
ಬೆಂಗಳೂರು, ಜನವರಿ 06: ಕೊರೊನಾ ಬಳಿಕ ಕೊಂಚ ಇಳಿಕೆಯಾಗಿದ್ದ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಈಗ ಮತ್ತೆ ಹಳೆಯ ಸ್ಥಿತಿಗೆ ಮರಳಿದೆ. ಪ್ರತಿದಿನ ವಾಹನ ದಟ್ಟಣೆ ಸಮಸ್ಯೆಗೆ ಸಿಲುಕಿ ಒದ್ದಾಡುತ್ತಿರುವ ಸಿಲಿಕಾನ್ ಸಿಟಿ ಮಂದಿಗೆ ನಮ್ಮ ಮೆಟ್ರೋ ಗುಡ್ನ್ಯೂಸ್ ಕೊಟ್ಟಿದ್ದು, ಒಂದಲ್ಲ ಎರಡು ಹೊಸ ಮಾರ್ಗಗಗಳು ಈ ವರ್ಷದಿಂದಲೇ ಕಾರ್ಯಾರಂಭ ಮಾಡಲಿವೆ. ಈಗಾಗಲೇ ಸೇವೆ ಒದಗಿಸುತ್ತಿರುವ ಹಸಿರು, ಗುಲಾಬಿ ಮತ್ತು ಹಳದಿ ಮಾರ್ಗಗಳ ಜೊತೆ ಮತ್ತೆರಡು ಮಾರ್ಗಗಳಲ್ಲಿ ಮೆಟ್ರೋ ರೈಲುಗಳ ಸಂಚಾರದಿಂದ ನಗರದ ಟ್ರಾಫಿಕ್ ಸಮಸ್ಯೆಗೆ ಬಹುತೇಕ ಪರಿಹಾರ ಸಿಗಬಹುದೆಂಬ ನಿರೀಕ್ಷೆಯಿದೆ.
2026ರ ಅಂತ್ಯದ ಒಳಗೆ ಪಿಂಕ್ ಮತ್ತು ಬ್ಲ್ಯೂ ಲೈನ್ಗಳಲ್ಲಿ ಮೆಟ್ರೋ ರೈಲುಗಳು ವಾಣಿಜ್ಯ ಸಂಚಾರ ನಡೆಸಲಿವೆ. ಮೇ ತಿಂಗಳಿನಲ್ಲಿ ಪಿಂಕ್ ಲೈನ್ ಮೊದಲ ಹಂತ ಓಪನ್ ಆದರೆ, ಡಿಸೆಂಬರ್ ವೇಳೆಗೆ ಬ್ಲ್ಯೂ ಲೈನ್ನ ಮೊದಲ ಹಂತವೂ ಕಾರ್ಯಾಚರಣೆ ಆರಂಭಿಸಲಿದೆ. ಕಾಳೇನ ಅಗ್ರಹಾರ ಟು ನಾಗವಾರ ಸಂಪರ್ಕಿಸುವ ಪಿಂಕ್ ಲೈನ್ 21.25 ಕಿ.ಮೀ. ವಿಸ್ತೀರ್ಣವಿದ್ದು, ಆ ಪೈಕಿ ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 7.5 ಕಿ.ಮೀ.ಯ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ಗಳು ಮೇನಲ್ಲಿ ಓಪನ್ ಆಗಲಿದೆ. ನವೆಂಬರ್ನಲ್ಲಿ ತಾವರೆಕೆರೆ ಟು ನಾಗವಾರ 12 ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್ಗಳ ಕಾರ್ಯಾಚರಣೆ ಶುರುವಾಗಲಿದೆ. ಪಿಂಕ್ ಲೈನ್ಗಾಗಿ ಈಗಾಗಲೇ BEMLನಿಂದ ಒಂದು ಡ್ರೈವರ್ಲೆಸ್ ರೈಲು ಕೂಡ ಬಂದಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಹಳದಿ ಮಾರ್ಗ ಪ್ರಯಾಣಿಕರಿಗೆ ಶುಭಸುದ್ದಿ; ಬೆಂಗಳೂರು ತಲುಪಿದ ಡ್ರೈವರ್ಲೆಸ್ 7ನೇ ರೈಲು
ಬ್ಲೂ ಲೈನ್ನ ಸಿಲ್ಕ್ ಬೋರ್ಡ್ ಟು ಕೆ.ಆರ್.ಪುರಂ ಮಾರ್ಗ ಈ ವರ್ಷ ಡಿಸೆಂಬರ್ ವೇಳೆಗೆ ಓಪನ್ ಆಗಲಿದೆ. ಇದು 17.75 ಕಿ.ಮೀ. ಮಾರ್ಗದಲ್ಲಿ, 13 ಸ್ಟೇಷನ್ಗಳಿವೆ. ನೀಲಿ ಮಾರ್ಗವು ಒಟ್ಟು 58.19 ಕಿ.ಮೀ. ವಿಸ್ತೀರ್ಣವಿದ್ದು, ಮೊದಲ ಹಂತ 2026ರ ವರ್ಷಾಂತ್ಯದ ವೇಳೆಗೆ ಕಾರ್ಯಾರಂಭವಾದರೆ, 2027ರಲ್ಲಿ ಎರಡನೇ ಹಂತ ಓಪನ್ ಆಗಲಿದೆ. ಈ ಎರಡು ಮಾರ್ಗಗಳು ಕಾರ್ಯಾಚರಣೆ ಆರಂಭಿಸಿದರೆ ನಗರದ ಟ್ರಾಫಿಕ್ ಇಳಿಕೆಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದು ಮೆಟ್ರೋ ಪ್ರಯಾಣಿಕರು ಕೂಡ ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:56 am, Tue, 6 January 26