ಮೆಟ್ರೋ ನಿರ್ಮಾಣಕ್ಕೆ ಈವರೆಗೆ 18 ಬಲಿ; ಇನ್ನಾದರೂ ಬೆಂಗಳೂರು ನಾಗರಿಕರಿಗೆ ಸಿಗಬಹುದೇ ಸುರಕ್ಷಾ ಖಾತ್ರಿ
BMRCL Accidents: ಇದು ಮೆಟ್ರೋ ಕಾಮಗಾರಿಯಲ್ಲಿ ಸಂಭವಿಸಿದ ಮೊದಲ ದುರಂತವೇನೂ ಅಲ್ಲ. ಆದರೆ ಇದೇ ಕೊನೆಯ ಬಲಿಯಾಗಲಿ ಎಂದು ನಗರವಾಸಿಗಳು ಹಾರೈಸುತ್ತಿದ್ದಾರೆ.
ಬೆಂಗಳೂರು: ನಗರದಲ್ಲಿ ಮಂಗಳವಾರ (ಜ 10) 28 ವರ್ಷದ ತಾಯಿಯೊಬ್ಬರು ತನ್ನ ಎರಡೂವರೆ ವರ್ಷದ ಗಂಡು ಮಗುವಿನೊಂದಿಗೆ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ಕುಸಿತಕ್ಕೆ (Metro Pillar Collapse) ಬಲಿಯಾಗಿದ್ದು ಈಗ ಜನಜನಿತ ವಿಷಯ. ತನ್ನ ಗಂಡನೊಂದಿಗೆ ಮಗುವನ್ನು ಬೇಬಿ ಸಿಟಿಂಗ್ಗೆ ಬಿಟ್ಟು ಬರಲು ಈ ಮಹಿಳೆ ತೆರಳುತ್ತಿದ್ದಾಗ ದುರಂತ ಸಂಭವಿಸಿತು. ಇದು ಮೆಟ್ರೋ (Namma Metro) ಕಾಮಗಾರಿಯಲ್ಲಿ ಸಂಭವಿಸಿದ ಮೊದಲ ದುರಂತವೇನೂ ಅಲ್ಲ. ಆದರೆ ಇದೇ ಕೊನೆಯ ಬಲಿಯಾಗಲಿ ಎಂದು ನಗರವಾಸಿಗಳು ಹಾರೈಸುತ್ತಿದ್ದಾರೆ. ನಗರದಲ್ಲಿ ಕಳೆದ 2007ರಿಂದೀಚೆಗೆ ನಡೆಯುತ್ತಿರುವ ಮೆಟ್ರೋ ಕಾಮಗಾರಿಗಳಲ್ಲಿ ಹಲವು ದುರಂತ ಸಾವುಗಳು ವರದಿಯಾಗಿವೆ.
ಮಂಗಳವಾರದ ದುರಂತದ ಬಗ್ಗೆ ಅಧಿಕೃತ ಹೇಳಿಕೆ ಹೊರಡಿಸಿರುವ ಮೆಟ್ರೋ ನಿಗಮವು, ‘ಕೆಆರ್ ಪುರಂ-ಹೆಬ್ಬಾಳ ಮುಖ್ಯರಸ್ತೆಯಲ್ಲಿ 218ನೇ ಪಿಲ್ಲರ್ ಸಮೀಪ ಗಯ್ ವೈರ್ ಸಡಿಲವಾಗಿದ್ದರಿಂದ ದುರಂತ ಸಂಭವಿಸಿದೆ’ ಎಂದು ಹೇಳಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಈ ಕಾಮಗಾರಿ ಅನುಷ್ಠಾನಗೊಳ್ಳುತ್ತಿದೆ. ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (Bangalore Metro Rail Corporation Limited – BMRCL) ಅನುಷ್ಠಾನದ ಹೊಣೆ ಹೊತ್ತಿದೆ.
ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿರುವ ಲೋಹಿತ್ ಕುಮಾರ್ ತಮ್ಮ ಪತ್ನಿ ತೇಜಸ್ವಿನಿ, ಮಕ್ಕಳಾದ ವಿಸ್ಮಿತಾ ಹಾಗೂ ವಿಹಾನ್ ಜೊತೆಗೂಡಿ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ. ‘ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ತೇಜಸ್ವಿನಿ ಮತ್ತು ವಿಹಾನ್ ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರಿಬ್ಬರೂ ಬದುಕಿ ಉಳಿಯಲಿಲ್ಲ. ಲೋಹಿತ್ ಮತ್ತು ಮತ್ತೊಂದು ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದರು’ ಎಂದು ಪಿಟಿಐ ವರದಿ ತಿಳಿಸಿದೆ.
ಈ ಸುದ್ದಿಯನ್ನು ಇಂಗ್ಲಿಷ್ನಲ್ಲಿ ಓದಲು ಲಿಂಕ್: 18 Metro-related deaths in Bengaluru
2009ರಿಂದ 18 ದುರಂತಗಳು
ಬೆಂಗಳೂರು ಮೆಟ್ರೋ ಕಾಮಗಾರಿಯ ಅನುಷ್ಠಾನವು ಏಪ್ರಿಲ್ 2007ರಿಂದ ಆರಂಭವಾಯಿತು. ಅಲ್ಲಿಂದೀಚೆಗೆ ಈವರೆಗೆ 18 ದುರಂತಗಳು ಸಂಭವಿಸಿವೆ. ಸತ್ತವರ ಪೈಕಿ ಬಹುತೇಕರು ಇತರ ರಾಜ್ಯಗಳಿಂದ ದುಡಿಮೆಗೆಂದು ಬಂದಿರುವ ವಲಸೆ ಕಾರ್ಮಿಕರೇ ಆಗಿದ್ದಾರೆ. ಇವರಲ್ಲಿ 25 ವರ್ಷದೊಳಗಿನವರ ಸಂಖ್ಯೆಯೇ ಹೆಚ್ಚು. ಕನಿಷ್ಠ ಮೂವರು ಸಾಮಾನ್ಯ ನಾಗರಿಕರು ಸಾವನ್ನಪ್ಪಿದ್ದಾರೆ. ನಮ್ಮ ಮೆಟ್ರೋ ಕಾಮಗಾರಿ ಆರಂಭವಾದ ನಂತರ 7 ಅಪಘಾತಗಳು ವರದಿಯಾಗಿವೆ. ನಾಲ್ವರು ಮೃತಪಟ್ಟಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. 2009ರಿಂದೀಚೆಗೆ ಸಂಭವಿಸಿದ ಅಪಘಾತಗಳ ವಿವರ ಹೀಗಿದೆ…
- ಜನವರಿ 2009: ಅರ್ತ್ಮೂವರ್ ಒಂದರ ಅಡಿಗೆ ಸಿಲುಕಿದ 20 ವರ್ಷದ ಭದ್ರತಾ ಸಿಬ್ಬಂದಿ ಮೃತಪಟ್ಟರು.
- ಮೇ 2009: ಮೆಟ್ರೋ ಕಾಮಗಾರಿಗೆ ಪೂರ್ವಭಾವಿಯಾಗಿ ನಡೆದ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಕಟ್ಟಡದ ಗೋಡೆಯೊಂದು ಕುಸಿದು ಕಾರ್ಮಿಕರೊಬ್ಬರು ಮೃತಪಟ್ಟರು.
- ಜುಲೈ 2009: ಕಟ್ಟಡ ತೆರವು ಕಾರ್ಯಾಚರಣೆ ವೇಳೆ 23 ವರ್ಷದ ಕಾರ್ಮಿಕರೊಬ್ಬರು ಗೋಡೆ ಕುಸಿದು ಮೃತಪಟ್ಟರು.
- ಅಕ್ಟೋಬರ್ 2009: ಚಲಿಸುತ್ತಿರುವ ಲೋಹದ ತುಣುಕು ಬಡಿದು ಕಾರ್ಮಿಕರೊಬ್ಬರು ಮೃತಪಟ್ಟರು.
- ಆಗಸ್ಟ್ 2010: ಮೆಟ್ರೋ ನಿರ್ಮಾಣ ಕಾಮಗಾರಿ ವೇಳೆ ಸಂಭವಿಸಿದ ಅಪಘಾತದಲ್ಲಿ 20 ವರ್ಷದ ಕಾರ್ಮಿಕರೊಬ್ಬರು ಮೃತಪಟ್ಟರು.
- ಮಾರ್ಚ್ 2011: ಮೆಟ್ರೋ ಕಾಮಗಾರಿಯ ಗುತ್ತಿಗೆದಾರರ ಮಾಲೀಕತ್ವದ ಲಾರಿಗೆ ಸಿಲುಕಿ ಕಾರ್ಮಿಕರೊಬ್ಬರು ಸಾವನ್ನಪ್ಪಿದರು.
- ಮಾರ್ಚ್ 2012: ಮೆಟ್ರೋ ನಿರ್ಮಾಣ ಸ್ಥಳದಲ್ಲಿ ಕ್ರೇನ್ ಅಡಿಗೆ ಸಿಲುಕಿ 24 ವರ್ಷದ ಕಾರ್ಮಿಕರು ನಿಧನರಾದರು.
- ಡಿಸೆಂಬರ್ 2012: ಮೆಟ್ರೋ ನಿಲ್ದಾಣದ ಶೌಚಾಲಯ ನಿರ್ಮಾಣದ ವೇಳೆ ವಿದ್ಯುತ್ ಶಾಕ್ನಿಂದ 18 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟರು.
- ಜೂನ್ 2013: ಮೆಟ್ರೋ ನಿಲ್ದಾಣದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸುತ್ತಿದ್ದ ಎಲೆಕ್ಟ್ರಿಷಿಯನ್ ಕೆಳಗೆ ಬಿದ್ದು ಮೃತಪಟ್ಟರು.
- ಜುಲೈ 2013: ಕ್ರೇನ್ನಿಂದ ಕಬ್ಬಿಣದ ಮೇನ್ಫ್ರೇಮ್ (ಬೀಮ್) ಎತ್ತುವಾಗ ಹಗ್ಗ ತುಂಡರಿಸಿ 47 ವರ್ಷದ ಸೂವರ್ವೈಸರ್ ಮೃತಪಟ್ಟರು.
- ಆಗಸ್ಟ್ 2015: ಸ್ಟೀಲ್ ಲೋಡ್ ಸರಿಪಡಿಸುವಾಗ (ಸ್ಟಡಿ) ಸಮತೋಲನ ತಪ್ಪಿ 21 ವರ್ಷದ ಕಾರ್ಮಿಕರೊಬ್ಬರು ಸಾವನ್ನಪ್ಪಿದರು.
- ಜನವರಿ 2019: ಮೆಟ್ರೋ ಸ್ಟೇಷನ್ ಗೋಡೆಯ ನಡುವಣ ಅಂತರದಲ್ಲಿ ಸುರಕ್ಷಾ ಕ್ರಮಗಳನ್ನು ಸರಿಯಾಗಿ ನಿರ್ವಹಿಸದ ಕಾರಣ 18 ತಿಂಗಳ ಮಗುವೊಂದು ಮೃತಪಟ್ಟಿತು.
- ಫೆಬ್ರುವರಿ 2020: ಕಾಮಗಾರಿ ನಡೆಯುತ್ತಿದ್ದ ನಿಲ್ದಾಣದಿಂದ ಕೆಳಗೆ ಬಿದ್ದು ಕಾರ್ಮಿಕರೊಬ್ಬರು ಸಾವನ್ನಪ್ಪಿದರು.
- ಸೆಪ್ಟೆಂಬರ್ 2020: ಮೆಟ್ರೋ ನಿರ್ಮಾಣ ಸ್ಥಳದಲ್ಲಿ 24 ವರ್ಷದ ಕಾರ್ಮಿಕರೊಬ್ಬರು ಬೀಮ್ ಕುಸಿದು ಮೃತಪಟ್ಟರು.
- ನವೆಂಬರ್ 2020: ನಿರ್ಮಾಣಕ್ಕೆಂದು ಅಳವಡಿಸಿದ್ದ ಕಬ್ಬಿಣ ತೆಗೆಯುತ್ತಿದ್ದಾಗ ಅದರಡಿಗೆ ಸಿಲುಕಿ 24 ವರ್ಷದ ಕಾರ್ಮಿರೊಬ್ಬರು ಸಾವನ್ನಪ್ಪಿದರು.
- ಡಿಸೆಂಬರ್ 2020: ಮೆಟ್ರೋ ಕಾಮಗಾರಿ ಸ್ಥಳದಲ್ಲಿ ತಲೆಯ ಮೇಲೆ ಕೇಬಲ್ ಪೈಪ್ಗಳು ಬಿದ್ದು 26 ವರ್ಷದ ಕಾರ್ಮಿಕರೊಬ್ಬರು ಮೃತಪಟ್ಟರು.
- ಏಪ್ರಿಲ್ 2021: ಸೂಕ್ತ ರೀತಿಯಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸದ ಹಿನ್ನೆಲೆಯಲ್ಲಿ ‘ಯುಟಿಲಿಟಿ ಶಾಫ್ಟ್’ಗೆ ಬಿದ್ದು 65 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದರು.
- ಜನವರಿ 2023: ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಕಂಬ ಉರುಳಿ ತಾಯಿ-ಮಗು ಮೃತಪಟ್ಟರು.
ಮೇಲಿನ ಮಾಹಿತಿಯನ್ನು ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳಿಂದ ಸಂಗ್ರಹಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸಮರ್ಪಕ ಮಾಹಿತಿ ಒದಗಿಸಿಲ್ಲ. ಹೀಗಾಗಿ ಸತ್ತವರ ವಾಸ್ತವಿಕ ಅಂಕಿಅಂಶಗಳು ಇನ್ನೂ ಹೆಚ್ಚಾಗಿರಬಹುದು ಎಂದು ಶಂಕಿಸಲಾಗಿದೆ.
ನಿರ್ಲಕ್ಷ್ಯದ ಪರಮಾವಧಿ: ಜನರ ಆಕ್ರೋಶ
ಬೆಂಗಳೂರಿನ ಹೆಬ್ಬಾಳ ಸಮೀಪ ನಿನ್ನೆ (ಜ 10) ಅಪಘಾತ ಸಂಭವಿಸಿ ತಾಯಿ-ಮಗು ಮೃತಪಟ್ಟ 8 ಗಂಟೆಯ ನಂತರ ಮೆಟ್ರೋ ಘಟನೆಯ ಸಂಭಾವ್ಯ ಕಾರಣಗಳು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅಧಿಕೃತ ಹೇಳಿಕೆ ಹೊರಡಿಸಿತು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರು ಘಟನೆ ನಡೆದು ನಾಲ್ಕು ಗಂಟೆಗಳ ನಂತರ ಸ್ಥಳಕ್ಕೆ ಭೇಟಿ ನೀಡಿದರು. ಮೆಟ್ರೋ ನಿಗಮದ ಉನ್ನತ ಅಧಿಕಾರಿಗಳ ಪ್ರತಿಕ್ರಿಯೆ ಕೋರಿ ವರದಿಗಾರರು ಮಾಡಿದ ಕರೆಗಳಿಗೆ ಯಾವುದೇ ಉತ್ತರ ಸಿಗಲಿಲ್ಲ. ಸಂಬಂಧಿಸಿದ ಗುತ್ತಿಗೆದಾರರು ಮತ್ತು ಎಂಜಿನಿಯರ್ಗಳಿಗೆ ನೊಟೀಸ್ ಜಾರಿ ಮಾಡಲಾಗುವುದು. ಆಂತರಿಕ ತಾಂತ್ರಿಕ ಸಮಿತಿಯಿಂದ ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ಬಿಎಂಆರ್ಸಿಎಲ್ ನಂತರ ತಿಳಿಸಿತು.
ದುರಂತ ಮತ್ತು ನಂತರ ಬಿಎಂಆರ್ಸಿಎಲ್ ವರ್ತನೆಯ ಕುರಿತು ನಗರದ ನಾಗರಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ‘ಟಿವಿ9’ಗೆ ಪ್ರತಿಕ್ರಿಯಿಸಿರುವ ನಗರ ಹಿರಿಯ ಹೋರಾಟಗಾರ್ತಿ ಹಾಗೂ ಸಿವಿಕ್ (CIVID) ಸಂಸ್ಥೆಯ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್, ‘ಮೆಟ್ರೋ ಕಾಮಗಾರಿ ನಡೆಯುತ್ತಿರುವ ಎಲ್ಲ ಸ್ಥಳಗಳಲ್ಲಿಯೂ ಪಾರದರ್ಶಕ ತಪಾಸಣೆ ನಡೆಯಬೇಕು’ ಎಂದು ಆಗ್ರಹಿಸಿದರು. ‘ಸಂಬಂಧಿಸಿದ ಗುತ್ತಿಗೆದಾರರು ಮತ್ತು ಎಂಜಿನಿಯರ್ಗಳ ಹೆಸರುಗಳಿರುವ ಫಲಕಗಳಲ್ಲಿ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಅಳವಡಿಸಬೇಕು. ಆಗ ನಿರ್ದಿಷ್ಟವಾಗಿ ಅವರನ್ನು ಹೊಣೆಯಾಗಿಸಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದರು.
‘ಬೆಂಗಳೂರು ನಗರದ ರಸ್ತೆಗಳಲ್ಲಿ ಸಾಮಾನ್ಯ ಜನರಿಗೆ ಯಾವುದೇ ಸುರಕ್ಷೆ ಇಲ್ಲ ಎಂಬ ಮಾತನ್ನು ನಿಜ ಮಾಡಿದೆ. ಇದು ಅಪಘಾತವಲ್ಲ, ಇದೊಂದು ಕೊಲೆ. ಸಾರ್ವಜನಿಕರು ಹಲವು ಬಾರಿ ಎಚ್ಚರಿಸಿದರೂ ಸಂಬಂಧಿಸಿದವರು ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ಈ ದುರಂತ ಸಂಭವಿಸಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ‘ಬೈಸಿಕಲ್ ಮೇಯರ್’ ಎಂದೇ ಖ್ಯಾತರಾದ ಸತ್ಯ ಶಂಕರನ್ ಘಟನೆಯ ಕುರಿತು ಪ್ರತಿಕ್ರಿಯಿಸಿ, ‘ಜನರ ಜೀವಕ್ಕೆ ಬೆಲೆಯಿಲ್ಲವೇ’ ಎಂದು ಪ್ರಶ್ನಿಸಿದರು. ‘ದುಬಾರಿ ಯೋಜನೆಗಳ ವೆಚ್ಚ ಕಡಿತಗೊಳಿಸುವ ನೆಪದಲ್ಲಿ ಸಾರ್ವಜನಿಕ ಸುರಕ್ಷೆಯ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಜನರ ಜೀವ ಎಂದರೆ ಇವರಿಗೆ ಚೆಲ್ಲಾಟವಾಗಿದೆ. ಮೆಟ್ರೋ ನಿರ್ಮಾಣಕ್ಕೆ 18 ಜನರ ಬಲಿ ಬೇಕಿತ್ತೇ ಎಂದು ನಮ್ಮನ್ನು ನಾವು ಕೇಳಿಕೊಳ್ಳಬೇಕಿದೆ. ಉತ್ತಮ ಸುರಕ್ಷೆಗಾಗಿ ಹೆಚ್ಚು ವ್ಯಯಿಸಬೇಕು ಎಂದಾದಲ್ಲಿ ಅದನ್ನು ಭರಿಸಲು ನಾವು ಸಿದ್ಧರಿದ್ದೇವೆ’ ಎಂದು ಅವರು ಹೇಳಿದರು.
ವರದಿ: ಪ್ರಜ್ವಲ್ ಡಿಸೋಜಾ
ಇದನ್ನೂ ಓದಿ: ಮೆಟ್ರೋ ಕಂಬಿ ಕುಸಿದು ತಾಯಿ, ಮಗು ಸಾವು ಪ್ರಕರಣ; BMRCLನ ಮುಖ್ಯ ಇಂಜಿನಿಯರ್ ಅಮಾನತು-ಸಿಎಂ ಆದೇಶ
ಬೆಂಗಳೂರು ನಗರಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:10 am, Wed, 11 January 23