ಈಗಾಗಲೇ ಇರುವ ಸ್ಟಾಕ್ ಖಾಲಿ ಆಗುತ್ತಿದೆ. ಇದರಿಂದ ಬಾರ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದರೆ, ಮದ್ಯಪ್ರಿಯರು ನೋವು ತೋಡಿಕೊಳ್ಳುತ್ತಿದ್ದಾರೆ.

ಬೆಂಗಳೂರು: ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಸ್ಟೋರ್​ಗಳಲ್ಲಿ ಸಿಗುತ್ತಿಲ್ಲ ಮದ್ಯ, ಕಾರಣ ಇಲ್ಲಿದೆ
ಸಾಂದರ್ಭಿಕ ಚಿತ್ರ
Edited By:

Updated on: Sep 05, 2024 | 7:06 AM

ಬೆಂಗಳೂರು, ಸೆಪ್ಟೆಂಬರ್ 5: ಮದ್ಯಕ್ಕೆ ಹೊಸ ಬೆಲೆ ಆದೇಶ ಜಾರಿಯಾದ ಬೆನ್ನಲ್ಲೇ ಕೆಎಸ್​ಬಿಸಿಎಲ್​ನಿಂದ ಹೊಸ ದರ ಅಳವಡಿಸಿದ ಮದ್ಯದ ಬಾಟಲ್​​ಗಳು ಪೂರೈಕೆಯಾಗುತ್ತಿಲ್ಲ. ಇತ್ತೀಚೆಗೆ ಪ್ರೀಮಿಯಂ ಮದ್ಯಗಳ ಬೆಲೆಯನ್ನು ಸರ್ಕಾರ ಕಡಿಮೆ ಹಾಗೂ ಅಗ್ಗದ ಮದ್ಯಗಳ ದರವನ್ನು ಕೊಂಚ ಏರಿಕೆ ಮಾಡಿತ್ತು. ಇದರಿಂದ ಮದ್ಯದಂಗಡಿಗಳಲ್ಲಿ ಸ್ಟಾಕ್ ಕೊರತೆ ಕಂಡುಬಂದಿದೆ. ಬೆಲೆ ಇಳಿಕೆ ಮತ್ತು ಏರಿಕೆಯಾಗಿದ್ದರಿಂದ ಹೊಸ ಲೇಬಲಿಂಗ್ ಮಾಡುವ ಕಾರ್ಯಕ್ಕೆ ಟೈಮ್ ಬೇಕಿರುವುದರಿಂದ ಹೊಸ ಮದ್ಯೆ ಪೂರೈಕೆ ಆಗುತ್ತಿಲ್ಲ. ಇದರಿಂದ ಯಾವುದೇ ಬಾರ್ ಅಂಡ್ ರೆಸ್ಟೋರೆಂಟ್​ಗಳಲ್ಲೂ ಸರಿಯಾಗಿ ಮದ್ಯ ಸರಬರಾಜು ಆಗುತ್ತಿಲ್ಲ ಎಂದು ಬೆಂಗಳೂರು ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಕರುಣಾಕರ ಹೆಗ್ಡೆ ತಿಳಿಸಿದ್ದಾರೆ.

ಇನ್ನು ಅಕ್ಕಪಕ್ಕದ ರಾಜ್ಯಗಳ ಮದ್ಯದ ದರ ಪರಿಶೀಲಿಸಿ ನಮ್ಮಲ್ಲಿ ದುಬಾರಿ ಮದ್ಯಗಳ ದರವನ್ನು ಇತ್ತೀಚೆಗೆ ಸ್ವಲ್ಪ ಕಡಿಮೆ ಮಾಡಲಾಗಿದೆ. ಹೊಸ ದರದಂತೆ ಲೇಬಲ್ ಮುದ್ರಿಸಬೇಕಿದ್ದು, ಇದಕ್ಕೆ ಕಾಲಾವಕಾಶ ಬೇಕಿರುವುದರಿಂದ ಮಾರಾಟಗಾರರಿಗೆ ಕೆಲ ಬ್ರಾಂಡ್ ಮದ್ಯ ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ವೈನ್ಸ್ ಸ್ಟೋರ್, ಬಾರ್ ಸೇರಿದಂತೆ ಮದ್ಯದಂಗಡಿಗಳಲ್ಲಿ ಮಾರಾಟ ಕಡಿಮೆಯಾಗಿದ್ದು, ಅಬಕಾರಿ ಆದಾಯಕ್ಕೆ ಸ್ವಲ್ಪ ಹಿನ್ನಡೆ ಉಂಟಾಗಿದೆ.

ಬ್ಲ್ಯಾಕ್ ಅಂಡ್ ವೈಟ್, ಬ್ಲ್ಯಾಕ್ ಡಾಗ್, ಟೀಚರ್ಸ್, ಬ್ಲ್ಯಾಕ್ ಲೇಬಲ್, ಶಿವಾಸ್ ರೀಗಲ್, ಸ್ವಿರ್ನಾಫ್ ವೋಡ್ಕಾ ಸೇರಿದಂತೆ ಪ್ರೀಮಿಯಂ ಮತ್ತು ಸೆಮಿ ಪ್ರೀಮಿಯಂನ ಹಲವು ಬ್ರಾಂಡ್​​ಗಳ ಮದ್ಯ ಸಮರ್ಪಕವಾಗಿ ಸರಬರಾಜಾಗುತ್ತಿಲ್ಲ ಎನ್ನಲಾಗಿದೆ.

ಈ ಬಗ್ಗೆ ಮದ್ಯಪ್ರಿಯರು ನೋವು ತೋಡಿಕೊಳ್ಳುತ್ತಿದ್ದಾರೆ. ನಮಗೆ ಬೇಕಾದ ಬ್ರಾಂಡ್ ಸಿಗ್ತಿಲ್ಲ, ಎಣ್ಣೆ ಕುಡಿಯುವುದನ್ನೇ ಬಿಟ್ಟಿದ್ದೀವಿ ಎಂದಿದ್ದಾರೆ ಮದ್ಯಪ್ರಿಯ ಗಿರೀಶ್.

ಇದನ್ನೂ ಓದಿ: ವಾಹನ ಮಾಲೀಕರ ಗಮನಕ್ಕೆ: ಇನ್ನೂ ನೀವು ನಿಮ್ಮ ವಾಹನಕ್ಕೆ HSRP ನಂಬರ್​ ಪ್ಲೇಟ್ ಹಾಕಿಸಿಲ್ಲವೇ..?​

ಒಟ್ಟಿನಲ್ಲಿ ರಾಜ್ಯ ಸರ್ಕಾರ ಏನೋ ದರ ಕಡಿಮೆ ಮತ್ತು ಜಾಸ್ತಿ ಮಾಡಿ ಆದೇಶ ಮಾಡಿದೆ. ಆದರೆ, ಹೊಸ ದರದ ಲೇಬಲ್​​ಗಳನ್ನು ಹಾಕಲು ಸಮಯ ಬೇಕಿರುವುದರಿಂದ ಹೊಸ ಎಣ್ಣೆ ಪೂರೈಕೆ ಆಗುತ್ತಿಲ್ಲ. ಇದರಿಂದ ಒಂದುಕಡೆ ಅಬಕಾರಿ ಇಲಾಖೆಗೆ ನಷ್ಟ, ಮತ್ತೊಂದು ಕಡೆ ಮದ್ಯಪ್ರಿಯರಿಗೆ ಅಚ್ಚುಮೆಚ್ಚಿನ ಬ್ರ್ಯಾಂಡ್ ಸಿಗ್ತಿಲ್ಲ ಎಂಬ ಬೇಜಾರಿಗೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ