ಬೆಂಗಳೂರು, ಅ.11: ವರ್ಗಾವಣೆ ದಂಧೆಯಲ್ಲಿ ಶಾಸಕ ಜೆಟಿ ಪಾಟೀಲ್(JT Patil) ಪಿ.ಎ ಪ್ರಕಾಶ್ ಬೀಳಗಿ ಅವರು ಭಾಗಿ ಆದ ಆರೋಪ ಕೇಳಿಬಂದಿದ್ದು, ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundu Rao) ಆಪ್ತ ಕಾರ್ಯದರ್ಶಿ ಹಿದಾಯತ್ ಎಂಬುವವರು ಪ್ರಕಾಶ್ ಬೀಳಗಿ ವಿರುದ್ಧ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ಹೌದು, ವರ್ಗಾವಣೆ ಕೋರಿಕೆ ಪರಿಶೀಲಿಸಿರುವ ಆಪ್ತ ಕಾರ್ಯದರ್ಶಿ ಹಿದಾಯತ್, ದಾಖಲೆಗಳ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ ಬೆದರಿಕೆ ಹಾಕಿ ಬ್ಲ್ಯಾಕ್ಮೇಲ್ ಮಾಡಿದ ಬಗ್ಗೆಯೂ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಈ ಹಿಂದೆ ಹಿದಾಯತ್ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಶಾಸಕ ಜೆ.ಟಿ ಪಾಟೀಲ್ ಅವರು ಸ್ಪೀಕರ್ಗೆ ಪತ್ರ ಬರೆದಿದ್ದರು. ಈ ಹಿನ್ನೆಲೆ ಕೆ.ಎ ಹಿದಾಯತ್ ಅವರು ವಾಸ್ತವ ಅಂಶಗಳೊಂದಿಗೆ ದಾಖಲೆಗಳ ಸಮೇತ ಪೊಲೀಸರಿಗೆ ದೂರು ನೀಡಿ, ಶಾಸಕ ಜೆ.ಟಿ ಪಾಟೀಲ್ ಪಿ.ಎ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.
ಹೌದು, ಈ ಬಗ್ಗೆ ಅನುಮಾನ ವ್ತಕ್ತವಾದ ಹಿನ್ನೆಲೆಯಲ್ಲಿ ಪ್ರಕಾಶ್ ಬೀಳಗಿ ಅವರು ನೀಡಿದ ವರ್ಗಾವಣೆ ಕೋರಿಕೆಗಳನ್ನು ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿ ಪರಿಶೀಲನೆ ನಡೆಸಿದ್ದು, ಈ ವೇಳೆ ಪ್ರಕಾಶ್ ಬೀಳಗಿ ಅವರು ಕೇವಲ ತಮ್ಮ ಶಾಸಕರದ್ದಲ್ಲದೇ ಬೇರೆ ಬೇರೆ ಇಲಾಖೆಯವರ ಕಡೆಯಿಂದಲೂ ವರ್ಗಾವಣೆ ಪತ್ರಗಳನ್ನು ತಂದು ಪಟ್ಟು ಹಿಡಿಯುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಜೊತೆಗೆ ಚಿತ್ರದುರ್ಗದಲ್ಲಿ ಮೈಲಾರ ಲಿಂಗೇಶ್ವರ ಫಾರ್ಮಸಿ ಕಾಲೇಜಿಗೆ ಅನುಮತಿ ಕೇಳಿದ್ದಾರೆ. ಆದರೆ, ಫಾರ್ಮಸಿ ಕಾಲೇಜಿಗೂ, ಶಾಸಕರ ಪಿ.ಎ ಪ್ರಕಾಶ್ಗೆ ಸಂಬಂಧವೇ ಇಲ್ಲ.
ಇನ್ನು ಬೀಳಗಿಯವರ ಬ್ಲ್ಯಾಕ್ಮೇಲ್ಗೆ ಬಗ್ಗದ ಹಿನ್ನೆಲೆಯಲ್ಲಿ ಆಪ್ತ ಕಾರ್ಯದರ್ಶಿಯವರ ವಿರುದ್ಧ ಸ್ಪೀಕರ್ಗೆ ಶಾಸಕರಿಂದ ದೂರು ಕೊಡಿಸಿದ್ದಾರೆ. ಅಷ್ಟೇ ಅಲ್ಲ, ಪತ್ರಿಕೆಗಳಲ್ಲಿ ಅಪಪ್ರಚಾರ ಮಾಡುವ ಬೆದರಿಕೆ ಹಾಕಿ ಬ್ಲ್ಯಾಕ್ ಮೇಲೆ ಮಾಡಿದ್ದರು ಎಂದು ಹಿದಾಯತ್ ದೂರು ದಾಖಲಿಸಿದ್ದಾರೆ. ನಾನು ಕಚೇರಿಯಲ್ಲಿ ಇಲ್ಲದಿರುವಾಗ ನಮ್ಮ ಕಚೇರಿಯ ಸಿಬ್ಬಂದಿಗಳ ಎದುರು ಅನುಚಿತವಾಗಿ ವರ್ತಿಸಿ, ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:27 pm, Wed, 11 October 23