ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮೇಕೆದಾಟು: ಪರಸ್ಪರರ ಕಾಲೆಳೆದ ಬಿಜೆಪಿ ಕಾಂಗ್ರೆಸ್ ಶಾಸಕರು

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ಸಮಯದಲ್ಲಿ ಮೇಕೆದಾಟು ಯೋಜನೆಯ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪ ನಡೆಯಿತು.

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮೇಕೆದಾಟು: ಪರಸ್ಪರರ ಕಾಲೆಳೆದ ಬಿಜೆಪಿ ಕಾಂಗ್ರೆಸ್ ಶಾಸಕರು
ವಿಧಾನಸೌಧ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 15, 2022 | 3:40 PM

ಬೆಂಗಳೂರು: ವಿಧಾನಸಭೆಯಲ್ಲಿ ಮಂಗಳವಾರ ರಾಜ್ಯಪಾಲರ (Governor Speech) ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ಸಮಯದಲ್ಲಿ ಮೇಕೆದಾಟು ಯೋಜನೆಯ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪ ನಡೆಯಿತು. ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಸದಸ್ಯ ಪಿ.ರಾಜೀವ್, ಇದೀಗ ಪಾದಯಾತ್ರೆ ಮಾಡಿರುವ ಕಾಂಗ್ರೆಸ್ ಕೈಲೇ 5 ವರ್ಷಗಳ ಅಧಿಕಾರ ಇತ್ತು. ಇವರ ಔಟ್ ಕಂ ಏನು? ಆಗ ಮೇಕೆದಾಟು ನೆನಪಾಗಲಿಲ್ಲವೆ ಎಂದು ಪ್ರಶ್ನಿಸಿದರು. ಅಂತಾರಾಜ್ಯ ಯೋಜನೆ ಆರಂಭಿಸಲು 4 ಹಂತ ಇರುತ್ತದೆ. ಡಿಪಿಅರ್, ಅರಣ್ಯ ನಾಶದ ಅಂದಾಜು ಮತ್ತು ಬೇರೆಡೆ ಸಸ್ಯಗಳನ್ನು ಬೆಳೆಸಲು ಭೂಮಿ ಗುರುತಿಸುವುದು, ಪರಿಸರ ಇಲಾಖೆಯ ಅನುಮೋದನೆ ಮತ್ತು ಕೇಂದ್ರ ಜಲ ಪ್ರಾಧಿಕಾರದ ಅನುಮೋದನೆ ಎಂಬ ಹಲವು ಹಂತಗಳನ್ನು ದಾಟಬೇಕು. ಕಾಂಗ್ರೆಸ್ ಐದು ವರ್ಷ ಅಧಿಕಾರದಲ್ಲಿ ಇದ್ದಾಗ ಏನೆಲ್ಲಾ ಕೆಲಸಗಳ ಆಗಿದ್ದವು ಎಂದು ಪ್ರಶ್ನಿಸಿದರು. ಸಮ್ಮಿಶ್ರ ಸರ್ಕಾರ ಬರುವವರೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಕೆಯಾಗಿರಲಿಲ್ಲ ಎಂದರು.

ರಾಜೀವ್ ಅವರ ಮಾತಿಗೆ ವಿಪಕ್ಷ ಉಪನಾಯಕ ಖಾದರ್ ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಡಿಪಿಆರ್ ಆಗಿತ್ತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಡಿಪಿಆರ್ ಪರಿಷ್ಕರಿಸಲಾಯಿತು. ಕೇಂದ್ರ ಸರ್ಕಾರ ಈಗ ಅನುಮತಿ ಕೊಡಬೇಕು. ಮೇಕೆದಾಟು ಯೋಜನೆಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಮಧ್ಯಪ್ರವೇಶ ಮಾಡಿ ಮಾತನಾಡಿದ ಕುಣಿಗಲ್ ಶಾಸಕ ರಂಗನಾಥ್ ಎರಡೂ ಕಡೆ ನಿಮ್ಮದೇ ಬಿಜೆಪಿ ಸರ್ಕಾರ ಇದೆ. ಪರಿಸರ ಇಲಾಖೆಯ ಕ್ಲಿಯರೆನ್ಸ್ ತೆಗೆದುಕೊಳ್ಳಲು ಆಗಿಲ್ಲ. ಅನುಮೋದನೆ ತೆಗೆದುಕೊಳ್ಳಿ ಎಂದು ಸಲಹೆ ಮಾಡಿದರು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಪ್ರಸ್ತಾವದ ಮೇಲೆ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಮಾತನಾಡಿ, ದೀಪ ಹಚ್ವಿದರೆ ಕೋವಿಡ್ ಹೋಗುತ್ತಾ ಎಂದು ವಿಪಕ್ಷದವರು ಪ್ರಶ್ನಿಸಿದರು. ಕೊವಿಡ್ ನಿಯಂತ್ರಣ ವಿಚಾರದಲ್ಲಿ ಮೋದಿಯನ್ನು ಸಮರ್ಥಿಸಿಕೊಂಡರು. ದೀಪ ಹಚ್ಚಿದರೆ, ಜಾಗಟೆ ಬಾರಿಸಿದರೆ ಕೊರೊನಾ ಹೋಗಲ್ಲವೆಂಬ ವಿಚಾರ ಪ್ರಧಾನಿ ಮೋದಿಗೂ ಗೊತ್ತಿದೆ. ಆದರೆ ಎಲ್ಲರನ್ನೂ ಒಗ್ಗೂಡಿಸಲು ಮೋದಿ ದೀಪ ಹಚ್ಚಿ ಜಾಗಟೆ ಬಾರಿಸುವಂತೆ ಸಂದೇಶ ನೀಡಿದ್ದರು ಎಂದರು. ಆದರೆ ಇಷ್ಟೊಂದು ಸಂಖ್ಯೆಯಲ್ಲಿ ಉಚಿತ ಲಸಿಕೆ ಕೊಟ್ಟಿರುವುದು ಸಾಧನೆ ಅಲ್ವಾ ಎಂದು ಪ್ರಶ್ನಿಸಿದರು.

ಫಲಾನುಭವಿಗಳಿಗೆ ನೇರವಾಗಿ ಹಣ ತಲುಪಿಸುವ ವಿಚಾರದ ಬಗ್ಗೆ ಮಾತನಾಡಿದ ಶಾಸಕ ರಾಜೀವ್, ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಈ ಯೋಜನೆಯು ಪರಿಣಾಮಕಾರಿಯಾಗಿ ಜಾರಿಯಾಯಿತು. ಭ್ರಷ್ಟಾಚಾರ ತಪ್ಪಿಸಿ ಫಲಾನುಭವಿಗಳಿಗೆ ನೇರವಾಗಿ ಹಣ ತಲುಪಿಸಲು ಮೋದಿ ಅವರೇ ಕಾರಣ ಎಂದರು. ರಾಜೀವ್ ಮಾತಿಗೆ ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತಪಡಿಸಿದರು. ಯುಪಿಎ ಅವಧಿಯಲ್ಲಿ ಜಾರಿ ಮಾಡಿದ್ದ ಯೋಜನೆಯನ್ನು ಬಿಜೆಪಿ ಸರ್ಕಾರ ಅನುಷ್ಠಾನಗೊಳಿಸಿತು ಎಂದು ರಾಜೀವ್​ ಅವರಿಗೆ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ತಿರುಗೇಟು ನೀಡಿದರು.

ಬಿಟ್​ಕಾಯಿನ್ ವಿಚಾರದ ಪ್ರಸ್ತಾಪವು ಸದನದಲ್ಲಿ ಬಂತು. ಕಾಂಗ್ರೆಸ್ ಈ ವಿಚಾರದಲ್ಲಿ ಆರೋಪ ಮಾಡಿ ಹಿಟ್ ಆ್ಯಂಡ್ ರನ್ ಮಾಡಿತು ಎಂದ ಶಾಸಕ ಪಿ.ರಾಜೀವ್ ಆರೋಪಿಸಿದರು. ಶ್ರೀಕಿಯನ್ನು ಡ್ರಗ್ಸ್ ಕೇಸ್‌ನಲ್ಲಿ ವಶಕ್ಕೆ ಪಡೆದಾಗ ಚಾರ್ಟರ್ಡ್ ಫ್ಲೈಟ್‌ನಲ್ಲಿ ಓಡಾಡಿಸಿದ್ದರು ಎಂದ ಅವನೇ ಹೇಳಿದ್ದ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡಿದರು. 2017ರಲ್ಲಿ ಯುಬಿ ಸಿಟಿಯಲ್ಲಿ ಶಾಸಕರ ಮಗ ಅರೆಸ್ಟ್ ಆದಾಗ ಶ್ರೀಕಿಯನ್ನು ಬಂಧಿಸಿದ್ದರೆ ಆಗುತ್ತಿತ್ತು ಎಂದು ಅವರು ವಿಶ್ಲೇಷಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ, ಅಂದು ನಾನು ಇದೇ ಮಾತು ಹೇಳಿದಾಗ ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ ಎಂದರು. ಅಂದು ಶಾಸಕರ ಮಗ ಅರೆಸ್ಟ್ ಆದಾಗ ಇನ್ನೊಬ್ಬ ಮಗ ಶ್ರೀಕಿ ಜೊತೆ ಚಾರ್ಟರ್ಡ್ ಫ್ಲೈಟ್​ನಲ್ಲಿ ಇದ್ದ ಎಂದು ಹೇಳಿದಾಗ, ಯಾವ ಶಾಸಕರ ಮಗ ಎಂದು ಹೇಳಿ ಎಂದು ಮಳವಳ್ಳಿ ಶಾಸಕ ಡಾ.ಅನ್ನದಾನಿ ಆಗ್ರಹಿಸಿದರು.

ಮೊಹಮ್ಮದ್ ನಲಪಾಡ್ ಅರೆಸ್ಟ್ ಆಗಿದ್ದಾಗ ನಲಪಾಡ್ ತಮ್ಮ ಶ್ರೀಕಿ ಜೊತೆ ಫ್ಲೈಟ್​‌ನಲ್ಲಿ ಇದ್ದ ಎಂದು ರಾಜೀವ್ ಹೇಳಿದರು. ನಲಪಾಡ್ ಯಾವಾಗ ಅರೆಸ್ಟ್ ಆಗಿದ್ದ ಎಂದು ರಾಜೀವ್ ಮಾತಿಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತು. ನಲಪಾಡ್ ಅರೆಸ್ಟ್ ಆಗಿದ್ದರೋ ಇಲ್ಲವೋ ಎಂದು ಗೃಹ ಸಚಿವರು ಸ್ಪಷ್ಟೀಕರಣ ಕೊಡಬೇಕು ಎಂದು ಕಾಂಗ್ರೆಸ್ ಒತ್ತಾಯಿತು. ಈ ವೇಳೆ ರಾಜೀವ್ ಬೆಂಬಲಕ್ಕೆ ಶಾಸಕ ರೇಣುಕಾಚಾರ್ಯ ನಿಂತರು.

ಪೊಲೀಸರಿಂದ ತಪ್ಪಿಸಿಕೊಳ್ಳುವಷ್ಟು ಸಾಮರ್ಥ್ಯ ಇರುವ ಶ್ರೀಕಿಗೆ ಅಷ್ಟೊಂದು ಪ್ರಭಾವವಿದೆಯೇ? ನಲಪಾಡ್ ಅರೆಸ್ಟ್ ಮಾಡಿದಾಗ ಇವನನ್ನು ಅರೆಸ್ಟ್ ಮಾಡಲಿಲ್ಲ. ಅಂದು ಅರೆಸ್ಟ್ ಮಾಡಿದ್ರೆ ಅದರ ಹಿಂದೆ ಇರುವವರ ಜಾಲ ಸಿಗುತ್ತಿತ್ತು ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್, ನಿಮ್ಮದೇ ಸರ್ಕಾರ ಇತ್ತಲ್ಲಾ, ಯಾಕೆ ವಶಕ್ಕೆ ಪಡೆದಿಲ್ಲ ಎಂದು ಪ್ರಶ್ನಿಸಿದರು. ನಿಮಗೆ ಇದರ ಬಗ್ಗೆ ಮಾಹಿತಿ ಇಲ್ಲ ಕುಳಿತುಕೊಳ್ಳಿ ಎಂದು ಜಮೀರ್‌ಗೆ ಸ್ಪೀಕರ್ ಸೂಚಿಸಿದರು.

ವಿಧಾನ ಪರಿಷತ್​ನಲ್ಲಿ ಪ್ರತಿಧ್ವನಿಸಿದ ಹಿಜಾಬ್ ವಿವಾದ

ರಾಜ್ಯದ ಜನರು ಬೆಂಕಿಯಲ್ಲಿ ಬೇಯುತ್ತಿದ್ದಾರೆ. ವಿದ್ಯಾಸಂಸ್ಥೆಗಳಲ್ಲಿ ಅನೇಕ ವಿಷಯಗಳು ನಡೆಯುತ್ತಿದೆ ಎಂದು ವಿಧಾನ ಪರಿಷತ್‌ನಲ್ಲಿ ಸದಸ್ಯ ಹರೀಶ್ ಕುಮಾರ್ ಪ್ರಸ್ತಾಪಿಸಿದರು. ರಾಜ್ಯದ ವಿದ್ಯಾಲಯಗಳಲ್ಲಿ ರಾಜಕೀಯ ಬರುತ್ತಿದೆ. ಹಿಜಾಬ್, ಕೇಸರಿ ಶಾಲು ಅಂತ ಗಲಾಟೆ ಆಗುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಲಾಠಿಚಾರ್ಜ್ ಆಗುತ್ತಿದೆ. ತ್ರಿವರ್ಣ ಧ್ವಜ ಹಾರೋ ಕಡೆ ಕೇಸರಿ ಧ್ವಜ ಹಾರಿಸುತ್ತಾರೆ. ಕೆಂಪುಕೋಟೆ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ ಎನ್ನುತ್ತಾರೆ. ಹಿಜಾಬ್ ವಿವಾದ ಈಗ ಅಂತಾರಾಷ್ಟ್ರೀಯ ವಿಷಯವಾಗಿದೆ. ಗರ್ಭದಲ್ಲಿ ಸಂಸ್ಕಾರ ಕಲಿಸುವ ಬಗ್ಗೆಯೂ ಕೆಲವರು ಮಾತನಾಡುತ್ತಿದ್ದಾರೆ. ಧಾರ್ಮಿಕತೆಗೆ ಪರಿಮಿತಿ ಇರಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ: ಭಾಷಣದ ಮೂಲಕ ರಾಜ್ಯಪಾಲ ಟಿ.ಸಿ. ಗೆಹ್ಲೋಟ್ ರಾಜ್ಯದ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ: ಸಿದ್ದರಾಮಯ್ಯ

ಇದನ್ನೂ ಓದಿ: ಹಿಜಾಬ್​ ಇಸ್ಲಾಂನಲ್ಲಿ ಅತ್ಯಂತ ಮುಖ್ಯವೆಂದು ಕುರಾನ್​ ಹೇಳಿಲ್ಲ, ಸುಮ್ಮನೆ ಹೋಗಿ ವಿದ್ಯೆ ಕಲಿಯಿರಿ: ಕೇರಳ ರಾಜ್ಯಪಾಲ ಆರಿಫ್​ ಮೊಹಮ್ಮದ್ ಖಾನ್