
ಬೆಂಗಳೂರು, ಡಿಸೆಂಬರ್ 11: ಮೈಕ್ರೋಸಾಫ್ಟ್ ಸಪೋರ್ಟ್ ಹೆಸರಲ್ಲಿ ಬೆಂಗಳೂರಿನ (Bengaluru) ಸೈಬರ್ ವಂಚಕರ ಗ್ಯಾಂಗ್ ಅಮೆರಿಕ ಮತ್ತು ಬ್ರಿಟನ್ ಪ್ರಜೆಗಳಿಂದ ಕೋಟ್ಯಂತರ ರೂ. ದೋಚಿರುವುದು ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳ ತನಿಖೆ ವೇಳೆ ಹಲವು ಸ್ಫೋಟಕ ವಿಚಾರಗಳು ಬಯಲಾಗಿದ್ದು, ವಂಚಕರು ಆಗಸ್ಟ್‌ನಿಂದ ಸುಮಾರು 150 ಮಂದಿಯನ್ನು ಗುರಿಯಾಗಿಸಿಕೊಂಡಿದ್ದರು. ಸಂತ್ರಸ್ತರಿಂದ ತಲಾ 13.5 ಕೋಟಿ ರೂ. ದೋಚಿದ್ದಾರೆ ಎಂಬುದು ತನಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ತಿಂಗಳು ವೈಟ್‌ಫೀಲ್ಡ್‌ನಲ್ಲಿರುವ ‘ಮಸ್ಕ್ ಕಮ್ಯುನಿಕೇಷನ್ಸ್’ ಮೇಲೆ ದಾಳಿ ನಡೆಸಿದ್ದ ಪೊಲೀಸರು 21 ಮಂದಿ ಶಂಕಿತರನ್ನು ಬಂಧಿಸಿದ್ದರು. ವಂಚಕರು ಮೈಕ್ರೋಸಾಫ್ಟ್ ಟೆಕ್ನಿಕಲ್ ಸಪೋರ್ಟ್ ಸಿಬ್ಬಂದಿಯ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿದ್ದರು. ಅದಕ್ಕಾಗಿ ನಕಲಿ ‘ಫೆಡರಲ್ ಟ್ರೇಡ್ ಕಮಿಷನ್ (ಎಫ್‌ಟಿಸಿ)’ ಉಲ್ಲಂಘನೆಗಳನ್ನು ಉಲ್ಲೇಖಿಸಿದ್ದರು.
ಇದೇ ಪ್ರಕರಣ ಸಂಬಂಧ ಪೊಲೀಸರು ಅಹಮದಾಬಾದ್‌ನ ರವಿ ಚೌಹಾಣ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆತ ನಕಲಿ ಮೈಕ್ರೋಸಾಫ್ಟ್ ಸಪೋರ್ಟ್ ಸೆಂಟರ್ಗೆಂದೇ ಬೆಂಗಳೂರಿನಲ್ಲಿ ಸುಮಾರು 85 ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದ. ರವಿ ಚೌಹಾಣ್ ಬಂಧನೊಂದಿಗೆ, ಈ ಪ್ರಕರಣ ಸಂಬಂಧ ಅರೆಸ್ಟ್ ಆದವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
ಆರೋಪಿಗಳು ಸಂತ್ರಸ್ತರಿಂದ ಬಿಟ್‌ಕಾಯಿನ್‌ಗಳನ್ನು ಬಿಟ್‌ಕಾಯಿನ್ ಎಟಿಎಂಗಳಲ್ಲಿ (ಬಿಟ್‌ಕಾಯಿನ್ ಎಟಿಎಂಗಳು ಬಿಟ್‌ಕಾಯಿನ್ ನೆಟ್‌ವರ್ಕ್‌ಗೆ ಸಂಪರ್ಕ ಸಾಧಿಸುವ ಕಿಯೋಸ್ಕ್‌ಗಳಾಗಿದ್ದು, ಕ್ರಿಪ್ಟೋಕರೆನ್ಸಿ ವಹಿವಾಟು ನಡೆಸಲು ಅನುವು ಮಾಡಿಕೊಡುತ್ತದೆ.) ಠೇವಣಿ ಇಡುವಂತೆ ಮಾಡಿದ್ದಾರೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಸಂತ್ರಸ್ತ ಗ್ರಾಹಕರ ಬ್ಯಾಂಕ್ ವಿವರಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಈವರೆಗೆ ಬ್ರಿಟನ್ ಮತ್ತು ಅಮೆರಿಕದ ಕನಿಷ್ಠ 150 ಮಂದಿ ವಿವಿಧ ಬಿಟ್‌ಕಾಯಿನ್ ಎಟಿಎಂಗಳಲ್ಲಿ ಸುಮಾರು 10,000 ಡಾಲರ್ ಠೇವಣಿ ಇಟ್ಟಿರುವುದು ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಇಡೀ ರಾಜ್ಯದಲ್ಲಿ ಹಬ್ಬಿದ್ದ ನಕಲಿ ಲೈಂಗಿಕ ಔಷಧಿ ಜಾಲ; ಗುಜರಾತ್ ಮೂಲದ ಆರೋಪಿ ಮನೋಜ್ ಅಂದರ್
ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಪೊಲೀಸ್ ಸೈಬರ್ ಕಮಾಂಡ್‌ನ ವಿಶೇಷ ಘಟಕದ ತಂಡಗಳು ಮತ್ತು ವೈಟ್‌ಫೀಲ್ಡ್ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ನವೆಂಬರ್ 14 ಮತ್ತು ನವೆಂಬರ್ 15 ರಂದು ವೈಟ್‌ಫೀಲ್ಡ್ ಮುಖ್ಯ ರಸ್ತೆಯ ಸಿಗ್ಮಾ ಸಾಫ್ಟ್ ಟೆಕ್ ಪಾರ್ಕ್‌ನಲ್ಲಿರುವ ಡೆಲ್ಟಾ ಕಟ್ಟಡದ 6 ನೇ ಮಹಡಿಯಲ್ಲಿರುವ ಮಸ್ಕ್ ಕಮ್ಯುನಿಕೇಷನ್ಸ್ ಕಚೇರಿಯ ಮೇಲೆ ದಾಳಿ ನಡೆಸಿದ್ದರು. ಎರಡು ದಿನಗಳ ಕಾರ್ಯಾಚರಣೆಯಲ್ಲಿ ವಂಚನೆಗೆ ಬಳಸಿದ್ದ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಹಾರ್ಡ್ ಡಿಸ್ಕ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಇತರ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕಚೇರಿಯಲ್ಲಿದ್ದ ಎಲ್ಲಾ 21 ಸಿಬ್ಬಂದಿಯನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.
Published On - 11:22 am, Thu, 11 December 25