ಬೆಂಗಳೂರು, ಡಿ.18: ಸಂಚಾರ ನಿಯಮ ಪಾಲಿಸದ (Traffic Rules) ವಾಹನ ಸವಾರರೇ ಎಚ್ಚರ. ನಮ್ಮನ್ನು ಯಾರು ನೋಡಲ್ಲ, ನಾವು ಯಾರ ಕೈಗೂ ಸಿಗಲ್ಲ ಎಂದು ಸಂಚಾರ ನಿಯಮವನ್ನು ಗಾಳಿಗೆ ತೂರಿ ಓಡಾಡುವ ವಾಹನ ಸವಾರರೇ ಎಚ್ಚರ. ನೀವು ಸಂಚಾರಿ ಪೊಲೀಸರ (Traffic Police) ಕಣ್ತಪ್ಪಿಸಬಹುದು. ಆದರೆ ಇದರ ಕಣ್ತಪ್ಪಿಸಲು ಆಗಲ್ಲ. ಬೆಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಸ್ಕೂಟಿಗೆ ಬರೊಬ್ಬರಿ 3.22 ಲಕ್ಷ ರೂಪಾಯಿ ದಂಡ ಬಿದ್ದಿದೆ. ಅದು ಹೇಗೆ? ಈ ಸುದ್ದಿ ಓದಿ.
ಸಂಚಾರ ನಿಯಮ ಉಲ್ಲಂಘಿಸಿದ್ರೆ ಈಗ ಕೇಸ್ ಬೀಳೋದು ಗ್ಯಾರಂಟಿ. ಒಂದು ವೇಳೆ ಟ್ರಾಫಿಕ್ ಪೊಲೀಸರು ನಿಮ್ಮನ್ನ ಬಿಟ್ಟರೂ ಟ್ರಾಫಿಕ್ ಸಿಗ್ನಲ್ಗಳಲ್ಲಿ ಇರೋ ಕ್ಯಾಮರಾ ಮಾತ್ರ ಬಿಡೊಲ್ಲ. ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಸದಾ ಕಣ್ಣಿಡಲು, ಟ್ರಾಫಿಕ್ ಸಿಗ್ನಲ್ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಟ್ರಾಫಿಕ್ ಪೊಲೀಸರು ಕ್ಯಾಮರಾ ಅಳವಡಿಸಿದ್ದಾರೆ. ಹೀಗೆ ಸಂಚಾರ ನಿಯಮ ಉಲ್ಲಂಘಿಸಿದ ಸ್ಕೂಟಿ ಪೆಪ್ ಮೇಲೆ ಲಕ್ಷ ಲಕ್ಷ ದಂಡ ಬಿದ್ದಿದೆ.
ಆರ್.ಟಿ.ನಗರದ ಗಂಗಾನಗರ ಬಳಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸ್ಕೂಟಿ ಪೆಪ್ಗೆ ಬರೊಬ್ಬರಿ 3.22ಲಕ್ಷ ದಂಡ ಬಿದ್ದಿದೆ. ಮಾಲಾ ಎಂಬುವವರಿಗೆ ಸೇರಿದ ಸ್ಕೂಟಿ ಮೇಲೆ 643 ಸಂಚಾರ ನಿಯಮ ಉಲ್ಲಂಘನೆ ಕೇಸ್ಗಳು ದಾಖಲಾಗಿವೆ. ಸ್ಕೂಟಿ ಬೆಲೆಯೇ 70 ರಿಂದ 80 ಸಾವಿರ, ಆದರೆ ದಂಡದ ಮೊತ್ತ ನಾಲ್ಕು ಪಟ್ಟು ಹೆಚ್ಚಿದೆ. KA 04 KF9072 ನಂಬರ್ನ ಸ್ಕೂಟಿಯಲ್ಲಿ ಹೆಲ್ಮೆಟ್ ಧರಿಸದೇ ಸಂಚರಿಸಿ ನಿಯಮ ಉಲ್ಲಂಘಿಸಿದ್ದಾರೆ.
ಇದನ್ನೂ ಓದಿ: 255 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದ ಸ್ಕೂಟರ್ ಮಾಲೀಕ ಕೊನೆಗೂ ಸಿಕ್ಕಿಬಿದ್ದಾಗ!
ಬೆಂಗಳೂರಿನ ಸಂಚಾರ ದಟ್ಟಣೆಯ ರಿಯಲ್ ಟೈಮ್ ನಿರ್ವಹಣೆಗಾಗಿ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯು ಟ್ರಾಫಿಕ್ ಪೊಲೀಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಬೆಂಗಳೂರಿನ ಟ್ರಾಫಿಕ್ ಕೇವಲ ಸಾರಿಗೆ ಸಮಸ್ಯೆಯಲ್ಲ, ಇದು ಆರ್ಥಿಕ ಮತ್ತು ಪರಿಸರ ಸಮಸ್ಯೆಯಾಗಿದೆ. ತಂತ್ರಜ್ಞಾನ, ಪಾಲುದಾರಿಕೆಗಳು ಮತ್ತು ನವೀನ ವಿಧಾನಗಳಲ್ಲಿ ಹೂಡಿಕೆ ಮಾಡುವ ಮೂಲಕ, ನಾವು ದಟ್ಟಣೆಯನ್ನು ಸರಾಗಗೊಳಿಸುವುದು ಮಾತ್ರವಲ್ಲದೆ ಉತ್ಪಾದಕತೆಯನ್ನು ಹೆಚ್ಚಿಸಬಹುದು, ಮಾಲಿನ್ಯವನ್ನು ಕಡಿಮೆ ಮಾಡಬಹುದು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಬಹುದು ಎಂದು ಒಪ್ಪಂದದ ಬಳಿಕ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂಎನ್ ಅನುಚೇತ್ ಹೇಳಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ