ಬೆಂಗಳೂರು: ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದ್ದಂತೆಯೇ ಪೊಲೀಸ್ ಇಲಾಖೆಯಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಎರಡ್ಮೂರು ವರ್ಷದಿಂದ ಒಂದೇ ಕಡೆ ತಳವೂರಿರುವ ಹಿರಿಯ, ಕಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಜತೆಗೆ, ಪಕ್ಷಗಳನ್ನು ನೆಚ್ಚಿಕೊಂಡಿದ್ದ ಅಧಿಕಾರಿಗಳಿಗೆ ಬೆಂಗಳೂರು ನಗರದಿಂದ ಬೇರೆಡೆಗೆ ವರ್ಗಾವಣೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಉನ್ನತ ಸ್ಥಾನದಲ್ಲಿರುವ ಹಿರಿಯ ಅಧಿಕಾರಿಗಳ ಜೊತೆಗೆ ಕೆಳ ಹಂತದ ಅಧಿಕಾರಿಗಳಿಗೂ ವರ್ಗಾವಣೆ ಬಿಸಿ ತಟ್ಟಲಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಐದು ವರ್ಷಗಳ ಆಗು ಹೋಗುಗಳನ್ನು ಗಮನಿಸಿರುವ ಕಾಂಗ್ರೆಸ್ ನಾಯಕರು, ಅದಕ್ಕನುಗುಣವಾಗಿ ವರ್ಗಾವಣೆ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಅನೇಕ ಬಾರಿ ಕೆಲವು ಅಧಿಕಾರಿಗಳು ಕಾಂಗ್ರೆಸ್ ನಾಯಕರನ್ನು ಎದರುಹಾಕಿಕೊಂಡಿದ್ದರು. ಪ್ರತಿಭಟನೆ ವೇಳೆ ಕೂಡ ಪೊಲೀಸ್ ಹಿರಿಯ ಅಧಿಕಾರಿಗಳ ವಿರುದ್ಧ ಕೆಲವು ಮಂದಿ ಕಾಂಗ್ರೆಸ್ ನಾಯಕರು ಅಸಮಧಾನಗೊಂಡಿದ್ದರು. ‘ನೀ ಯಾವ ಪಕ್ಷಕ್ಕೆ ಕೆಲಸ ಮಾಡ್ತೀಯ ಎಂಬುದು ಗೊತ್ತಿದೆ’ ಎಂದು ಕಾಂಗ್ರೆಸ್ ನಾಯಕರು ಧಮಕಿ ಹಾಕಿದ್ದು ಕೂಡ ವರದಿಯಾಗಿತ್ತು. ಸದ್ಯ ಆ ಅಧಿಕಾರಿ ಕೂಡ ಉನ್ನತ ಹುದ್ದೆಯಲ್ಲಿದ್ದಾರೆ.
ಇನ್ಸ್ಪೆಕ್ಟರ್, ಎಸಿಪಿ, ಡಿಸಿಪಿ, ಹೆಚ್ಚುವರಿ ಪೊಲೀಸ್ ಆಯುಕ್ತ, ಜಂಟಿ ಪೊಲೀಸ್ ಆಯುಕ್ತ, ನಗರ ಪೊಲೀಸ್ ಆಯುಕ್ತ ಹೀಗೆ ಹಲವರ ಬದಲಾವಣೆ ಖಚಿತ ಎನ್ನಲಾಗುತ್ತಿದೆ. ಆಯಾ ವಿಭಾಗದ ಶಾಸಕ, ಸಚಿವರಿಂದ ರೆಕಮೆಂಡ್ ಮಾಡಿಸಿ ಬಂದ ಅಧಿಕಾರಿಗಳು ಕೂಡ ನಗರದಲ್ಲಿದ್ದಾರೆ. ಇವರನ್ನೂ ವರ್ಗಾವಣೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ನಗರ ಪೊಲೀಸ್ ಆಯುಕ್ತ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಸದ್ಯ ನಗರ ಪೊಲೀಸ್ ಆಯುಕ್ತರಾಗಿ ಪ್ರತಾಪ್ ರೆಡ್ಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರನ್ನೂ ಚರ್ಗಾವಣೆ ಮಾಡುವ ಬಗ್ಗೆ ಚರ್ಚೆ ಮುಂದುವರೆದಿದೆ.
ಇದನ್ನೂ ಓದಿ: ಡಿಸಿಎಂ ಹುದ್ದೆ ಸೃಷ್ಟಿಸಿದರೆ ಕಾನೂನು ಹೋರಾಟ; ಕಾಂಗ್ರೆಸ್ಗೆ ಎಚ್ಚರಿಕೆ ನೀಡಿದ ಆರ್ಟಿಐ ಕಾರ್ಯಕರ್ತ ಹೇಳಿದ್ದೇನು?
ಹಿರಿತನದ ಆಧಾರದಲ್ಲಿ ದಯಾನಂದ್ ಅವರು ನಗರ ಪೊಲೀಸ್ ಆಯುಕ್ತರಾಗಬೇಕಿದೆ. ಪ್ರತಾಪ್ ರೆಡ್ಡಿ ನೇಮಕವಾಗುವ ಮುನ್ನವೇ ದಯಾನಂದ್ ಹೆಸರು ಕೇಳಿ ಬಂದಿತ್ತು. ಆದರೆ ನಂತರ ಪ್ರತಾಪ್ ರೆಡ್ಡಿ ಅವರನ್ನು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು.
ಸರ್ಕಾರ ರಚನೆಯಾದ ಬಳಿಕ ಮೊದಲ ಕೆಲಸವೇ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಎಂದು ಮೂಲಗಳು ತಿಳಿಸಿವೆ. ಇದೇ ತಿಂಗಳ ಒಳಗೆ ಮೇಜರ್ ಸರ್ಜರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ