6,500 ಮಂದಿ ಬಿಸಿಯೂಟ ಕಾರ್ಯಕರ್ತೆಯರ ವಜಾ: ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ

| Updated By: ವಿವೇಕ ಬಿರಾದಾರ

Updated on: Aug 17, 2022 | 9:17 AM

ಕೆಲಸದಿಂದ 6,500 ಬಿಸಿಯೂಟ ಕಾರ್ಯಕರ್ತೆಯರ ವಜಾಗೊಳಿಸಿದ ಹಿನ್ನೆಲೆ ಫ್ರೀಡಂಪಾರ್ಕ್​​ನಲ್ಲಿ ಕಾರ್ಯಕರ್ತೆಯರು ಅಹೋರಾತ್ರಿ ಪ್ರತಿಭಟನೆ ಮಾಡಿದ್ದು, ಇಂದು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ.

6,500 ಮಂದಿ ಬಿಸಿಯೂಟ ಕಾರ್ಯಕರ್ತೆಯರ ವಜಾ: ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ
ಬಿಸಿಯೂಟ ನೌಕರರ ಪ್ರತಿಭಟನೆ
Follow us on

ಬೆಂಗಳೂರು: ಕೆಲಸದಿಂದ 6,500 ಬಿಸಿಯೂಟ ಕಾರ್ಯಕರ್ತೆಯರ ವಜಾಗೊಳಿಸಿದ ಹಿನ್ನೆಲೆ ಫ್ರೀಡಂಪಾರ್ಕ್​​ನಲ್ಲಿ ಕಾರ್ಯಕರ್ತೆಯರು ಅಹೋರಾತ್ರಿ ಪ್ರತಿಭಟನೆ ಮಾಡಿದ್ದು, ಇಂದು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ. ಕಾರ್ಯಕರ್ತೆಯರ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಶಿಕ್ಷಣ ಸಚಿವ ನಾಗೇಶ್ ಸ್ಥಳಕ್ಕೆ ಬರುವವರೆಗೂ ತೆರಳಲ್ಲವೆಂದು ಪಟ್ಟು ಹಿಡದಿದ್ದಾರೆ.

ಸಾವಿರಾರು ಕಾರ್ಯಕರ್ತೆಯರು ಪುಟ್ಟ ಮಕ್ಕಳ ಜೊತೆ ಧರಣಿ ಕೂತಿದ್ದು, ಊಟ, ತಿಂಡಿ ಶೌಚಾಲಯ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರ ನಮಗೆ ಒಂದು ಲಕ್ಷ ಹಿಡಿಗಂಟು ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.

ಏಕಾಏಕಿ ಕೆಲಸದಿಂದ ವಜಾಗೊಳಿಸಿರುವುದನ್ನು ವಿರೋಧಿಸಿ ಬಿಸಿಯೂಟ ಕಾರ್ಯಕರ್ತೆಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಕರ್ನಾಟಕ ಸರ್ಕಾರವು ಯಾವುದೇ ಪರಿಹಾರ ನೀಡದೇ 6,500 ಕಾರ್ಯಕರ್ತೆಯರನ್ನು ವಜಾ ಮಾಡಿದೆ. ರಾಜ್ಯ ಸರ್ಕಾರದ ಈ ಕ್ರಮವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಕಾರ್ಯಕರ್ತೆಯರು ದೂರಿದ್ದಾರೆ. ಸರ್ಕಾರದ ನಡೆಯನ್ನು ಖಂಡಿಸಿ ಬೆಂಗಳೂರಿನ ಫ್ರೀಡಂಪಾರ್ಕ್​ನಲ್ಲಿ ಪ್ರತಿಭಟನೆ ಆರಂಭವಾಗಿದೆ. ಸಿಐಟಿಯು (Centre of Indian Trade Unions – CITU) ನಾಯಕಿ ವರಲಕ್ಷ್ಮೀ ನೇತೃತ್ವದಲ್ಲಿ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.

ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದರಿಂದ ರಾಜ್ಯಾದ್ಯಂತ ಬಿಸಿಯೂಟ ಸೇವೆ ಬಂದ್ ಆಗಿದೆ. 60 ವರ್ಷ ವಯಸ್ಸಾಗಿದೆ ಎನ್ನುವುದನ್ನೇ ದೊಡ್ಡದು ಮಾಡಿ, ಯಾವುದೇ ಪರಿಹಾರ, ನಿವೃತ್ತ ವೇತನಕ್ಕೆ ವ್ಯವಸ್ಥೆ ಮಾಡದೇ ಬೀದಿಗೆ ತಳ್ಳಲಾಗಿದೆ. ಕಾರ್ಯಕರ್ತೆಯರಿಗೆ ಕಡ್ಡಾಯ ನಿವೃತ್ತಿ ನಿರ್ಧಾರ ಜಾರಿಗೆ ತರುವ ಸರ್ಕಾರದ ತೀರ್ಮಾನದಿಂದ ಬಿಸಿಯೂಟ ಕಾರ್ಯಕರ್ತೆಯರ ಬದುಕು ಬಡವಾಗಿದೆ. ಸರ್ಕಾರ ತಕ್ಷಣ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಬಿಸಿಯೂಟ ಕಾರ್ಯಕರ್ತೆಯರು ನಗರಕ್ಕೆ ಆಗಮಿಸಿದ್ದಾರೆ. ಮಕ್ಕಳೊಂದಿಗೆ ಎರಡು ಮೂರು ದಿನಗಳಿಗೆ ಆಗುವಷ್ಟು ಬಟ್ಟೆಯನ್ನೂ ತಂದಿದ್ದು, ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ.

ಮಾತು ತಪ್ಪಿದ ಸರ್ಕಾರ

ಕರ್ನಾಟಕದಲ್ಲಿ ಬಿಸಿಯೂಟ ಯೋಜನೆ ಅರಂಭವಾವಾಗಿದ್ದು 2003-04ನೇ ಸಾಲಿನಲ್ಲಿ. ಅಂದಿನಿಂದ ಇಲ್ಲಿಯವರೆಗೆ ಕಾರ್ಯಕರ್ತೆಯರಿಗೆ 60 ವರ್ಷ ಮೀರಿದ್ದರೂ, ಅವರು ಆರೋಗ್ಯವಾಗಿದ್ದರೆ ಸೇವೆಯಲ್ಲಿ ಮುಂದುವರಿಸಲಾಗುತ್ತಿತ್ತ. ಆದರೆ ಕಳೆದ ಏಪ್ರಿಲ್ ತಿಂಗಳಲ್ಲಿ ಅಧಿಕೃತ ಆದೇಶ ಹೊರಡಿಸಿ, 60 ವರ್ಷ ದಾಟಿದವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲು ತೀರ್ಮಾನ ಪ್ರಕಟಿಸಿತು. ಕೆಲಸಕ್ಕೆ ಸೇರಿ ಹತ್ತಾರು ವರ್ಷಗಳಾಗಿದ್ದರೂ ಕೇವಲ ಗೌರವ ಧನವನ್ನಷ್ಟೇ ಪಡೆಯುತ್ತಿದ್ದ ಇವರಿಗೆ ನಿವೃತ್ತಿ ವೇತನ ಒದಗಿಸಲು ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕಾರ್ಮಿಕ ನಾಯಕರು ದೂರಿದ್ದಾರೆ.

ನಿವೃತ್ತರಾಗುವ ಬಿಸಿಯೂಟ ನೌಕರರಿಗೆ ಇಡಗಂಟು ಹಾಗೂ ಪಿಂಚಣಿಗೆ ವ್ಯವಸ್ಥೆ ಮಾಡಲು ಹಿಂದಿನ ಶಿಕ್ಷಣ ಸಚಿವ ಸುರೇಶ್​ಕುಮಾರ್ ಕ್ರಮಕೈಗೊಂಡಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ 60 ಮತ್ತು ಶೇ 40ರ ಅನುಪಾತದಲ್ಲಿ ನಿವೃತ್ತರಿಗೆ ಇಡಗಂಟು ಒದಗಿಸುವ ಬಗ್ಗೆ ಚರ್ಚೆ ನಡೆದಿತ್ತ. ಆದರೆ ನಂತರದ ದಿನಗಳಲ್ಲಿ ಇದು ಈಡೇರಲಿಲ್ಲ.

‘60 ವರ್ಷ ದಾಟಿದ ಬಿಸಿಯೂಟ ಸಿಬ್ಬಂದಿಯನ್ನು ಸೇವೆಯಿಂದ ವಿಮುಕ್ತಿಗೊಳಿಸಲು ನಮ್ಮ ವಿರೋಧವಿಲ್ಲ. ಆದರೆ ಇವರಿಗೆ ಕನಿಷ್ಠ ₹ 30,000 ಇಡಗಂಟು ಹಾಗೂ ₹ 3,000 ಮಾಸಿಕ ಪಿಂಚಣಿ ನೀಡಬೇಕು’ ಎಂದು ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್​ನ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಒತ್ತಾಸುತ್ತಾರೆ.

ನಿತ್ಯ 50 ಲಕ್ಷ ಮಕ್ಕಳಿಗೆ ಬಿಸಿಯೂಟ

ಬಿಸಿಯೂಟ ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಬಿಸಿಯೂಟ ಯೋಜನೆಯಲ್ಲಿ ಪ್ರಸ್ತುತ 1.19 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ 50 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡಲಾಗುತ್ತಿದೆ. ತಿಂಗಳಿಗೆ ₹ 2,500 ಗೌರವಧನ ನೀಡಲಾಗುತ್ತಿದೆ. 60 ವರ್ಷ ತುಂಬಿದ 6 ಸಾವಿರ ಬಿಸಿಯೂಟ ಕಾರ್ಯಕರ್ತೆಯರನ್ನು ಯಾವುದೇ ಪರಿಹಾರ ಕೊಡದೇ ಸರ್ಕಾರ ವಜಾ ಮಾಡಿದೆ.

Published On - 9:13 am, Wed, 17 August 22