ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ: ತನಿಖೆ ವೇಳೆ ಬಯಲಾಯ್ತು ಮಾರತ್ತಹಳ್ಳಿ ಪಿಎಸ್​ಐನ ಸ್ಫೋಟಕ ಸತ್ಯ

|

Updated on: Mar 24, 2023 | 9:35 AM

ಕಿಡ್ನಾಪ್ ಕೇಸ್ ಸಂಬಂಧ ವೈಟ್ ಫೀಲ್ಡ್ ಡಿಸಿಪಿ ಗಿರೀಶ್​ ಅವರು ಪಿಎಸ್​ಐ ರಂಗೇಶ್, ಸಿಬ್ಬಂದಿ ಹರೀಶ್, ಮಹದೇವ್ ನಾಯ್ಕ್, ಮಹೇಶ್​ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ: ತನಿಖೆ ವೇಳೆ ಬಯಲಾಯ್ತು ಮಾರತ್ತಹಳ್ಳಿ ಪಿಎಸ್​ಐನ ಸ್ಫೋಟಕ ಸತ್ಯ
ಮಾರತ್ತಹಳ್ಳಿ ಪೊಲೀಸ್ ಠಾಣೆ
Follow us on

ಬೆಂಗಳೂರು: ರಾಮಾಂಜಿನಿ ಎಂಬ ವ್ಯಕ್ತಿಯನ್ನು ಕಿಡ್ನಾಪ್ ಮಾಡಿ 45 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಾಗಲೂರು ಪೊಲೀಸರ ತನಿಖೆ ವೇಳೆ ಸ್ಫೋಟಕ ಸತ್ಯ ಬಯಲಾಗಿದೆ. ಈ ಪ್ರಕರಣದಲ್ಲಿ ಮಾರತ್ತಹಳ್ಳಿ ಪಿಎಸ್ಐ ರಂಗೇಶ್ ಕಳ್ಳಾಟ ಬಟಾಬಯಲಾಗಿದೆ. ಮಾರತ್ತಹಳ್ಳಿ ಪಿಎಸ್​ಐ ಮತ್ತು ಸಿಬ್ಬಂದಿ ಸೇರಿಕೊಂಡು ಈ ಕೃತ್ಯ ಎಸಗಿದ್ದು ಬಾಗಲೂರು ಪೊಲೀಸರ ತನಿಖಾ ವರದಿ ಆಧರಿಸಿ ನಾಲ್ವರನ್ನು ಅಮಾನತುಗೊಳಿಸಲಾಗಿದೆ. ವೈಟ್ ಫೀಲ್ಡ್ ಡಿಸಿಪಿ ಗಿರೀಶ್​ ಅವರು ಪಿಎಸ್​ಐ ರಂಗೇಶ್, ಸಿಬ್ಬಂದಿ ಹರೀಶ್, ಮಹದೇವ್ ನಾಯ್ಕ್, ಮಹೇಶ್​ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಹಣ ಮಾಡಲೆಂದೇ ಫೀಲ್ಡಿಗೆ ಇಳಿದಿದ್ದ ಪಿಎಸ್ಐ ರಂಗೇಶ್ ಮತ್ತು ತಂಡ ರಾಮಾಂಜನಿಯನ್ನು ಬಾಗಲೂರು ಅಂಗಡಿಯಿಂದ ಕರೆತಂದಿದ್ದರು. ಆದರೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗದೆ ಕಾರಿನಲ್ಲಿ ಮಾರತ್ತಹಳ್ಳಿ ಎಲ್ಲಾ ರೌಂಡ್ಸ್ ಹಾಕಿಸಿದ್ದಾರೆ. ಪೊಲೀಸ್ ಠಾಣೆ ಪಕ್ಕದಲ್ಲಿ ರಾಮಾಂಜನಿಯನ್ನ ಇರಿಸಿದ್ದಾರೆ. ಎರಡು ದಿನಗಳ ಕಾಲ ಜೊತೆಗೆ ಇಟ್ಟುಕೊಂಡು ಬಳಿಕ ರಾಮಾಂಜನಿಯ ತಂದೆಗೆ ಫೋನ್ ಮಾಡಿ 45 ಲಕ್ಷ ಹಣ ತರುವಂತೆ ಹೇಳಿಸಿದ್ದಾರೆ. ಇದರಿಂದ ಆತಂಕಗೊಂಡ ತಂದೆ ಮಾರ್ಚ್ 21 ರಂದು ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಗನನ್ನ ಕಿಡ್ನಾಪ್ ಮಾಡಿದ್ದಾರೆಂದು ಎಫ್ಐಆರ್ ದಾಖಲಿಸಿದ್ದಾರೆ. ಈ ವೇಳೆ ಬಾಗಲೂರು ಪೊಲೀಸರು ಮಾರತ್ತಹಳ್ಳಿ ಪೊಲೀಸರ ಸಂಪರ್ಕ ಮಾಡಿದ್ದಾರೆ. ಆಗ ರಾಮಾಂಜನಿಯನ್ನ ಮಾರತ್ತಹಳ್ಳಿ ಠಾಣೆ ಬಳಿ ಇರಿಸಿಕೊಂಡಿದ್ದು ಪತ್ತೆಯಾಗಿದೆ. ನಂತರ ಮಾರತ್ತಹಳ್ಳಿ ಪೊಲೀಸರು ಬಾಗಲೂರು ಠಾಣೆಗೆ ವ್ಯಕ್ತಿಯನ್ನು ಬಿಟ್ಟುಬಂದಿದ್ದಾರೆ.

ಇಷ್ಟೆಲ್ಲ ಆದ ಮೇಲೆ ಬಾಗಲೂರು ಪೊಲೀಸರು ವಿಚಾರಣೆ ನಡೆಸಿದ್ದು ಈ ವೇಳೆ ರಾಮಾಂಜನಿ ಎಲ್ಲವನ್ನು ಹೇಳಿದ್ದಾನೆ. ಇದೆಲ್ಲಾ ಹೈಡ್ರಾಮಾ ಬಳಿಕ ರಾಮಾಂಜನಿ ಮೇಲೆ ಮಾರತ್ತಹಳ್ಳಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಹುಲಿ ಚರ್ಮ ಮಾರಾಟಕ್ಕೆ ಯತ್ನ ಎಂದು ಎಫ್ಐಆರ್ ಹಾಕಲಾಗಿದೆ. ಅಸಲಿಗೆ ಅದು ನಕಲಿ ಹುಲಿ ಚರ್ಮ ಅನ್ನೋದು ಗೊತ್ತಾಗಿದೆ.

ಇದನ್ನೂ ಓದಿ: ಪ್ರಿಯಕರನನ್ನು ಮರಕ್ಕೆ ಕಟ್ಟಿಹಾಕಿ ಆತನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ನಾಲ್ವರು ಅಮಾನತು

ಬಾಗಲೂರು ಪೊಲೀಸರಿಂದ ಪೊಲೀಸ್ ಕಮೀಷನರ್​ಗೆ ಪ್ರಾಥಮಿಕ ತನಿಖಾ ವರದಿ ಸಲ್ಲಿಸಲಾಗಿದೆ. ತನಿಖಾ ವರದಿ ಸಲ್ಲಿಕೆ ಬೆನ್ನಲ್ಲೇ ಪಿಎಸ್​ಐ ಸೇರಿ ನಾಲ್ವರನ್ನು ಅಮಾನತು ಮಾಡಿ ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ಆದೇಶ ಹೊರಡಿಸಿದ್ದಾರೆ. ತನಿಖೆ ವೇಳೆ ಪಿಎಸ್​ಐ ರಂಗೇಶ್ ಸೇರಿ ಮೂವರು ಸಿಬ್ಬಂದಿಗಳು ಪ್ರಕರಣದಲ್ಲಿ ಭಾಗಿ ಆರೋಪ ಸಾಬೀತಾಗಿದೆ. ಕರ್ತವ್ಯ ಲೋಪ ಹಾಗೂ ಹಣದ ಬೇಡಿಕೆ ಇಟ್ಟು ಬೆದರಿಕೆ ಹಾಕಿರುವುದು ರಿಪೋರ್ಟ್ ನಲ್ಲಿ ಉಲ್ಲೇಖವಾಗಿದೆ. ಎರಡು ದಿನಗಳ ಬಳಿಕ ತಡವಾಗಿ ಪ್ರಕರಣ ದಾಖಲು ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದ ಹಿನ್ನಲೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಇಲಾಖೆ ತನಿಖೆ ಮಾಡಲು ಸಹ ಆದೇಶ ಮಾಡಿದ್ದಾರೆ. ಸದ್ಯ ಪರಾರಿಯಾಗಿರುವ ಪಿಎಸ್​ಐ ರಂಗೇಶ್, ಸಿಬ್ಬಂದಿಗಳಾದ ಮಹದೇವ್ ನಾಯ್ಕ್, ಮಹೇಶ್ ಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಆರೋಪಿತರ ಹುಟ್ಟೂರಿಗೆ ತೆರಳಿ ಬಾಗಲೂರು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:35 am, Fri, 24 March 23