‘ದೇವದಾಸಿ ಮಕ್ಕಳಿಗೆ ತಾಯಿ ಹೆಸರೇ ಅಂತಿಮ’ ನಿರ್ಣಯಕ್ಕೆ ಸರ್ಕಾರದಿಂದ ಸಹಮತ
ದೇವದಾಸಿ ಮಕ್ಕಳಿಗೆ ತಂದೆ ಹೆಸರು ಕೇಳುವಂತಿಲ್ಲ ಎಂಬ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ನಿರ್ಣಯಕ್ಕೆ ಕರ್ನಾಟಕ ಸರ್ಕಾರವೂ ಸಹಮತ ಸೂಚಿಸಿದೆ.

ಬೆಂಗಳೂರು: ದೇವದಾಸಿ (Devadasi) ಮಕ್ಕಳಿಗೆ ತಂದೆ ಹೆಸರು ಕೇಳುವಂತಿಲ್ಲ, ತಾಯಿ ಹೆಸರೇ ಅಂತಿಮ ಎಂಬ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (Commission for Protection of Child Rights)ದಿಂದ ನಿರ್ಣಯ ಕೈಗೊಳ್ಳಲಾಗಿದ್ದು, ಇದಕ್ಕೆ ಕರ್ನಾಟಕ ಸರ್ಕಾರ (Karnataka Govt)ವೂ ಸಹಮತ ಸೂಚಿಸಿದೆ. ರಾಜ್ಯದಲ್ಲಿ ದೇವದಾಸಿಯರ 45 ಸಾವಿರ ಮಕ್ಕಳಿದ್ದು, ಶಾಲಾ ಕಾಲೇಜು ಹಾಗೂ ಸರ್ಕಾರಿ ದಾಖಲೆಗಳಲ್ಲಿ ಹಾಗೂ ಜಾತಿ ಆದಾಯ ಪ್ರಮಾಣ ಪತ್ರ ಸೇರಿದಂತೆ ಯಾವುದೇ ದಾಖಲೆಯಲ್ಲಿ ತಾಯಿಯ ಹೆಸರನ್ನೇ ಅಂತಿಮವಾಗಿಸುವ ನಿರ್ಣಯ ಕೈಗೊಳ್ಳಲಾಗಿದೆ. ದೇವದಾಸಿ ಮಕ್ಕಳನ್ನು ಶಾಲೆಗೆ ಸೇರಿಸುವ ವೇಳೆ ಹಾಗೂ ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ಸರ್ಕಾರಿ ದಾಖಲೆಗಳಲ್ಲಿ ತಂದೆ ಹೆಸರು ದಾಖಲಿಸುವಂತೆ ಕಿರುಕುಳ, ಒತ್ತಾಯ, ಅರ್ಜಿ ತಿರಸ್ಕಾರ ಮಾಡುವ ಆರೋಪಗಳು ಕೇಳಿಬಂದಿದ್ದವು. ಹೀಗಾಗಿ ದೇವದಾಸಿ ಮಕ್ಕಳಿಗೆ ತಂದೆ ಹೆಸರು ಇಲ್ಲದಿದ್ದರೆ ತಾಯಿ ಹೆಸರು ನಮೂದಿಸಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ.
ಸರ್ಕಾರಿ ಸೌಲಭ್ಯ ಪಡೆಯಲು ದೇವದಾಸಿ ಮಕ್ಕಳಿಗೆ ತಂದೆಯ ಹೆಸರು ದಾಖಲಿಸುವುದು ಕಡ್ಡಾಯವಲ್ಲ ಎಂಬ ಆದೇಶವನ್ನು ಹೊರಡಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಹಾಲಪ್ಪ ಆಚರ್ ಈ ಹಿಂದೆ ಹೇಳಿದ್ದರು. ತಂದೆಯ ಹೆಸರು ಕಡ್ಡಾಯವಾಗಿರುವುದರಿಂದ ಅನೇಕ ದೇವದಾಸಿಯರ ಮಕ್ಕಳು ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ತಂದೆ ಹೆಸರು ಕಡ್ಡಾಯವನ್ನು ಮುಂದಿಟ್ಟುಕೊಂಡು ಅರ್ಜಿಯನ್ನು ತಿರಸ್ಕರಿಸುವ ಮೂಲಕ ಮಕ್ಕಳನ್ನು ಅವಮಾನಿಸಲಾಗುತ್ತಿದೆ ಎಂಬ ವಿಚಾರವಾಗಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿತ್ತು.
ಇದನ್ನೂ ಓದಿ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ವಿಳಂಬ: ಕರ್ನಾಟಕ ಸರ್ಕಾರಕ್ಕೆ ದಂಡ ವಿಧಿಸಿದ ಹೈಕೋರ್ಟ್
ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಸುಮಾರು 46 ಸಾವಿರ ದೇವದಾಸಿಯರಿದ್ದಾರೆ. ಆದರೆ ಸಮೀಕ್ಷೆ ವೇಳೆ ಸುಮಾರು 12 ಸಾವಿರ ದೇವದಾಸಿಯರ ಹೆಸರು ಬಿಟ್ಟುಹೋಗಿದೆ. ಹೀಗಾಗಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಮತ್ತು ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಗಳು ಕಳೆದ ಒಂದು ದಶಕದಿಂದ ಜಂಟಿಯಾಗಿ ಹೋರಾಟ ನಡೆಸಿತ್ತು. ಅದರಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಸಚಿವರು, ಅಧಿಕಾರಿಗಳ ಜಂಟಿ ಸಭೆ ನಡೆಸಿ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ದೇವದಾಸಿ ಮಹಿಳೆಯರ ಗಣತಿಗೆ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:24 pm, Thu, 15 December 22