PFI ಮೇಲೆ ನಾವು ಹಾಕಿದ್ದ ಕೇಸ್ ತೆಗೆದವರು ಈಗ ಟೀಕೆ ಮಾಡ್ತಿದ್ದಾರೆ: ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಅಶೋಕ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 29, 2022 | 1:08 PM

ಸ್ವತಃ ಮಲ್ಲಿಕಾರ್ಜು ಖರ್ಗೆ ಗೃಹ ಸಚಿವರಾಗಿದ್ದಾಗ ಕಂಬಾಲಪಲ್ಲಿಯಲ್ಲಿ ದಲಿತರನ್ನು ಸುಟ್ಟು ಹಾಕಿದ್ದರು. ಆಗ ಯಾಕೆ ಕಾಂಗ್ರೆಸ್​ನವರು ಮಾತಾಡಲಿಲ್ಲ ಎಂದು ಪ್ರಶ್ನಿಸಿದರು.

PFI ಮೇಲೆ ನಾವು ಹಾಕಿದ್ದ ಕೇಸ್ ತೆಗೆದವರು ಈಗ ಟೀಕೆ ಮಾಡ್ತಿದ್ದಾರೆ: ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಅಶೋಕ್
ಕಂದಾಯ ಸಚಿವ ಆರ್.ಅಶೋಕ
Follow us on

ಬೆಂಗಳೂರು: ಕರಾವಳಿಯ ಸರಣಿ ಕೊಲೆಗಳ ಬಗ್ಗೆ ಇದೀಗ ಮಾತನಾಡುತ್ತಿರುವ ವಿರೋಧ ಪಕ್ಷಗಳು ಅವರ ಆಡಳಿತವಿದ್ದ ಕಾಲದಲ್ಲಿ ಹೇಗೆ ನಡೆದುಕೊಂಡಿದ್ದವು ಎನ್ನುವುದನ್ನು ಯೋಚಿಸಬೇಕು. ಅದನ್ನು ಮುಚ್ಚಿಟ್ಟು ಈಗ ಬೊಟ್ಟಿಟ್ಟರೆ ಅರ್ಧ ಸತ್ಯ ಮಾತನಾಡಿದಂತೆ ಆಗುತ್ತದೆ. ಕಾಮೇಂಟ್ ಮಾಡುವುದಕ್ಕೂ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ (R Ashok) ಹೇಳಿದರು. ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳು ತಮ್ಮ ಕಾಲದಲ್ಲಿ ಏನಾಯ್ತು ಎಂಬುದನ್ನು ಮುಚ್ಚಿಡುತ್ತಿವೆ ಎಂದು ಆರೋಪ ಮಾಡಿದರು.

ಸಿದ್ದರಾಮಯ್ಯ (Siddaramiah) ಸರ್ಕಾರ ಅಧಿಕಾರದಲ್ಲಿದ್ದಾಗ ಶಿವಾಜಿನಗರದಲ್ಲಿ ಹಾಡಹಗಲೇ ಕೊಲೆ ಆಗಿತ್ತು. ಆಗ ಸಿದ್ದರಾಮಯ್ಯ ಏನು ಮಾಡುತ್ತಿದ್ದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಇತರ ಹಲವು ಸಂಘಟನೆಗಳ ಮೇಲೆ ನಾವು ಪ್ರಕರಣಗಳನ್ನು ದಾಖಲಿಸಿದ್ದರೆ ಇವರು ಕೇಸ್ ವಜಾ ಮಾಡಿದರು. ಆರೋಪಿಗಳಿಗೆ ಬಿರಿಯಾನಿ ತಿನ್ನಲು ಬಿಟ್ಟು ಕೇಸ್ ವಾಪಸ್ ತೆಗೆದುಕೊಂಡವರಿಗೆ ನಮ್ಮ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ನಾವು ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸಿದ್ದೇವೆ. ನಿಮ್ಮ ಕಾಲದಲ್ಲಿ ಘಟನೆ ನಡೆದು ತಿಂಗಳು ಆದರೂ ಆರೋಪಿಗಳನ್ನು ಹಿಡಿಯುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.

ಗೂಂಡಾಗಳನ್ನು ಮಟ್ಟ ಹಾಕಲು, ಅವರಿಗೆ ಕಠಿಣ ಶಿಕ್ಷೆ ಸಿಗುವಂತೆ ಮಾಡಲು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ. ಆರೋಪಿಗಳನ್ನು ಬಂಧಿಸಲು ಹಿಂದೆಮುಂದೆ ನೋಡಿಲ್ಲ, ನೋಡುವುದೂ ಇಲ್ಲ. ಯಾವುದೇ ರೀತಿಯ ಕನಿಕರವನ್ನು ಯಾರ ಮೇಲೂ ತೋರಿಸಲ್ಲ. ಕೊಲೆ ಆದವರು ಹಿಂದು ಆಗಿರಬಹುದು, ಮುಸ್ಲಿಂ ಆಗಿರಬಹುದು. ಸರ್ಕಾರ ನಡೆಸುವವರು ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಸ್ವತಃ ಮಲ್ಲಿಕಾರ್ಜು ಖರ್ಗೆ ಗೃಹ ಸಚಿವರಾಗಿದ್ದಾಗ ಕಂಬಾಲಪಲ್ಲಿಯಲ್ಲಿ ದಲಿತರನ್ನು ಸುಟ್ಟು ಹಾಕಿದ್ದರು. ಆಗ ಯಾಕೆ ಕಾಂಗ್ರೆಸ್​ನವರು ಮಾತಾಡಲಿಲ್ಲ. ನಿಮ್ಮ ಕಾಲದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಿಲ್ಲ. ಬಿಜೆಪಿಯು ಕೆಲವು ಸಂಘಟನೆಗಳಿಗೆ ಫಂಡ್ ಮಾಡುತ್ತದೆ ಎನ್ನುವ ಆರೋಪ ಒಪ್ಪಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಬಂದ ನಂತರ ಕಾನೂನು ಸುವ್ಯವಸ್ಥೆ ಸರಿ ಮಾಡಿದ್ದೇವೆ. ಕೋಮು ಗಲಭೆಗೆ ಎಂದೂ ನಾವು ಅವಕಾಶ ಕೊಡುವುದಿಲ್ಲ. ಭಟ್ಕಳ, ಕರಾವಳಿ ಪ್ರದೇಶದಲ್ಲಿ ಹಿಂದಿನಿಂದಲೂ ಈ ರೀತಿ ನಡೆಯುತ್ತು. ನಮ್ಮ ಸರ್ಕಾರ ಬಂದ ಮೇಲೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು ಎಂದು ತಿಳಿಸಿದರು.

ಉದ್ವೇಗದಲ್ಲಿ ಯಾರು ಬೇಕಾದರೂ ಎನ್​ಕೌಂಟರ್ ಕುರಿತು ಹೇಳಿಕೆ ನೀಡಬಹುದು. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಸ್ಥಳದ ಸಮೀಪ ಇದ್ದಾಗಲೇ ಹೀಗಾಗಿರುವುದು ನೋವಿನ ಸಂಗತಿ. ಅನೇಕರು ಅನೇಕ ವಿಚಾರ ಹೇಳುತ್ತಿದ್ದಾರೆ. ಎಲ್ಲವೂ ಪೊಲೀಸ್ ತನಿಖೆಯಿಂದಲೇ ಹೊರ ಬರಬೇಕು. ನಾನು ಕೂಡ ನಿರಂತರ ಸಂಪರ್ಕದಲ್ಲಿ ಇದ್ದೇನೆ. ನಮ್ಮ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ತರಹ ಅಲ್ಲ. ನೋವಾದಾಗ ನೇರವಾಗಿ ಹೇಳುವುದು ನಮ್ಮ ಗಮನಕ್ಕೆ ತರುವುದು ಅವರ ರೀತಿ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದಲೇ ಕೋಮುವಾದಿ ಶಕ್ತಿಗಳು ನಿಯಂತ್ರಣದಲ್ಲಿವೆ. ಇನ್ನಷ್ಟು ಬಿಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

Published On - 12:40 pm, Fri, 29 July 22