ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಸರ್ಕಾರಿ ಆಸ್ಪತ್ರೆಗಳ ಸಮಸ್ಯೆ, ಆಂಬುಲೆನ್ಸ್​ ವ್ಯವಸ್ಥೆ ಸುಧಾರಣೆಗೆ ಬೇಡಿಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 15, 2022 | 5:59 PM

ಆರೋಗ್ಯ ವ್ಯವಸ್ಥೆಯ ಬಗ್ಗೆ ನಾವು ವೈಜ್ಞಾನಿಕವಾಗಿ ಮಾತನಾಡಲು ಕೊವಿಡ್ ಸಹ ಕಾರಣ. ಎಲ್ಲ ರೀತಿಯ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಯಲ್ಲಿ ಇರಬೇಕು ಎನ್ನುವ ಚಿಂತನೆಯನ್ನು ಕೊರೊನಾ ನಮಗೆ ಕಲಿಸಿಕೊಟ್ಟಿದೆ ಎಂದು ಕುಮಾರ್ ಬಂಗಾರಪ್ಪ ಹೇಳಿದರು.

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಸರ್ಕಾರಿ ಆಸ್ಪತ್ರೆಗಳ ಸಮಸ್ಯೆ, ಆಂಬುಲೆನ್ಸ್​ ವ್ಯವಸ್ಥೆ ಸುಧಾರಣೆಗೆ ಬೇಡಿಕೆ
ವಿಧಾನ ಪರಿಷತ್ ಕಲಾಪ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಂಗಳವಾರ (ಫೆ 15) ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಪ್ರತಿಧ್ವನಿಸಿತು. ಈ ವಿಚಾರದ ಬಗ್ಗೆ ಮಾತನಾಡಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಸರ್ಕಾರವು ಪೈಪ್ ಮೂಲಕ ಆಕ್ಸಿಜನ್ ಪೂರೈಕೆಗೆ ವ್ಯವಸ್ಥೆ ಮಾಡಿರುವುದು ನಿಜ. ಆದರೆ ಅದನ್ನು ನಿರ್ವಹಿಸಲು ತಂತ್ರಜ್ಞರನ್ನೇ ಸರ್ಕಾರ ನೇಮಿಸಿಲ್ಲ. ಗುತ್ತಿಗೆ ಆಧಾರದಲ್ಲಿಯಾದರೂ ಸರಿ, ಆದಷ್ಟೂ ಬೇಗ ಐಸಿಯು ಆಪರೇಟರ್‌ಗಳನ್ನು ಸರ್ಕಾರ ನೇಮಿಸಬೇಕು ಎಂದು ಆಗ್ರಹಿಸಿದರು. ಇದೇ ವಿಷಯದ ಕುರಿತು ಮಾತನಾಡಿದ ಶಾಸಕ ಕುಮಾರ ಬಂಗಾರಪ್ಪ, ಇಂದು ಆರೋಗ್ಯ ವ್ಯವಸ್ಥೆಯ ಬಗ್ಗೆ ನಾವು ವೈಜ್ಞಾನಿಕವಾಗಿ ಮಾತನಾಡಲು ಕೊವಿಡ್ ಸಹ ಕಾರಣ. ಎಲ್ಲ ರೀತಿಯ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಯಲ್ಲಿ ಇರಬೇಕು ಎನ್ನುವ ಚಿಂತನೆಯನ್ನು ಕೊರೊನಾ ನಮಗೆ ಕಲಿಸಿಕೊಟ್ಟಿದೆ. ಕೊರೊನಾ ಪಿಡುಗು ವ್ಯಾಪಕವಾಗಿ ಹರಡಿದ್ದಾಗ ಸರ್ಕಾರದ ಜೊತೆಗೆ ಹಲವು ಸಂಘಟನೆಗಳು ನೆರವಾದವು. ಕೊರೊನಾ ಪಿಡುಗಿನ ಆರಂಭದ ದಿನಗಳಲ್ಲಿ ದೀಪ ಹಚ್ಚಿ ಆರೋಗ್ಯ ಕಾರ್ಯಕರ್ತರನ್ನು ಶ್ಲಾಘಿಸಿದ್ದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅದು ಜಾಗೃತಿ ಮೂಡಿಸುವ ಕೆಲಸವೇ ಹೊರತು ಮೂಢನಂಬಿಕೆ ಹೆಚ್ಚಿಸುವ ಕೆಲಸ ಅಲ್ಲ ಎಂದರು.

ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ನಾನು ತುರ್ತಾಗಿ ಆಂಬ್ಯುಲೆನ್ಸ್ ಖರೀದಿ ಮಾಡಬೇಕಿತ್ತು. ಎಲ್ಲಾ ಸೌಲಭ್ಯ ಇದ್ದರೂ ಅನುಮತಿ ಸಿಗಲಿಲ್ಲ. ಐಟಿ ಕಂಪನಿಗೆ ಮಾತಾಡಿದಾಗ ಸಿಎಸ್​ಆರ್ ಫಂಡ್​ನಲ್ಲಿ ₹ 75 ಲಕ್ಷ ಅನುದಾನದಲ್ಲಿ ಆಂಬ್ಯುಲೆನ್ಸ್ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ ಕೊರೋನಾ ನಿಯಮಗಳನ್ನು ಬಿಗಿ ಮಾಡಿದ ಹಿನ್ನೆಲೆಯಲ್ಲಿ ಒಂದೇ ಒಂದು ಆಂಬ್ಯುಲೆನ್ಸ್ ಖರೀದಿ ಮಾಡಲೂ ಸಾಧ್ಯವಾಗಲಿಲ್ಲ ಎಂದರು.

ಶಾಸಕ ಅರವಿಂದ್ ಲಿಂಬಾವಳಿ ಮಾತನಾಡಿ, ಕೊವಿಡ್ ಹೆಚ್ಚಾಗಿರುವ ಕಾರಣ ರೋಗಿಯನ್ನು ಸಾಗಿಸಲು ಬೇರೆ ಯಾವುದೇ ರಾಜ್ಯದಲ್ಲೂ ಇಲ್ಲದಷ್ಟು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಯಿತು. ಕೊರೋನಾ ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕ್ಸಿಜನ್ ಸಿಗುತ್ತಿರಲಿಲ್ಲ. ಇಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಇದೆ. ನಾನು ಆರೋಗ್ಯ ಸಚಿವನಾಗಿದ್ದಾಗ, ನಗುಮಗು ಹೆಸರಿನಲ್ಲಿ ಆಂಬ್ಯುಲೆನ್ಸ್ ಖರೀದಿ ಮಾಡಿದ್ದೆವು. ಆಂಬ್ಯುಲೆನ್ಸ್ ಕೊರತೆ ಇತ್ತು ನಿಜ, ಆದ್ರೆ ಚಿಕಿತ್ಸೆ ಎಲ್ಲರಿಗೂ ಸಿಕ್ಕಿದೆ, ಈಗ ಯಾವುದೇ ಕೊರತೆ ಇಲ್ಲ ಎಂದು ಸಮರ್ಥಿಸಿಕೊಂಡರು.

ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ‌ ಮತ್ತೆ ಆರಂಭವಾದಾಗ ಕುಮಾರ್ ಬಂಗಾರಪ್ಪ ರಾಜ್ಯಪಾಲರ ಭಾಷಣದ‌ ವಂದನಾ‌ ನಿರ್ಣಯ‌ ಪ್ರಸ್ತಾವದ ಮೇಲಿನ ಚರ್ಚೆ ‌ಮುಂದುವರಿಸಿದರು. ಕುಮಾರ್ ಬಂಗಾರಪ್ಪ ಮಾತಿಗೆ ಆಕ್ಷೇಪಿಸಿದ ವಿಪಕ್ಷ ಉಪ‌ನಾಯಕ ಯು.ಟಿ. ಖಾದರ್, ಕೋವಿಡ್‌ ಸಮಯದಲ್ಲಿ ಸರ್ಕಾರದಿಂದ ಎಷ್ಟು ಆಂಬ್ಯುಲೆನ್ಸ್ ಖರೀದಿಸಿದ್ದೀರಿ? ಕೇಂದ್ರ ಸರ್ಕಾರ ಉಚಿತವಾಗಿ ನೀಡಲು ಸಿದ್ದವಾಗಿತ್ತು, ಎರಡು ವರ್ಷದಲ್ಲಿ ಒಂದೂ ಆಂಬುಲೆನ್ಸ್ ಖರೀದಿ ಮಾಡಿಲ್ಲ, ಆಕ್ಸಿಜನ್ ಪ್ಲಾಂಟ್ ನಡೆಸಲು ಸಿಬ್ಬಂದಿಗಳಿಲ್ಲ ಎಂದು ಆಕ್ಷೇಪಿಸಿದರು.

ಆಂಬ್ಯುಲೆನ್ಸ್ ಇಲ್ಲ ಅಂದ್ರೆ ಖಾಸಗಿ ವಾಹನಗಳನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಲು ಸರ್ಕಾರ ಸೂಚಿಸಿತ್ತು, 108 ಆಂಬುಲೆನ್ಸ್ ವ್ಯವಸ್ಥೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ,‌ ಹಿಂದಿನ ಸರ್ಕಾರ ಕೇಂದ್ರ ಸರ್ಕಾರ ಮಾಡಿದ ಉಪಯೋಗವನ್ನು ಬಳಸಿಕೊಂಡಿಲ್ಲ ಎಂದು ದೂರಿದರು. ಮಧ್ಯ ಪ್ರವೇಶಿಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಆಕ್ಸಿಜನ್ ಲೆವೆಲ್ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಉತ್ತಮವಾಗಿದ್ದರೆ ಎರಡನೇ ಅಲೆಯನ್ನು ಉತ್ತಮವಾಗಿ ಎದುರಿಸುತ್ತಿದ್ದೆವು. ಎಲ್ಲೂ ಆಂಬುಲೆನ್ಸ್ ಕೊರತೆ ನೋಡಿಲ್ಲ. ಆಕ್ಸಿಜನ್, ಐಸಿಯು, ಬೆಡ್‌ಗಳ‌ ಕೊರತೆಯನ್ನು ನೀಗಿಸಿ ಎರಡನೇ ಅಲೆ ನಿಭಾಯಿಸಿದ್ದೇ ಸರ್ಕಾರದ ಸಾಧನೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಔಟ್‌ಸೋರ್ಸ್, ಕಾಂಟ್ರಾಕ್ಟ್ ಮೂಲಕ ವೈದ್ಯರನ್ನು ನೇಮಕ ಮಾಡಿ ಕೆಲಸ ಮಾಡಿಸಿದ್ದೇವೆ. ಆಕ್ಸಿಜನ್‌ಗಳನ್ನು ಸಿಲಿಂಡರ್ ಮೂಲಕ ತಲುಪಿಸುವ ಕೆಲಸವಾಯ್ತು. ಆಕ್ಸಿಜನ್ ಪೈಪ್‌ಲೈನ್ಸ್ ಈಗ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿವೆ ಎಂದರು.

ಶಾಸಕ ಅನ್ನದಾನಿ ಮಾತನಾಡಿ, ನಗರ, ಪಟ್ಟಣ ಪ್ರದೇಶದಲ್ಲಿ ಮನೆಮನೆಗೂ ಮೀಟರ್ ಹಾಕಿ ನೀರು ಕೊಡಲಾಗುತ್ತಿದೆ. ಅದಕ್ಕೆ ಅವರು ದುಡ್ಡು ಕೊಡುತ್ತಿದ್ದಾರೆ. ಹಳ್ಳಿಗಳಲ್ಲಿ ಉಚಿತವಾಗಿ ಸಾರ್ವಜನಿಕ ನಲ್ಲಿಯಲ್ಲಿ ನೀರು ಕೊಡಲಾಗುತ್ತಿತ್ತು. ಈಗ ಜಲಜೀವನ್ ಮಿಷನ್ ಮೂಲಕ ಮನೆಮನೆಗೂ ನಲ್ಲಿ ಮೂಲಕ ನೀರು ಕೊಡಲಾಗ್ತಿದೆ. ಕೂಲಿ ಹಾಗೂ ರೈತಾಪಿ ವರ್ಗಕ್ಕೆ ಮೀಟರ್ ಹಾಕಿದ್ರೆ ದುಡ್ಡು ಕಟ್ಟೋಕೆ ಆಗ್ತಿಲ್ಲ. ಮೀಟರ್ ಹಾಕುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಖಾಸಗಿ ಶಾಲೆ ಮಾನ್ಯತೆ ಪ್ರಕ್ರಿಯೆ ಸರಳಗೊಳಿಸಲು ಒತ್ತಾಯ

ವಿಧಾನ ಪರಿಷತ್​ನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಸದಸ್ಯ ಪುಟ್ಟಣ್ಣ ಪಟ್ಟಣ ಪ್ರದೇಶಗಳಲ್ಲಿ ಶೇ 83 ರಾಜ್ಯದಲ್ಲಿ ಒಟ್ಟಾರೆ ಶೇ 55ರಷ್ಟು ಮಕ್ಕಳು ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ನಿಯಮಗಳನ್ನು ಸರಳಗೊಳಿಸಬೇಕು. ಈ‌ ಮೂಲಕ ಜನಸ್ನೇಹಿ ವಾತಾವರಣ ನಿರ್ಮಿಸಬೇಕು. ಅಧಿಕಾರಿಗಳು ಸುಲಿಗೆ ಶುರು ಮಾಡಿದ್ದಾರೆ. ಒಳ್ಳೆಯ ವಾತಾವರಣ ಸೃಷ್ಟಿಸಬೇಕು. ಇಲ್ಲದಿದ್ದರೆ ಸರ್ಕಾರವೇ ಶಾಲೆಗಳನ್ನು ನಡೆಸಲಿ ಎಂದು ಪುಟ್ಟಣ್ಣ ಕಿಡಿ ಕಾರಿದರು. ಈ ಪ್ರಶ್ನೆಗೆ ಸದ್ಯ ಉತ್ತರ ಸಿದ್ಧವಿಲ್ಲ. ನಾಡಿದ್ದು ಉತ್ತರ ಕೊಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿದರು.

ಗ್ಲಾಸ್ ಬ್ಯಾರಿಕೇಡ್ ತೆಗೆಸಲು ಒತ್ತಾಯ

ಕೊರೊನಾ ಕಾರಣಕ್ಕೆ ಹಾಕಿರುವ ಗ್ಲಾಸ್ ಬ್ಯಾರಿಕೇಡ್​ಗಳನ್ನು ತೆಗೆಸಬೇಕು ಎಂದು ವಿಧಾನ ಪರಿಷತ್​ನಲ್ಲಿ ಸದಸ್ಯರು ಒತ್ತಾಯಿಸಿದರು. ಕೋವಿಡ್ ಕಾರಣಕ್ಕೆ ಪರಿಷತ್ ಸದಸ್ಯರ ನಡುವೆ ಗ್ಲಾಸ್ ಬ್ಯಾರಿಕೇಡ್​ಗಳನ್ನು ಅಳವಡಿಸಲಾಗಿತ್ತು. ಈಗ ಕೋವಿಡ್ ಮುಗಿದಿದೆ, ಗ್ಲಾಸ್ ಇರುವುದರಿಂದ ಕೈಕಾಲು ಅಲ್ಲಾಡಿಸೋಕೂ ಆಗುತ್ತಿಲ್ಲ. ದಯವಿಟ್ಟು ಗ್ಲಾಸ್ ತೆಗೆಸಿಬಿಡಿ ಎಂದು ಪಕ್ಷ ಭೇದ ಮರೆತು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.

ಇದನ್ನೂ ಓದಿ: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮೇಕೆದಾಟು: ಪರಸ್ಪರರ ಕಾಲೆಳೆದ ಬಿಜೆಪಿ ಕಾಂಗ್ರೆಸ್ ಶಾಸಕರು

ಇದನ್ನೂ ಓದಿ: ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಬಿಜೆಪಿಯಲ್ಲಿ ಶುರುವಾದ ಒಳಜಗಳ; ಉತ್ತರಾಖಂಡ್​ ಬಿಜೆಪಿ ಮುಖ್ಯಸ್ಥ ದೇಶದ್ರೋಹಿಯೆಂದ ಶಾಸಕ