ಕಳ್ಳರ ಕೈ ಹಿಡಿಯಲಿಲ್ಲ ಮಂಜುನಾಥ: ಉದ್ಯಮಿ ಮನೆಯಲ್ಲಿ ಕದ್ದು ಸಿಕ್ಕಿಬಿದ್ದ ಗ್ಯಾಂಗ್
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಉದ್ಯಮಿ ಮನೆಯಲ್ಲಿ ಬಂಗಾರ, ಬೆಳ್ಳಿ, ನಗದು ಕಳ್ಳತನ ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಕ್ರಿಸ್ಮಸ್ ರಜೆಯಲ್ಲಿ ಮಾಲೀಕರು ಪ್ರವಾಸಕ್ಕೆ ಹೋದಾಗ, ಮೂರು ತಿಂಗಳ ಯೋಜನೆ ರೂಪಿಸಿದ್ದ ಮನೆಗೆಲಸದವರು ಈ ಕೃತ್ಯ ಎಸಗಿದ್ದರು. ಪೊಲೀಸರು 550 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ ಮತ್ತು 3 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಿಂದ ಕಳ್ಳತನ ಬಯಲಾಗಿದೆ.

ಬೆಂಗಳೂರು, ಜನವರಿ 06: ಉದ್ಯಮಿಯೋರ್ವರ ಮನೆಯಲ್ಲಿ ಬಂಗಾರ, ಬೆಳ್ಳಿ ಮತ್ತು ಹಣ ಕಳ್ಳತನ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಗೋಪಾಲ ಸಿಂಧೆ ಎಂಬವರಿಗೆ ಸೇರಿದ ಲಕ್ಷ್ಮೀಪುರ ಕ್ರಾಸ್ ಬಳಿಯ ಡೊನಾಟಾ ಕೌಂಟಿ ಎಂಬ ವಿಲ್ಲಾದಲ್ಲಿ ಕಳೆದ ಡಿಸೆಂಬರ್ 24ರಂದು ಗ್ಯಾಂ ಕೈಚಳಕ ತೋರಿಸಿತ್ತು. ಪ್ರಕರಣದ ತನಿಖೆ ವೇಳೆ ಮನೆಗೆಲಸದವರೇ ಆರೋಪಿಗಳು ಎಂಬುದು ಗೊತ್ತಾಗಿದ್ದು, ಗ್ಯಾಂ ಪ್ಲ್ಯಾನ್ ಕಂಡು ಖಾಕಿಯೇ ಗಾಬರಿಯಾಗಿದೆ.
ಮಂಜುನಾಥ, ಚಂದನ್, ನರೇಂದ್ರ ಹಾಗೂ ಮಂಜಿತ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಬರೋಬ್ಬರಿ 550 ಗ್ರಾಂ ಚಿನ್ನಾಭರಣ, 3 ಕೆ.ಜಿ. ಬೆಳ್ಳಿ ಮತ್ತು 3 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಮಂಜಿತ್ ಉದ್ಯಮಿ ಮನೆಯ ಕೆಲಸದಾಳು ಆಗಿದ್ರೆ ನರೇಂದ್ರ ಡ್ರೈವರ್ ಆಗಿದ್ದ ಎನ್ನಲಾಗಿದೆ. ಮಂಜಿತ್ ಮೂಲತಃ ಬಿಹಾರದವನಾಗಿದ್ದು ನರೇಂದ್ರ ದೊಡ್ಡಬಳ್ಳಾಪುರದವನು. ಇಬ್ಬರು ಸೇರಿ ಮನೆಗಳ್ಳತನಕ್ಕೆ ಪ್ಲ್ಯಾನ್ ಮಾಡಿದ್ದರು. ಎಷ್ಟು ದಿನ ಹೀಗೆ ಕೆಲಸ ಮಾಡೋದು ಎಂದು ಯೋಚಿಸಿದ್ದ ಇವರು, ಮಾಲೀಕನ ಮನೆ ಕಳ್ಳತನ ಮಾಡಿ ಲೈಫ್ ಸೆಟಲ್ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.
ಇದನ್ನೂ ಓದಿ: ಕೈ ಮುರಿದು, ಕಣ್ಣಿಗೆ ಚಾಕು ಇರಿದ ಪತ್ನಿ; ಪೊಲೀಸ್ ಠಾಣೆಗೆ ಓಡೋಡಿ ಬಂದ ರೌಡಿಶೀಟರ್
ತಮ್ಮ ಪ್ಲ್ಯಾನ್ ಪ್ರಕಾರ ನರೇಂದ್ರ ತನ್ನ ಸ್ನೇಹಿತ ಮಂಜುನಾಥನ ಟೀಂಗೆ ಸೇರಿಸಿಕೊಂಡಿದ್ದ. ಈತ ಅದಾಗಲೇ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡಿದ್ದ ಕಾರಣ ತಮಗೆ ನೆರವಾಗ್ತಾನೆಂದು ಭಾವಿಸಿದ್ದ. ಇತ್ತ ಮಂಜಿತ್ ಕೂಡ ತನ್ನ ಬಿಹಾರದ ಸ್ನೇಹಿತ ಚಂದನ್ನ ಜೊತೆ ಸೇರಿಸಿಕೊಂಡಿದ್ದ. ಸುಮಾರು 3 ತಿಂಗಳು ಕಳ್ಳತನಕ್ಕಾಗಿ ಟೀಂ ಸ್ಕೆಚ್ ಹಾಕಿತ್ತು. ಈ ನಡುವೆ ಉದ್ಯಮಿ ಮನೆಯವರು ಕ್ರಿಸ್ಮಸ್ ರಜೆ ಹಿನ್ನೆಲೆ ಪ್ರವಾಸಕ್ಕೆ ಹೋದಾಗ ಗ್ಯಾಂಗ್ ಮನೆಯಲ್ಲಿ ಕಳ್ಳತನ ನಡೆಸಿದೆ. ಆರೋಪಿ ಮಂಜುನಾಥ ಧರ್ಮಸ್ಥಳದ ಭಕ್ತನಾಗಿದ್ದು, ಕಳ್ಳತನದ ಬಳಿಕ ಹರಕೆ ತೀರಿಸಲು ಚಂದನ್ ಮತ್ತು ಮಂಜುನಾಥ್ ಧರ್ಮಸ್ಥಳಕ್ಕೆ ತೆರಳಿದ್ದರು. ನಂತರ ಸುಮಾರು ಮೂರು ದಿನಗಳ ಕಾಲ ಕದ್ದ ದುಡ್ಡಲ್ಲಿ ಟ್ರಿಪ್ ಮಾಡಿದ್ದರು ಎನ್ನಲಾಗಿದೆ.
ಇತ್ತ ಪ್ರವಾಸ ಮುಗಿಸಿ ಉದ್ಯಮಿ ಮನೆಗೆ ಬಂದಾಗ ಕಳ್ಳತನ ನಡೆದಿರೋದು ಗೊತ್ತಾಗಿದೆ. ಈ ಹಿನ್ನೆಲೆ ಹೊಸ ವರ್ಷದ ದಿನವೇ ಅವರು ದೂರು ಸಲ್ಲಿಸಿದ್ದರು. ಬಟ್ಟೆ ಒಗೆಯುವಾಗ ಜೇಬಿನಲ್ಲಿ ಹಣ ಸಿಕ್ಕರೂ ಮಂಜಿತ್ ವಾಪಸ್ಸು ಕೊಡುತ್ತಿದ್ದ ಕಾರಣ, ಮನೆ ಕೆಲಸದವರ ಮೇಲೆ ಇವರಿಗೆ ಯಾವುದೇ ಅನುಮಾನ ಬಂದಿರಲಿಲ್ಲ. ಆದರೆ ಸಿಸಿ ಕ್ಯಾಮರಾ ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿದಾಗ ಮನೆ ಕೆಲಸದವರ ಕಳ್ಳಾಟ ಬಯಲಾಗಿದೆ. ಪ್ರಾಮಾಣಿಕರು ಎಂದು ನಂಬಿದ್ದವರ ಈ ಕೃತ್ಯ ಕಂಡು ಉದ್ಯಮಿ ಕುಟುಂಬ ಹೌಹಾರಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.