ಬೆಂಗಳೂರು: ಸತತ 9 ದಿನಗಳಿಂದ ಎನ್‌ಸಿಬಿ ದಕ್ಷಿಣ ವಲಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, 3 ಕಡೆ ಡ್ರಗ್ಸ್ ಪ್ರಕರಣ ಸಂಬಂಧ ದಾಳಿ ನಡೆಸಿದ್ದಾರೆ. ಈ ಪೈಕಿ 6 ಆರೋಪಿಗಳನ್ನು ಎನ್‌ಸಿಬಿ (NCB) ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ 244 ಗ್ರಾಂ ಆಂಫೆಟಮೈನ್(AMPHETAMINE), 25 ಎಲ್‌ಎಸ್‌ಡಿ ಪೇಪರ್, 2 ಗ್ರಾಂ ಮೆಥಾಕ್ವಾಲೋನ್ (METHAQUALONE), 212.5 ಕೆಜಿ ಗಾಂಜಾ ಮತ್ತು ಡ್ರಗ್ಸ್ ಸಾಗಿಸುತ್ತಿದ್ದ 2 ವಾಹನವನ್ನು ಎನ್‌ಸಿಬಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನಿಂದ ತಿರುವನಂತಪುರಕ್ಕೆ ಕೊರಿಯರ್ ಮೂಲಕ ಚೂಯಿಂಗ್ ಗಮ್, ಗಿಫ್ಟ್ ಪಾರ್ಸೆಲ್ಗಳಲ್ಲಿ ಡ್ರಗ್ಸ್ ಇಟ್ಟು ಸಾಗಿಸುತ್ತಿದ್ದರು. ತಿರುವನಂತಪುರದಲ್ಲಿ ಮೊದಲಿಗೆ ಓರ್ವ ಆರೋಪಿ ಬಂಧಿಸಿ ತನಿಖೆ ನಡೆಸಿದ್ದ ಎನ್‌ಸಿಬಿ ಅಧಿಕಾರಿಗಳು ಬಳಿಕ ವೆಲ್ಲೂರಿನ ಕೃಷ್ಣಗಿರಿ ರಸ್ತೆ, ತಮಿಳು ನಾಡಿನ ಪಲ್ಲಿಕೊಂಡ, ಟೋಲ್ ಪ್ಲಾಜಾದಲ್ಲಿ ಜಪ್ತಿ ಮಾಡಿದ್ದಾರೆ. ಈ ವೇಳೆ ತಮಿಳುನಾಡಿನ ಇಬ್ಬರು ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಆರೋಪಿಗಳು ಗಾಂಜಾವನ್ನು ಆಂಧ್ರ ಪ್ರದೇಶದಿಂದ ಸಾಗಿಸುತ್ತಿದ್ದರು. ಅಲ್ಲದೇ ಬೆಂಗಳೂರಿನಿಂದ ತಿರುವಂನಂತಪುರಕ್ಕೆ ಕೊರಿಯರ್ ಮೂಲಕ 40 ಗ್ರಾಂ ಮೆಥಾಂಫೆಟಮೈನ್ ಪಾರ್ಸೆಲ್ ಮಾಡಲಾಗಿತ್ತು ಎನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ಇಬ್ಬರು ಕುಖ್ಯಾತ ಕಳ್ಳರ ಬಂಧನ
ಬ್ಯಾಟರಾಯನಪುರ ಪೊಲೀಸರು ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸಿದ್ದಾರೆ. ಸೂರ್ಯ, ರಾಜಕುಮಾರ ಬಂಧಿತ ಆರೋಪಿಗಳು. ಬಂಧಿತರಿಂದ 23. 50 ಲಕ್ಷ ರೂ. ಮೌಲ್ಯದ 437 ಗ್ರಾಂ ಚಿನ್ನಾಭರಣ, 4 ದ್ವಿಚಕ್ರವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಎಂಟಿಸಿ ಬಸ್ಗಳೇ ಇವರ ಟಾರ್ಗೆಟ್ ಆಗಿತ್ತು. ಬಸ್ನಲ್ಲಿ ಹತ್ತಿ ನೂಕು ನುಗ್ಗಲು ಮಾಡುತ್ತಿದ್ದು, ನಂತರ ಕತ್ತು ಹಾಗೂ ಬ್ಯಾಗ್ನಲ್ಲಿದ್ದ ಚಿನ್ನ ಎಗರಿಸುತ್ತಿದ್ದರು ಎಂಬುವುದು ತನಿಖೆ ವೇಳೆ ಹೊರಬಿದ್ದಿದೆ.
ಧಾರವಾಡ: ವಿದ್ಯಾರ್ಥಿ ಗುಂಪುಗಳ ನಡುವೆ ಮಾರಾಮಾರಿ
ಧಾರವಾಡದ ಗ್ರಾಮೀಣ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ಗಲಾಟೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಕಾಲೇಜು ಯುವಕರು ಕಿತ್ತಾಡಿಕೊಂಡಿದ್ದಾರೆ. ಅಲ್ಲದೇ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ನಗರ ಠಾಣೆ ಪೊಲೀಸರು ವಿದ್ಯಾರ್ಥಿಗಳನ್ನು ಚದುರಿಸಿದ್ದಾರೆ.
ರಾಮನಗರ: ತಾಮ್ರದ ತಂತಿ ಕದಿಯುತ್ತಿದ್ದ ಇಬ್ಬರು ಆರೋಪಿಗಳ ಸೆರೆ
ರಾಮನಗರ ಜಿಲ್ಲೆ ಕಗ್ಗಲಿಪುರ ಪೊಲೀಸರ ಕಾರ್ಯಾಚರಣೆ ವೇಳೆ ತಾಮ್ರದ ತಂತಿ ಕದಿಯುತ್ತಿದ್ದ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಚಿಕ್ಕತೋಗೂರಿನ ವಿಷ್ಣು(24), ಪ್ರಮೋದ್(23) ಬಂಧಿತ ಆರೋಪಿಗಳು. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದ ವೇಳೆ ಸೆರೆ ಹಿಡಿಯಲಾಗಿದ್ದು, ಆರೋಪಿಗಳ ಬಳಿಯಿದ್ದ 60 ಕೆಜಿ ತಾಮ್ರದ ತಂತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಗ್ಗಲಿಪುರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಡ್ರಗ್ಸ್ ತನಿಖೆ ದಾರಿ ತಪ್ಪಿಸಲೆಂದೇ ಬಿಟ್ ಕಾಯಿನ್ ಮುನ್ನೆಲೆಗೆ ತಂದ ಕಾಂಗ್ರೆಸ್: ಬಿಜೆಪಿ ನಾಯಕ ಗಂಭೀರ ಆರೋಪ
ಪ್ರವಾಸಕ್ಕೆ ತೆರಳುತ್ತಿದ್ದ ಯುವಕರ ಕಾರಿನಲ್ಲಿ ಗಾಂಜಾ ಪತ್ತೆ, ಸುಂಕದಕಟ್ಟೆ ಮೂಲದ ಮೂವರ ಬಂಧನ
Published On - 11:53 am, Sun, 21 November 21