ಬೆಂಗಳೂರು, ಜನವರಿ 16: ಗಣರಾಜ್ಯೋತ್ಸವ (Republic Day) ಪ್ರಯುಕ್ತ ಲಾಲ್ಬಾಗ್ನಲ್ಲಿ 215ನೇ ಫ್ಲವರ್ ಶೋ (Lalbagh Flower Show) ಆಯೋಜಿಸಲಾಗಿದೆ. ಜನವರಿ 18 ರಿಂದ 11 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಪುಷ್ಪ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ ಎಂದು ಲಾಲ್ಬಾಗ್ನ ನಿರ್ದೇಶಕ ರಮೇಶ್ ಹೇಳಿದರು. ಇಂದು (ಮಂಗಳವಾರ) ಲಾಲ್ಬಾಗ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬೆಳ್ಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಪ್ರದರ್ಶನ ಇರಲಿದೆ. ಪ್ರತಿವರ್ಷದಂತೆ ಈ ವರ್ಷವು ವಿಶೇಷ ಪ್ಲವರ್ ಶೋ ಆಯೋಜನೆ ಮಾಡಿದ್ದೇವೆ. ಈ ಫ್ಲವರ್ ಶೋ ಮೂಲಕ ಪರಿಸರವನ್ನು ಹೇಗೆ ಪ್ರೀತಿಸಬೇಕು ಅಂತ ಕಲಿಯಬಹುದು ಎಂದು ಹೇಳಿದರು.
ಈ ಬಾರಿ ಜಗಜ್ಯೋತಿ ಬಸವಣ್ಣನವರ ಜೀವನ ಆಧಾರಿತವಾದ ಫ್ಲವರ್ ಶೋ ಇರಲಿದೆ. ಅನುಭವಮಂಟಪ ಮುಖ್ಯ ಆಕರ್ಷಣೆಯಾಗಿದೆ. ಫ್ಲವರ್ ಶೋಗೆ ಬೇಕಾದ ಎಲ್ಲಾ ಸಿದ್ದತೆಯಾಗಿದೆ. ಒಟ್ಟು 68 ಬಗೆಯ ಹೂಗಳು,22 ವರ್ಣ ರಂಜಿತ ಹೂಗಳು ಇರಲಿವೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 35 ಲಕ್ಷ ಹೂಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಫಲಪುಷ್ಪ ಪ್ರದರ್ಶನ ನೋಡಲು ಬರುವ ವಯಸ್ಕರಿಗೆ 80 ರೂಪಾಯಿ ಟಿಕೆಟ್ ದರ ನಿಗಧಿ ಮಾಡಿದ್ದೇವೆ. ರಜೆ ದಿನಗಳಲ್ಲಿ ವಯಸ್ಕರಿಗೆ 100 ರೂಪಾಯಿ ಟಿಕೆಟ್ ದರ ಇರುತ್ತದೆ. ಮಕ್ಕಳಿಗೆ 30 ರೂ. ನಿಗಧಿ ಮಾಡಿದ್ದೇವೆ. ಶಾಲಾ ಸಮವಸ್ತ್ರ ಧರಿಸಿಕೊಂಡು ಬರುವ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ ಎಂದರು.
ಇದನ್ನೂ ಓದಿ: 2024ರ ಲಾಲ್ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ವಚನ ಸಾಹಿತ್ಯ, ಬಸವೇಶ್ವರರ ಪ್ರತಿಕೃತಿ
ಲಾಲ್ಬಾಗ್ನ ನಾಲ್ಕು ಗೇಟ್ಗಳಲ್ಲಿ ಪ್ರವೇಶ ನೀಡಲಾಗುತ್ತದೆ. ಕಳೆದ ಬಾರಿ 10 ಲಕ್ಷದಷ್ಟು ಜನರು ಬಂದಿದ್ದರು. ಈ ಬಾರಿ 10 ಕ್ಕೂ ಹೆಚ್ಚು ಜನರು ಬರುವ ಸಾಧ್ಯತೆ ಇದೆ. 400ಕ್ಕೂ ಹೆಚ್ಚು ಟ್ರಾಫಿಕ್ ಪೋಲಿಸರು, 200 ಕ್ಕು ಹೆಚ್ಚು ತೋಟಾಗಾರಿಕೆ ಸಿಬ್ಬಂದಿಗಳು ಭದ್ರತೆಗೆ ಇರುತ್ತಾರೆ. ಯಾವುದೇ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗಿದೆ. ಪ್ರದರ್ಶನಕ್ಕೆ ಚಲನಚಿತ್ರ ರಂಗದ ನಟ, ನಟಿಯರು, ರಾಜಾಕೀಯ ನಾಯಕರು ಬರುವ ಸಾಧ್ಯತೆ ಇದೆ. ಅಂಬುಲೆನ್ಸ್ ಇರಲಿದೆ. ಒಂದೆರೆಡು ಕಡೆ ಎಲ್ಇಡಿ ಸ್ಕ್ರೀನ್ಗಳನ್ನು ಅಳವಡಿಸಲಾಗುತ್ತದೆ.
ತೋಟಾಗಾರಿಕೆ ಇಲಾಖೆಯ ಕಾರ್ಯದರ್ಶಿ ಶಮ್ಲಾ ಇಕ್ಬಾಲ್, ಲಾಲ್ಬಾಗ್ ನಿರ್ದೇಶಕ ರಮೇಶ್ ಡಿ ಎಸ್, ಜಂಟಿ ನಿರ್ದೇಶಕ ಜಗದೀಶ್ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:41 pm, Tue, 16 January 24