ಬೆಂಗಳೂರು: ನಗರದ ಹೆಬ್ಬಾಳ ಸಮೀಪ ಮಂಗಳವಾರ (ಡಿ 10) ನಮ್ಮ ಮೆಟ್ರೋ ಕಾಮಗಾರಿಗೆಂದು ನಿಲ್ಲಿಸಿದ್ದ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆಗೆ ಸಂಬಂಧಿಸಿದಂತೆ ಗೋವಿಂದಪುರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಒಟ್ಟು ಮೂರು ಹಂತಗಳಲ್ಲಿ ತನಿಖೆ ನಡೆಯಲಿದೆ. ಮೊದಲ ಹಂತದಲ್ಲಿ ಮೆಟ್ರೋ ಅಧಿಕಾರಿಗಳು, 2ನೇ ಹಂತದಲ್ಲಿ ಗುತ್ತಿಗೆದಾರರು ಹಾಗೂ ಎಂಜಿನಿಯರ್ಗಳು, 3ನೇ ಹಂತದಲ್ಲಿ ಐಐಎಸ್ಸಿ ಹಾಗೂ ವಿಧಿವಿಜ್ಞಾನ (ಎಫ್ಎಸ್ಎಲ್) ವರದಿಯ ಆಧಾರದ ಮೇಲೆ ತನಿಖೆ ನಡೆಯಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಟ್ರೋ ನಿಗಮದ ಮುಖ್ಯ ಎಂಜಿನಿಯರ್, ಸೈಟ್ ಇಂಜಿನಿಯರ್ ಹಾಗೂ ಗುತ್ತಿಗೆದಾರರ ಹೇಳಿಕೆಗಳನ್ನು ಇಂದು ಮತ್ತು ನಾಳೆ (ಡಿ 11-12) ಪೊಲೀಸರು ದಾಖಲಿಸಿಕೊಳ್ಳಲಿದ್ದಾರೆ. ಮೆಟ್ರೋ ಪಿಲ್ಲರ್ ಕಂಬಿ ಕುಸಿತದ ಬಗ್ಗೆ ಪೊಲೀಸರು ವಿಸ್ತೃತ ಪರಿಶೀಲನೆ ನಡೆಸಲಿದ್ದು, ತನಿಖಾ ವರದಿಯ ನಂತರ ಘಟನೆಯ ನಿಖರ ಕಾರಣ ತಿಳಿದುಬರಲಿದೆ.
ದುರಂತಕ್ಕೆ ಯಾರೆಲ್ಲಾ ಹೊಣೆ?
ಪಿಲ್ಲರ್ ಕುಸಿದು ಸಂಭವಿಸಿದ ದುರಂತದಲ್ಲಿ ತಾಯಿ-ಮಗು ಮೃತಪಟ್ಟ ನಂತರ ಪ್ರಕರಣದ ಹೊಣೆಗಾರಿಕೆ ಯಾರದು ಎಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಹಲವು ಮೂಲಗಳಿಂದ ‘ಟಿವಿ9’ ಮಾಹಿತಿ ಕಲೆಹಾಕಿದೆ. ಬೆಂಗಳೂರು ಮೆಟ್ರೋ ನಿಗಮದ ಮುಖ್ಯ ಎಂಜಿನಿಯರ್ ರಂಗನಾಥ್, ಎಕ್ಸಿಕ್ಯುಟಿವ್ ಎಂಜಿನಿಯರ್ ಹೆಗ್ಗರೆಡ್ಡಿ ಅವರು ಒಟ್ಟಾರೆ ನಿರ್ಮಾಣ ಕಾಮಗಾರಿಗಳನ್ನು ಗಮನಿಸುತ್ತಿದ್ದಾರೆ. ಕಾಮಗಾರಿಯ ಗುತ್ತಿಗೆ ನಿರ್ವಹಿಸುತ್ತಿರುವ ಎನ್ಸಿಸಿ ಕಂಪನಿಯ ಎಂಜಿನಿಯರ್ ವಿಕಾಸ್ ಕುಮಾರ್ ಅವರು ಕಾಮಗಾರಿಯ ನಿರ್ವಹಣೆಯನ್ನು ಗಮನಿಸಬೇಕಿತ್ತು ಎಂದು ಮೂಲಗಳು ಹೇಳಿವೆ.
ಕಂಬಕ್ಕೆ ಕಾಂಕ್ರಿಟ್ ಹಾಕಿರಲಿಲ್ಲ
ಮೆಟ್ರೋ ಕಾಮಗಾರಿಗೆ ಕಾಂಕ್ರಿಟ್ ಫುಟಿಂಗ್ ಆಗಿತ್ತು, ವರ್ಟಿಕಲ್ ಪಿಲ್ಲರ್ ಸ್ಟೀಲ್ ಕೆಲಸ ಬಹುತೇಕ ಮುಗಿದಿತ್ತು. ಪಿಲ್ಲರ್ಗೆ ಅರ್ಧಂಬರ್ಧ ಕಾಂಕ್ರಿಟ್ ಹಾಕಲು ಬರುವುದಿಲ್ಲ. ಒಟ್ಟಿಗೆ ಒಂದೇ ಬಾರಿಗೆ ಕಾಂಕ್ರೀಟ್ ಹಾಕಬೇಕಿತ್ತು. ಅದಕ್ಕಾಗಿ ರಾಡ್ ಕಟ್ಟಿದ್ದ ಬಾರ್ ಬೆಂಡರ್ಗಳು ಕಾಯುತ್ತಿದ್ದರು. ಸಾಮಾನ್ಯವಾಗಿ ಅಷ್ಟು ದೊಡ್ಡದಾದ ರಾಡ್ಗಳನ್ನು ನಿಲ್ಲಿಸಿದ ಮೇಲೆ ತಕ್ಷಣ ಅಥವಾ ಒಂದು ದಿನದೊಳಗೆ ಕಾಂಕ್ರಿಟ್ ಹಾಕಬೇಕು. ಆದರೆ ಅರವತ್ತು ಅಡಿಯ ಸ್ಟೀಲ್ ಪಿಲ್ಲರ್ಗೆ ಕಾಂಕ್ರಿಟ್ ಹಾಕುವುದು ತಡವಾಗಿದೆ. ಇದರ ಜೊತೆಗೆ ಯಾವುದೇ ಸುರಕ್ಷತಾ ಕ್ರಮಗಳನ್ನೂ ಜರುಗಿಸಿಲ್ಲ. ಹೀಗಾಗಿ ಕಬ್ಬಿಣದ ರಾಡ್ಗಳು ಎಡಕ್ಕೆ ವಾಲಿಕೊಂಡಿವೆ. ಅದಕ್ಕೆ ನಾಲ್ಕೂ ಕಡೆಗಳಿಂದ ಜಾಕ್ ಹಾಕಿ ನಿಲ್ಲಿಸಿಕೊಳ್ಳಬೇಕಿತ್ತು. ಈ ಕೆಲಸ ಆಗಿರಲಿಲ್ಲ.
ಅನುಷ್ಠಾನದಲ್ಲಿ ಲೋಪ
ಈ ಕಾಮಗಾರಿಗಾಗಿ ಗುತ್ತಿಗೆದಾರರು ₹ 2166 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಆದರೂ ಹಲವು ರೀತಿಯ ಲೋಪ ಎಸಗಿರುವುದು ಬೆಳಕಿಗೆ ಬಂದಿದೆ. ಇಷ್ಟು ದೊಡ್ಡದಾದ ಮತ್ತು ಎತ್ತರದ ಕಾಮಗಾರಿ ಮಾಡುವ ವೇಳೆ ರೋಪ್ (ಹಗ್ಗ) ಹಾಕಿ ರಾಡ್ಗಳನ್ನು ಅಕ್ಕಪಕ್ಕ ಬಾಗದಂತೆ ನಿಲ್ಲಿಸಿರಬೇಕಿತ್ತು. ಎನ್ಸಿಸಿ ಮತ್ತು ಬಿಎಂಆರ್ಸಿಎಲ್ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ಗಳು ಈ ಅಂಶವನ್ನು ತಪಾಸಣೆ ಮಾಡಬೇಕಿತ್ತು. ಆದರೆ ಎರಡು ಕಂಪನಿಗಳ ಎಂಜಿನಿಯರ್ಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ.
ಇಂಥ ಬೃಹತ್ ಕಾಮಗಾರಿ ನಡೆಯುವಾಗ ಆ ರಸ್ತೆಯಲ್ಲಿ ವಾಹನ ಸಂಚಾರ ಮತ್ತು ಜನರ ಸಂಚಾರಕ್ಕೆ ನಿರ್ಬಂಧ ಹೇರಬೇಕಿತ್ತು. ಆದರೆ ಈ ಅಂಶವನ್ನು ಖಾತ್ರಿಪಡಿಸಿಕೊಳ್ಳುವಲ್ಲಿಯು ಎರಡೂ ಸಂಸ್ಥೆಗಳು ವಿಫಲವಾಗಿರುವುದನ್ನು ಈ ದುರಂತವು ಎತ್ತಿತೋರಿಸಿದೆ.
ಇದನ್ನೂ ಓದಿ: ಮೆಟ್ರೋ ನಿರ್ಮಾಣಕ್ಕೆ ಈವರೆಗೆ 18 ಬಲಿ; ಇನ್ನಾದರೂ ಬೆಂಗಳೂರು ನಾಗರಿಕರಿಗೆ ಸಿಗಬಹುದೇ ಸುರಕ್ಷಾ ಖಾತ್ರಿ
Published On - 3:29 pm, Wed, 11 January 23