
ಬೆಂಗಳೂರು, ಡಿಸೆಂಬರ್ 24: ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಜ್ ಖಾನ್ ನಿವಾಸದಲ್ಲಿ ಲೋಕಾಯುಕ್ತ ದಾಳಿ ಮುಕ್ತಾಯವಾಗಿದ್ದು, ಸರ್ಫರಾಜ್ ಖಾನ್ ಬಳಿ 14.38 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. 8.44 ಕೋಟಿ ರೂ. ಮೌಲ್ಯ ಸ್ಥಿರಾಸ್ತಿ ಮತ್ತು 5.93 ಕೋಟಿ ರೂ. ಮೊತ್ತದ ಚರಾಸ್ತಿ ಪತ್ತೆಯಾಗಿದೆ. 4 ವಾಸದ ಮನೆ ಮತ್ತು 35 ಎಕರೆ ಕೃಷಿ ಜಮೀನು ದಾಖಲೆ, 66,500 ಹಣ, 2.99 ಲಕ್ಷ ಮೌಲ್ಯದ ಚಿನ್ನ, 1.29 ಕೋಟಿ ಎಫ್‌ಡಿ ಇರೋದು ಗೊತ್ತಾಗಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಈ ದಾಳಿ ನಡೆದಿದ್ದು, ಬೆಂಗಳೂರಿನ ಹಲಸೂರು ನಿವಾಸ, ಇತರ ಆರು ಮನೆಗಳು ಸೇರಿದಂತೆ ಒಟ್ಟು ಏಳು ಮನೆಗಳು, ಕೊಡಗಿನಲ್ಲಿರುವ ಎರಡು ಕಾಫಿ ಎಸ್ಟೇಟ್‌ಗಳು ಮತ್ತು ಹೆಚ್.ಡಿ.ಕೋಟೆಯಲ್ಲಿನ ಒಂದು ರೆಸಾರ್ಟ್ ಸೇರಿ ಸರ್ಫರಾಜ್ ಖಾನ್ಗೆ ಸೇರಿದ ಒಟ್ಟು 13 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಸರ್ದಾರ್ ಸರ್ಫರಾಜ್ ಖಾನ್ ವಸತಿ ಇಲಾಖೆಗೆ ನಿಯೋಜನೆಗೊಂಡಿರುವ ಅಧಿಕಾರಿಯಾಗಿದ್ದು, ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಕುರಿತು ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು (ಡಿ.24) ಬೆಳ್ಳಂಬೆಳಿಗ್ಗೆ 50ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಎಲ್ಲಾ ಸ್ಥಳಗಳಲ್ಲಿ ದಾಖಲೆಗಳ ಪರಿಶೀಲನೆ ಮತ್ತು ಆಸ್ತಿ ವಿವರಗಳ ಸಂಗ್ರಹ ಕಾರ್ಯ ನಡೆದಿದೆ.
ಇದನ್ನೂ ಓದಿ: ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿಗೆ ಲೋಕಾಯುಕ್ತ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತು ಇದೆ ಗೊತ್ತೇ?
30 ಸಾವಿರ ರೂ. ಲಂಚ ಸ್ವೀಕರಿಸುವಾಗ ಬೆಂಗಳೂರಿನ ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಕೃಷ್ಣಮೂರ್ತಿ ಲೋಕಾ ಬಲೆಗೆ ಬಿದ್ದಿದ್ದಾರೆ. ಸಾಗರ್ ಹೋಟೆಲ್ ಮಾಲೀಕರ ಬಳಿ ಲಂಚ ಸ್ವೀಕರಿಸುವಾಗ ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲೇ ಸಿಕ್ಕಿಬಿದ್ದಿದ್ದಾರೆ. ಪ್ರತಿ ತಿಂಗಳು 32 ಸಾವಿರ ರೂಪಾಯಿ ಕೊಡಬೇಕೆಂದು ಎಸಿಪಿ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಲೋಕಾಯುಕ್ತಕ್ಕೆ ಸಾಗರ್ ಹೋಟೆಲ್ ಮಾಲೀಕ ದೂರು ನೀಡಿದ್ದರು. ಎಸಿಪಿ ಕೃಷ್ಣಮೂರ್ತಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋ ಕೂಡ ಲಭ್ಯವಾಗಿತ್ತು. ಈ ಆಧಾರದಲ್ಲಿಯೇ ದೂರು ದಾಖಲಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.