
ಬೆಂಗಳೂರು, ಆಗಸ್ಟ್ 19: ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತರಿಗೆ ನಂದಿನಿ ಪಶು ಆಹಾರದ ಗುಣಮಟ್ಟದ ಕುರಿತ ಆರೋಪಗಳು ಆತಂಕ ಮೂಡಿಸಿವೆ. ಬೆಂಗಳೂರಿನ (Bengaluru) ಯಲಹಂಕ ಸಮೀಪದ ಗ್ರಾಮವೊಂದರಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಹಾಗೂ ಬಡಕಲಾಗಿರುವ ಹಸುಗಳನ್ನು ಕಂಡು ರೈತರು ಕಂಗಾಲಾಗಿದ್ದಾರೆ. ರಾಜಾನುಕುಂಟೆಯ ಪಶು ಆಹಾರ ಘಟಕದಲ್ಲಿ ತಯಾರಿಸಲಾದ ಆಹಾರದ ಗುಣಮಟ್ಟದ ಬಗ್ಗೆ ರೈತರು ಪ್ರಶ್ನೆ ಎತ್ತಿದ್ದಾರೆ.
ರಾಜಾನುಕುಂಟೆ ಪಶು ಆಹಾರ ಘಟಕದಲ್ಲಿ ಕಳಪೆ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಬಳಸಿ ಪಶು ಆಹಾರ ತಯಾರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇಂತಹ ಆಹಾರವನ್ನು ರೈತರಿಗೆ ಪೂರೈಕೆ ಮಾಡಲಾಗಿದ್ದು, ಅದನ್ನು ಸೇವಿಸಿದ ಬಳಿಕ ಹಲವು ಪಶುಗಳು ಅನಾರೋಗ್ಯಕ್ಕೆ ಒಳಗಾಗಿವೆ ಎಂದು ರೈತರು ಆರೋಪಿಸಿದ್ದಾರೆ.
ಕೆಲವು ಹಸುಗಳಲ್ಲಿ ಹಾಲಿನ ಇಳುವರಿ ಗಣನೀಯವಾಗಿ ಕುಸಿದಿದೆ. ಇನ್ನೂ ಕೆಲವು ಪಶುಗಳು ಗರ್ಭಧರಿಸದೆ ಆರೋಗ್ಯ ಸಮಸ್ಯೆ ಎದುರಿಸುತ್ತಿವೆ ಎನ್ನಲಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ 1,600 ಹಸುಗಳು ಮೃತಪಟ್ಟಿವೆ ಎಂಬ ಆರೋಪವೂ ಕೇಳಿಬಂದಿದೆ. ಆದರೆ, ಈ ಸಾವಿಗೆ ಪಶು ಆಹಾರವೇ ನೇರ ಕಾರಣ ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ.
ಪಶು ಆಹಾರ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಖರೀದಿ ಮತ್ತು ಗುಣಮಟ್ಟದ ಪರಿಶೀಲನೆಯಲ್ಲಿ ಅಕ್ರಮ ನಡೆದಿರುವ ಅನುಮಾನವನ್ನು ರೈತರು ವ್ಯಕ್ತಪಡಿಸಿದ್ದಾರೆ. ಸುಮಾರು 86 ಸಾವಿರ ಮೆಟ್ರಿಕ್ ಟನ್ ಪಶು ಆಹಾರ ಕಳಪೆ ಗುಣಮಟ್ಟದ್ದಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಆಹಾರವನ್ನು ರೈತರು ಸ್ವೀಕರಿಸದೆ ಘಟಕಕ್ಕೆ ವಾಪಸ್ ಕಳುಹಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.
ಪಶು ಆಹಾರ ತಯಾರಿಕೆಗೆ ಬಳಸುವ ಮೊಲಾಸಸ್ (ಕಾಕಂಬಿ) ಸೇರಿದಂತೆ ವಿವಿಧ ಕಚ್ಚಾ ವಸ್ತುಗಳ ಖರೀದಿಯಲ್ಲೂ ಅಕ್ರಮ ನಡೆದಿರುವ ಆರೋಪವಿದೆ. ಗುಣಮಟ್ಟ ಕಡಿಮೆ ಇರುವ TRS ಹೊಂದಿದ್ದ ಕಾಕಂಬಿಯನ್ನು ಖರೀದಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಬಮೂಲ್ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಸುಮಾರು 14,500 ಮೆಟ್ರಿಕ್ ಟನ್ ಪಶು ಆಹಾರ ಖರೀದಿಸಲಾಗುತ್ತಿದೆ ಎನ್ನಲಾಗಿದೆ. ಹಾಲಿನ ಗುಣಮಟ್ಟದ ಕಾರಣ ನೀಡಿ ಕೆಲವು ಸೊಸೈಟಿಗಳು ಹಾಲು ಸ್ವೀಕರಿಸುವುದಿಲ್ಲ ಎಂಬ ಆರೋಪವೂ ರೈತರಿಂದ ಕೇಳಿಬಂದಿದೆ. ಇದರ ನಡುವೆ ರೈತರು ನಂದಿನಿ ಪಶು ಆಹಾರ ಖರೀದಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪವೂ ಇದೆ. ಆಹಾರದ ಗುಣಮಟ್ಟದ ಬಗ್ಗೆ ಅನುಮಾನವಿದ್ದರೂ ರೈತರು ಅದನ್ನು ಖರೀದಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದು ದೂರಲಾಗಿದೆ.
ಕಳಪೆ ಗುಣಮಟ್ಟದ ಪಶು ಆಹಾರದಿಂದ ಪಶುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂಬ ಆರೋಪ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಆನೇಕಲ್, ನೆಲಮಂಗಲ, ರಾಮನಗರ ಮತ್ತು ಚನ್ನಪಟ್ಟಣ ಭಾಗದ ರೈತರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ: ಬೆಂಗಳೂರು ಕೂಗಳತೆ ದೂರದಲ್ಲೇ ನಕಲಿ ಔಷಧ ಜಾಲ! ನಕಲಿ ಕ್ಯಾನ್ಸರ್ ಔಷಧಿ ಮಾರುತ್ತಿದ್ದ ಬೃಹತ್ ಜಾಲ ಪತ್ತೆ, ಕಿಂಗ್ಪಿನ್ಗೆ ಬಲೆ
ಪಶು ಆಹಾರವನ್ನು ರೈತರು ಘಟಕಕ್ಕೆ ವಾಪಸ್ ಕಳುಹಿಸುತ್ತಿರುವ ಪ್ರಕರಣಗಳೂ ವರದಿಯಾಗಿವೆ. ಈ ಆರೋಪಗಳ ಹಿನ್ನೆಲೆಯಲ್ಲಿ ರಾಜಾನುಕುಂಟೆ ಪಶು ಆಹಾರ ಘಟಕದಲ್ಲಿ ಕಚ್ಚಾ ವಸ್ತುಗಳ ಖರೀದಿ, ಗುಣಮಟ್ಟ ಪರೀಕ್ಷೆ, ಉತ್ಪಾದನೆ ಮತ್ತು ಪೂರೈಕೆ ಪ್ರಕ್ರಿಯೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇದೀಗ, ಪಶು ಆಹಾರದ ಗುಣಮಟ್ಟದ ಕುರಿತು ಎದ್ದಿರುವ ಪ್ರಶ್ನೆಗಳಿಗೆ KMF ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ