
ಬೆಂಗಳೂರು, ಅಕ್ಟೋಬರ್ 29: ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ಮಾತು ಎಂದು ಹೇಳುವ ಮೂಲಕ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ಏನು ಮಾತನಾಡಿದ್ದೆ, ಮೊನ್ನೆ ಏನು ಮಾತನಾಡಿದ್ದೆ, ಇಂದು ಏನು ಮಾತನಾಡುತ್ತಿದ್ದೇನೆ, ನಾಳೆ ಏನು ಮಾತನಾಡುತ್ತೇನೆ ಎಂಬುದರ ಬಗ್ಗೆ ಸ್ಪಷ್ಟತೆ ಸ್ವತಃ ಕುಮಾರಸ್ವಾಮಿ ಅವರಿಗೇ ಇಲ್ಲ. ಸಿದ್ದರಾಮಯ್ಯ ವಿಷಯವಿಟ್ಟುಕೊಂಡು ಒಮ್ಮೆ ಸಿಎಂ ಕಡೆ ಬೆರಳು ತೋರಿಸ್ತಾರೆ. ಮತ್ತೊಮ್ಮೆ ಸಚಿವ ಜಮೀರ್ ಅಹ್ಮದ್ ಕಡೆ, ಇನ್ನೊಮ್ಮೆ ನಮ್ಮ ಕುಟುಂಬದ ಕಡೆ ಕೈತೋರಿಸುತ್ತಾರೆ. ಕಂಡವರ ಮನೆಗೆ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳುವುದಕ್ಕೆ ಮನೆಮುರುಕತನ ಎನ್ನುತ್ತಾರೆ ಎಂದವರು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯನವರನ್ನು ಅತಿ ಹೆಚ್ಚು ಅವಮಾನಿಸಿದವರು ಕುಮಾರಸ್ವಾಮಿ ಮಾತ್ರ. ಸಿದ್ದರಾಮಯ್ಯಗೆ ಸಿಎಂ ಹುದ್ದೆ ತಪ್ಪಿಸಿದ್ದು ಯಾರಾದರೂ ಇದ್ದರೆ ಅದು ಅವರು ಮಾತ್ರ. ಇದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸ್ಪಷ್ಟವಾಗಿ ಗೋಚರಿಸುವ ಸತ್ಯ. ಸಿದ್ದರಾಮಯ್ಯನವರ ರಾಜಕೀಯ ಜೀವನದುದ್ದಕ್ಕೂ ಎಡೆಬಿಡದೆ ಕಾಡಿದವರು ಇಂದು ಖರ್ಗೆ ಕುಟುಂಬದ ಕಡೆ ತಿರುಗಿದ್ದಾರೆ. ನಿಮ್ಮ ಐಟಿ ಸೆಲ್‌ನ ಹುಡುಗರು ವಿಚಾರಣೆಗೆ ಹಾಜರಾಗುತ್ತಿಲ್ಲವೇಕೆ? ನಮ್ಮವರ ಪಾತ್ರವಿಲ್ಲ ಎಂದು ಹೇಳುವ ನೈತಿಕತೆ ತೋರುತ್ತಿಲ್ಲವೇಕೆ? ವಿಡಿಯೋ ಅಪ್‌ಲೋಡ್ ಮಾಡಿದ್ದನ್ನು ನೀವು ವಿರೋಧಿಸುತ್ತಿಲ್ಲವೇಕೆ? ಅಕ್ಕ ಸಮ್ಮೇಳನದ ಹೆಸರಿನಲ್ಲಿ ಅಮೆರಿಕಕ್ಕೆ ಹೋಗಿ ನಡೆಸಿದ ಷಡ್ಯಂತ್ರವೇನು? ಮಾತನಾಡುತ್ತೀರಾ, ಕುಮಾರಣ್ಣಾ ಎಂದು ಪ್ರಿಯಾಂಕ್ ಖರ್ಗೆ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ‘ಮಿಸ್ಟರ್ ಪ್ರಿಯಾಂಕ್… ಎಲ್ಲೂ ಹೋಗಲ್ಲ, ಬಂದು ನಿಮ್ಮ ಆಟ ಬಯಲು ಮಾಡ್ತೀನಿ: ಮತ್ತೆ ಸಿಡಿದ ಕುಮಾರಸ್ವಾಮಿ
ಒಡಹುಟ್ಟಿದವನ ಕುಟುಂಬದ ಬೆಳವಣಿಗೆಯನ್ನೇ ನೀವು ಸಹಿಸಲಿಲ್ಲ. ಇನ್ನು ಕೇಂದ್ರ ಸಚಿವ ಕುಮಾರಸ್ವಾಮಿ ನಮ್ಮನ್ನು ಸಹಿಸಬಲ್ಲರೇ? ಕುಮಾರಸ್ವಾಮಿಯವರೇ, ಕಿಂಚಿತ್ತಾದರೂ ಮಾತಿನಲ್ಲಿ ಘನತೆ ಬೆಳೆಸಿಕೊಳ್ಳಿ. ಸತ್ಯ ಹೇಳುವುದನ್ನು ರೂಢಿಸಿಕೊಳ್ಳಿ, ನಡತೆಯಲ್ಲಿ ತೂಕ ಹೆಚ್ಚಿಸಿಕೊಳ್ಳಿ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:54 pm, Thu, 29 October 26