ಕರ್ನಾಟಕದಲ್ಲಿ ಬುಧವಾರ 5 ಮಂದಿಗೆ ಒಮಿಕ್ರಾನ್ ಸೋಂಕು ದೃಢ; ಒಟ್ಟು ಪ್ರಕರಣಗಳ ಸಂಖ್ಯೆ 43ಕ್ಕೆ ಏರಿಕೆ

| Updated By: ganapathi bhat

Updated on: Dec 29, 2021 | 10:44 PM

ಸೋಂಕಿತರನ್ನ ಐಸೋಲೇಷನ್​ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಈ ಬಗ್ಗೆ ಟ್ವಿಟರ್​ನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ ಬುಧವಾರ 5 ಮಂದಿಗೆ ಒಮಿಕ್ರಾನ್ ಸೋಂಕು ದೃಢ; ಒಟ್ಟು ಪ್ರಕರಣಗಳ ಸಂಖ್ಯೆ 43ಕ್ಕೆ ಏರಿಕೆ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು ಮತ್ತೆ ಐವರಿಗೆ ಒಮಿಕ್ರಾನ್ ಸೋಂಕು ದೃಢವಾಗಿದೆ. ರಾಜ್ಯದಲ್ಲಿ ಒಮಿಕ್ರಾನ್​ ಸೋಂಕಿತರ ಸಂಖ್ಯೆ 43ಕ್ಕೆ ಏರಿಕೆ ಆಗಿದೆ. ದಾವಣಗೆರೆ ಮೂಲದ 22 ವರ್ಷದ ಯುವತಿಗೆ ಒಮಿಕ್ರಾನ್​ ದೃಢವಾಗಿದೆ. ಡಿಸೆಂಬರ್ 22ರಂದು ದಾವಣಗೆರೆಯ ಯುವತಿ ಅಮೆರಿಕದಿಂದ ಬೆಂಗಳೂರಿಗೆ ಬಂದಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ಅಮೆರಿಕದಿಂದ ಬೆಂಗಳೂರಿಗೆ ಬಂದಿದ್ದ 24 ವರ್ಷದ ಯುವಕ, ದುಬೈನಿಂದ ಬಂದಿದ್ದ 53 ವರ್ಷದ ವ್ಯಕ್ತಿ, ಘಾನಾದಿಂದ ಬೆಂಗಳೂರಿಗೆ ಬಂದಿದ್ದ 61 ವರ್ಷದ ವೃದ್ಧ, ಮುಂಬೈನಿಂದ ಬೆಂಗಳೂರಿಗೆ ಬಂದಿದ್ದ 41 ವರ್ಷದ ವ್ಯಕ್ತಿಗೆ ಒಮಿಕ್ರಾನ್ ಸೋಂಕು ದೃಢವಾಗಿದೆ.

ಸೋಂಕಿತರನ್ನ ಐಸೋಲೇಷನ್​ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಈ ಬಗ್ಗೆ ಟ್ವಿಟರ್​ನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಅಪಾರ್ಟ್​ಮೆಂಟ್​ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆ ಆಗಿದೆ. ಓಕಳಿಪುರಂನ ಶೋಭಾ ಇಂದ್ರಪ್ರಸ್ಥ ಅಪಾರ್ಟ್​ಮೆಂಟ್​ನಲ್ಲಿ ಘಟನೆ ನಡೆದಿದೆ. ಅಪಾರ್ಟ್​ಮೆಂಟ್​ನಲ್ಲಿ 5 ದಿನಗಳಿಂದ ಟೆಸ್ಟ್ ಮಾಡುತ್ತಿದ್ದೆವು. ನಿನ್ನೆ 27 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 81 ಜನರು, ದ್ವಿತೀಯ ಸಂರ್ಪಕದಲ್ಲಿದ್ದ 395 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ನಿನ್ನೆ ಟೆಸ್ಟ್​ಗೆ ಕಳುಹಿಸಿದ್ದ 220 ಸ್ಯಾಂಪಲ್ಸ್​​ ಪೈಕಿ 9 ಪಾಸಿಟಿವ್​ ಬಂದಿದೆ. ಸೋಂಕಿತರ ಸ್ಯಾಂಪಲ್ ಜಿನೋಮಿಕ್ ಸೀಕ್ವೆನ್ಸಿಂಗ್​ಗೆ ರವಾನೆ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ನಂದ ಹೇಳಿಕೆ ನೀಡಿದ್ದಾರೆ.

ಅಪಾರ್ಟ್​ಮೆಂಟ್​ನಲ್ಲಿ ವಾಸಿಸುವ 480 ಜನರಿಗೆ ಕೊವಿಡ್​ ಟೆಸ್ಟ್​ ಮಾಡಲಾಗಿದೆ. ಎಲ್ಲರನ್ನೂ ಹೋಮ್​ ಐಸೋಲೇಷನ್​ನಲ್ಲಿ ಇರಿಸಲಾಗಿದೆ. ಡಿ.19ರಂದು ಬ್ಯಾಡ್ಮಿಂಟನ್ ಟೂರ್ನಮೆಂಟ್​ ಆಯೋಜಿಸಿದ್ದರು. ಅಪಾರ್ಟ್​ಮೆಂಟ್ ನಿವಾಸಿಗಳೇ ಟೂರ್ನಮೆಂಟ್ ಆಯೋಜಿಸಿದ್ದರು. ಬಳಿಕ ವಿದೇಶಕ್ಕೆ ತೆರಳಲು ಕೊವಿಡ್ ಟೆಸ್ಟ್​ ಮಾಡಿಸಿದ್ದ ನಿವಾಸಿಗಳು. ಕೊವಿಡ್-19 ಟೆಸ್ಟ್​ ವೇಳೆ 27 ಜನರಿಗೆ ಕೊರೊನಾ ಪಾಸಿಟಿವ್​ ಬಂದಿದೆ. ಇದೀಗ ಅಪಾರ್ಟ್​ಮೆಂಟ್​ನಲ್ಲಿ ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.

ಬೆಂಗಳೂರು ನಗರದಲ್ಲಿ 2ನೇ ದಿನದ ನೈಟ್ ಕರ್ಫ್ಯೂ
ಬೆಂಗಳೂರು ನಗರದಲ್ಲಿ 2ನೇ ದಿನದ ನೈಟ್ ಕರ್ಫ್ಯೂ ಆರಂಭವಾಗಿದೆ. ಕಾರ್ಪೊರೇಷನ್ ಸರ್ಕಲ್, ಮೌರ್ಯ ಸರ್ಕಲ್, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಇಂದಿರಾನಗರ, ಮೈಸೂರು ರಸ್ತೆ, ಬನ್ನೇರುಘಟ್ಟ ರಸ್ತೆ ಸೇರಿದಂತೆ ನಗರದೆಲ್ಲೆಡೆ ಪೊಲೀಸ್ ಕಣ್ಗಾವಲು ಇದೆ. ಪಬ್, ಬಾರ್, ಹೋಟೆಲ್​ಗಳಿರುವ ಏರಿಯಾದಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಪೊಲೀಸರು ರಾತ್ರಿ 10ರ ನಂತರ ವಾಹನ ತಪಾಸಣೆ ನಡೆಸಲಿದ್ದಾರೆ. ಬೆಂಗಳೂರಿನ ಎಲ್ಲಾ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ತಪಾಸಣೆ ಮಾಡಲಾಗುತ್ತದೆ. ನಿನ್ನೆ ಮೊದಲ ದಿನವಾಗಿದ್ದರಿಂದ ವಿನಾಯಿತಿ ನೀಡಿದ್ದ ಪೊಲೀಸರು, ಇಂದು ಅನಗತ್ಯವಾಗಿ ರಸ್ತೆಗಿಳಿಯೋರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಬಗ್ಗೆ ಹೇಳಲಾಗಿದೆ. ಎನ್​ಡಿಎಂಎ ಅಡಿ ಪೊಲೀಸರು ಮೊಕದ್ದಮೆ ದಾಖಲಿಸಲಿದ್ದಾರೆ.

ಕೊರೊನಾ ನಿಯಮ ಮರೆತು ಮಾಜಿ ಶಾಸಕರ ಸೆಲೆಬ್ರೇಷನ್
ಕೊರೊನಾ ನಿಯಮ ಮರೆತು, ನೈಟ್​ಕರ್ಫ್ಯೂ ಉಲ್ಲಂಘಿಸಿ ಮಾಜಿ ಶಾಸಕ ಒಬ್ಬರು ಅದ್ಧೂರಿಯಾಗಿ ಬರ್ತ್​ಡೇ ಆಚರಣೆ ನಡೆಸಿದ ಘಟನೆ ನಡೆದಿದೆ. ಬಿಜೆಪಿಯ ಮಾಜಿ ಶಾಸಕ ಮುನಿರಾಜು ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಮಾಜಿ ಶಾಸಕ ಮುನಿರಾಜುಗೆ ಬೆಂಬಲಿಗರು ಹೂವಿನ ಮಳೆಗರೆದಿದ್ದಾರೆ. ಎಸ್​.ಮುನಿರಾಜು ಬರ್ತ್​ಡೇ ಸಂಭ್ರಮದಲ್ಲಿ ಬಿರಿಯಾನಿ ಹಂಚಿಕೆ ಮಾಡಲಾಗಿದೆ. ದಾಸರಹಳ್ಳಿಯಲ್ಲಿ ಬಿರಿಯಾನಿ ತಿನ್ನಲು ಜನರ ನೂಕುನುಗ್ಗಲು ಕಂಡುಬಂದಿದೆ. ಕೊರೊನಾ ನಿಯಮ ಮರೆತು ಬಿರಿಯಾನಿಗೆ ಜನ ಮುಗಿಬಿದ್ದಿದ್ದಾರೆ. ಈ ಮಧ್ಯೆ, ಕಂಡೂಕಾಣದಂತೆ ಬಾಗಲಗುಂಟೆ ಠಾಣೆ ಪೊಲೀಸರ ಜಾಣಮೌನ ಕಂಡುಬಂದಿದೆ.

ಇದನ್ನೂ ಓದಿ: France: ಫ್ರಾನ್ಸ್​ನಲ್ಲಿ ದಾಖಲೆಯ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ಪತ್ತೆ; 2 ಲಕ್ಷ ಸಮೀಪಿಸಿದ ಕೊವಿಡ್ ಕೇಸ್

ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 566 ಜನರಿಗೆ ಕೊರೊನಾ ದೃಢ; 6 ಮಂದಿ ಸಾವು