ಬೆಂಗಳೂರು: ಬೆಂಗಳೂರು ಮೆಟ್ರೋ (Bengaluru Metro) ರೈಲು ಮಾರ್ಗದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಹಲವಾರು ಘಟನೆಗಳು ನಡೆದಿದೆ. ಇದರಿಂದಾಗಿ ಕೆಲವು ಪ್ರಮುಖ ಭಾಗಗಳಲ್ಲಿ ಮೆಟ್ರೋ ರೈಲ್ವೆ ಹಳಿಯ ಆಸುಪಾಸಿನ ಗೋಡೆಯ ಎತ್ತರವನ್ನು ಹೆಚ್ಚಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಿರ್ಧರಿಸಿದೆ. ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಗಳ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ಮೆಟ್ರೋ ಮಾರ್ಗದ ಮೇಲೆ ಕಲ್ಲು ತೂರಾಟ ನಡೆಸಿದ ಕನಿಷ್ಠ ಐದು ಘಟನೆಗಳು ವರದಿಯಾಗಿದ್ದು, ಮೆಟ್ರೋ ಕಾಂಪೌಂಡ್ ಗೋಡೆಗಳ ಹೊರಗೆ ನಿಂತುಕೊಂಡು ಮೆಟ್ರೋ ರೈಲುಗಳ ಮೇಲೆ ಕಿಡಿಗೇಡಿಗಳು ಕಲ್ಲು ಎಸೆಯುತ್ತಾರೆ. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
“ಕಲ್ಲು ತೂರಾಟದ ಘಟನೆಗಳ ನಿಖರವಾದ ಸಂಖ್ಯೆಯನ್ನು ದಾಖಲಿಸಲಾಗಿಲ್ಲ, ಆದರೆ ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಕನಿಷ್ಠ ಐದು ಕಲ್ಲು ತೂರಾಟದ ಘಟನೆಗಳು ಸಂಭವಿಸಿವೆ. ಮಾಗಡಿ ರಸ್ತೆ, ಶ್ರೀರಾಂಪುರ, ಚಿಕ್ಕಪೇಟೆ, ನ್ಯಾಷನಲ್ ಕಾಲೇಜು ಮತ್ತು ಸಿಟಿ ರೈಲು ನಿಲ್ದಾಣಗಳಲ್ಲಿ ಕಲ್ಲು ತೂರಾಟ ನಡೆದಿದ್ದು, ಮೆಟ್ರೋ ರೈಲಿನ ಗಾಜುಗಳು ಬಿರುಕು ಬಿಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೋ ರೈಲುಗಳಿಗೆ ಆಧುನಿಕ ತಂತ್ರಜ್ಞಾನದಿಂದ ಸಿದ್ಧಪಡಿಸಲಾದ ಕಿಟಕಿಗಳನ್ನು ಅಳವಡಿಸಿರುವುದರಿಂದ ಈ ಕಲ್ಲುಗಳು ಯಾವುದೇ ಪ್ರಯಾಣಿಕರಿಗೆ ಅಥವಾ ಮೆಟ್ರೋ ಸಿಬ್ಬಂದಿಗೆ ತಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇಂತಹ ಘಟನೆಗಳು ವರದಿಯಾದ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ಹೆಚ್ಚುವರಿ ಕ್ರಮವಾಗಿ, ಮೆಟ್ರೋ ಮಾರ್ಗದ ಗೋಡೆಗಳ ಎತ್ತರವನ್ನು ಶೀಘ್ರದಲ್ಲೇ ಹೆಚ್ಚಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ಹಾನಿಗೊಳಗಾದ ನಿರ್ದಿಷ್ಟ ರೈಲುಗಳನ್ನು ತಕ್ಷಣವೇ ಸರಿಪಡಿಸಲಾಗುವುದು ಮತ್ತು ನಂತರ ಮಾತ್ರ ಅವು ಕಾರ್ಯಾಚರಣೆಗೆ ಮರಳುತ್ತವೆ ಎಂದು ಅವರು ಹೇಳಿದ್ದಾರೆ.
ಹಾಗೇ, ಕಲ್ಲು ತೂರಾಟವಾಗುತ್ತಿದ್ದ ಪ್ರದೇಶಗಳಿಗೆ ಮೆಟ್ರೋ ನಿಗಮ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದು, ದಿನದ 24 ಗಂಟೆಯೂ ಕ್ಯಾಮರಾಗಳು ನಿಗಾ ಇಡಲಿವೆ. ಹೀಗಾಗಿ, ಮೆಟ್ರೋ ರೈಲುಗಳ ಮೇಲೆ ಯಾರಾದರೂ ಕಲ್ಲು ತೂರಾಟ ಮಾಡಿದರೆ ಸಿಸಿ ಕ್ಯಾಮರಾ ಮೂಲಕ ಮಾಹಿತಿ ಕಲೆಹಾಕಿ ಪೋಲಿಸ್ ಠಾಣೆಗೆ ದೂರು ನೀಡಲು ಮೆಟ್ರೋ ನಿಗಮ ನಿರ್ಧರಿಸಿದೆ. ಮೆಟ್ರೋ ಸುರಕ್ಷತೆ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದ್ದು, ಸುರಂಗ ಮಾರ್ಗ ಹಾಗೂ ಎಲಿವೇಡೆಟ್ ಕನೆಕ್ಟಿಂಗ್ ಜಂಕ್ಷನ್ಗಳಲ್ಲಿ ಸೆಕ್ಯೂರಿಟಿ ಅಲರ್ಟ್ ಮಾಡಲಾಗಿದೆ.
ಇದನ್ನೂ ಓದಿ: BMRCL Recruitment 2022: ಬೆಂಗಳೂರು ಮೆಟ್ರೋದಲ್ಲಿನ ಹುದ್ದೆಗಳಿಗೆ ಅರ್ಜಿ ಆಹ್ವಾನ
Bengaluru Metro: ಮೆಟ್ರೋ ರೈಲು ಬಳಕೆಯಿಂದ ಕಾರ್ಬನ್ ಎಮಿಷನ್ ಕಡಿಮೆ; ಗಾಳಿಯ ಗುಣಮಟ್ಟ ಸುಧಾರಣೆ- ಅಧ್ಯಯನ ವರದಿ