ಕೇಂದ್ರದ ಅನುಮೋದನೆ ಇದ್ರೂ ಆರಂಭವಾಗದ ಆರೆಂಜ್​​ ಲೈನ್​​ ಮೆಟ್ರೋ ಕಾಮಗಾರಿ: ಕಾರಣ ಏನು?

ಕೇಂದ್ರ ಅನುಮೋದನೆ ದೊರೆತು ಒಂದು ವರ್ಷವಾದರೂ, ನಮ್ಮ ಮೆಟ್ರೋದ ಬಹುನಿರೀಕ್ಷಿತ ಆರೆಂಜ್ ಲೈನ್ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಡಬಲ್ ಡೆಕ್ಕರ್ ಕಾರಿಡಾರ್ ನಿರ್ಮಿಸುವ ರಾಜ್ಯ ಸರ್ಕಾರದ ನಿರ್ಧಾರವು ಯೋಜನಾ ವೆಚ್ಚವನ್ನು 9,000 ಕೋಟಿ ಹೆಚ್ಚಿಸಿದ್ದು, ವಿನ್ಯಾಸ ಬದಲಾವಣೆಗಳಿಗೆ ಕಾರಣವಾಗಿದೆ. ಇದರಿಂದಾಗಿ ಟೆಂಡರ್ ಪ್ರಕ್ರಿಯೆಯೂ ವಿಳಂಬವಾಗಿದ್ದು, ಪಶ್ಚಿಮ ಮತ್ತು ದಕ್ಷಿಣ ಬೆಂಗಳೂರು ಪ್ರಯಾಣಿಕರು ನಿರಾಸೆಗೊಂಡಿದ್ದಾರೆ.

ಕೇಂದ್ರದ ಅನುಮೋದನೆ ಇದ್ರೂ ಆರಂಭವಾಗದ ಆರೆಂಜ್​​ ಲೈನ್​​ ಮೆಟ್ರೋ ಕಾಮಗಾರಿ: ಕಾರಣ ಏನು?
ಆರೆಂಜ್​​ ಲೈನ್​​ ಮೆಟ್ರೋ

Updated on: Jan 06, 2026 | 10:33 AM

ಬೆಂಗಳೂರು, ಜನವರಿ 06: ಬಹು ನಿರೀಕ್ಷಿತ ನಮ್ಮ ಮೆಟ್ರೋ ಆರೆಂಜ್ ಲೈನ್ ಕಾಮಗಾರಿಗೆ ಕೇಂದ್ರ ಸರ್ಕಾರದ ಅನುಮೋದನೆ ದೊರೆತು ಒಂದು ವರ್ಷಕ್ಕಿಂತ ಹೆಚ್ಚು ಸಮಯ ಕಳೆದಿದೆ. ನಮ್ಮ ಮೆಟ್ರೋದ ಮೂರನೇ ಹಂತದ ಪ್ರಾಜೆಕ್ಟ್​​ಗೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದರೂ ಯೋಜನೆ ಮಾತ್ರ ಇನ್ನೂ ಆರಂಭವಾಗಿಲ್ಲ. 2024ರ ಆಗಸ್ಟ್‌ 16ರಂದು ನಮ್ಮ ಮೆಟ್ರೋ ಆರೆಂಜ್ ಲೈನ್ ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ. ಅದಾಗಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕಳೆದರೂ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಇನ್ನೂ ನಾಗರಿಕ ಕಾಮಗಾರಿಗಳಿಗಾಗಿ ಟೆಂಡರ್‌ಗಳನ್ನು ಆಹ್ವಾನಿಸಿಲ್ಲ.

ವಿಳಂಬಕ್ಕೆ ಕಾರಣ ಏನು?

ಒಟ್ಟು ಸುಮಾರು 44.65 ಕಿಮೀ ಉದ್ದದ ಎರಡು ಕಾರಿಡಾರ್‌ಗಳನ್ನು ಆರೆಂಜ್​​ ಲೈನ್​ ಒಳಗೊಂಡಿದೆ. ಸಾರ್ವಜನಿಕ ಸಾರಿಗೆ ಸೌಲಭ್ಯಗಳ ಕೊರತೆಯಿರುವ ವಸತಿ ಪ್ರದೇಶಗಳು, ಕೈಗಾರಿಕಾ ವಲಯಗಳು ಹಾಗೂ ಐಟಿ ಹಬ್‌ಗಳನ್ನು ಸಂಪರ್ಕಿಸುವ ಉದ್ದೇಶ ಈ ಯೋಜನೆಗೆ ಇದೆ. ಪ್ರಾಜೆಕ್ಟ್​​ 1 ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ  32.15 ಕಿ.ಮೀ ಮತ್ತು ಪ್ರಾಜೆಕ್ಟ್​​ 2 ಹೊಸಹಳ್ಳಿಯಿಂದ ಕಡಬಗೆರೆಗೆ 12.5 ಕಿ.ಮೀ. ಸಂಪರ್ಕ ಕಲ್ಪಿಸಲಿದೆ. ರಾಜ್ಯ ಸರ್ಕಾರವು ಸಂಪೂರ್ಣ ಆರೆಂಜ್ ಲೈನ್‌ ಅನ್ನು ಡಬಲ್ ಡೆಕ್ಕರ್ ಕಾರಿಡಾರ್ ಆಗಿ ನಿರ್ಮಿಸುವ ಬಗ್ಗೆ ನಿರ್ಧಾರ ಕೈಗೊಂಡಿರುವುದೇ ಯೋಜನೆಯ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ರಸ್ತೆ ಜಾಗವನ್ನು ಉತ್ತಮವಾಗಿ ಬಳಸುವ ಉದ್ದೇಶ ಈ ನಿರ್ಧಾರದ ಹಿಂದೆ ಇದ್ದರೂ ಇದರಿಂದ ಯೋಜನೆಯ ವೆಚ್ಚ ಮತ್ತು ವಿನ್ಯಾಸದಲ್ಲಿ ದೊಡ್ಡ ಬದಲಾವಣೆಗಳಾಗಿವೆ. ಈ ಒಂದೇ ನಿರ್ಧಾರದಿಂದಲೇ ಯೋಜನೆಗೆ ಸುಮಾರು 9,000 ಕೋಟಿ ರೂ. ಹೆಚ್ಚುವರಿ ವೆಚ್ಚ ಸೇರ್ಪಡೆಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಡಬಲ್​​ ಗುಡ್​​ನ್ಯೂಸ್​​

ನಮ್ಮ ಮೆಟ್ರೋ ಆರೆಂಜ್ ಲೈನ್ ಕುರಿತಾದ ಟೆಂಡರ್‌ಗಳು ಯಾವಾಗ ಹೊರಬರುತ್ತವೆ ಅಥವಾ ಕಾಮಗಾರಿ ಯಾವಾಗ ಆರಂಭವಾಗುತ್ತದೆ ಎಂಬುದಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಯೋಜನೆಗೆ ಅನುಮೋದನೆ ಇದ್ದರೂ ಈವರೆಗೆ ಯಾವುದೇ ಪ್ರಗತಿ ಆಗಿಲ್ಲ. ಹೀಗಾಗಿ ಯೋಜನೆಯ ವೆಚ್ಚಗಳು ಏರುತ್ತಲೇ ಇರೋದು ಒಂದೆಡೆಯಾದರೆ, ಆರೆಂಜ್​​ ಲೈನ್​​ ಮೆಟ್ರೋ ಆರಂಭದಿಂದ ಟ್ರಾಫಿಕ್​​ ಸಮಸ್ಯೆ ಇಳಿಕೆಯಾಗಿ ಸುಗಮ ಸಂಚಾರದ ಕನಸು ಕಂಡಿದ್ದ ಪಶ್ಚಿಮ ಮತ್ತು ದಕ್ಷಿಣ ಬೆಂಗಳೂರಿನ ಪ್ರಯಾಣಿಕರು ತಾತ್ಕಾಲಿಕ ನಿರಾಸೆಗೆ ಒಳಗಾಗಬೇಕಾದ ಸ್ಥಿತಿ ಉದ್ಭವಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 10:30 am, Tue, 6 January 26