ಬೆಂಗಳೂರು: ಇಂದು ಹೊಸ ವರ್ಷದ ಮೊದಲ ದಿನ. ಕ್ಯಾಲೆಂಡರ್ ಬದಲಾಯಿಸುವ ದಿನ. ಕಳೆದು ಹೋದ ದಿನ, ಕಹಿ ನೆನಪು, ನೋವು ಎಲ್ಲವನ್ನೂ ಮರೆತು. ಹೊಸ ಹರುಷದಿಂದ ಹೊಸ ವರ್ಷವನ್ನು ಬರ ಮಾಡಿಕೊಳ್ಳಲಾಗಿದೆ. ಸದ್ಯ ಬೆಂಗಳೂರಿಗರು ಹೊಸ ವರ್ಷದ ಮೊದಲ ದಿನದಂದು ದೇವಸ್ಥಾನಗಳತ್ತ ಮುಖ ಮಾಡಿದ್ದಾರೆ. ಕೈ ಮುಗಿದು ದೇವರಲ್ಲಿ ಬೇಡಿ ಹೊಸ ವರ್ಷ ಸುಖ, ಸಂತೋಷ, ನೆಮ್ಮದಿ ತೆರಳಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಜನರ ಭೇಟಿ ಹೆಚ್ಚಾಗಿದೆ. ಬೆಂಗಳೂರಿನ ಮಲ್ಲೇಶ್ವರಂನ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಬೆಳ್ಳಗ್ಗೆ 6 ಗಂಟೆಯಿಂದಲೇ ವಿಶೇಷ ಪೂಜೆ ಆರಂಭವಾಗಿದೆ. ಗಂಗಾಭಿಷೇಕ, ಪಂಚಾಭಿಷೇಕ, ಪುಷ್ಪಾಭಿಷೇಕ ನೆರವೇರಿದ್ದು ಇದನ್ನು ಕಣ್ತುಂಬಿಕೊಂಡ ಭಕ್ತರು ಪುನೀತರಾಗಿದ್ದಾರೆ. ಶಿರಡಿ ಸಾಯಿ ಬಾಬಾ, ಗಣೇಶ ದೇವಸ್ಥಾನ, ಗವಿ ಗಂಗಾಧರ ದೇವಸ್ಥಾನ, ಬನಶಂಕರಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಅರ್ಚಕರು ತೀರ್ಥ, ಪ್ರಸಾದ ವಿತರಿಸುತ್ತಿದ್ದಾರೆ. ಇಂದು ದೇವರಿಗೆ ವಿಶೇಷ ಅಲಂಕಾರ ಜೊತೆಗೆ ಹೋಮ ಹವನ ಮಾಡಲಾಗುತ್ತಿದೆ.
ಇನ್ನು ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ ರಾತ್ರಿ 9 ಗಂಟೆಯವರೆಗೂ ಭಕ್ತದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಂಜೆ ಕಲ್ಯಾಣೋತ್ಸವ ನೆರವೇರಲಿದ್ದು ಕೊವಿಡ್ ರೂಲ್ಸ್ ಗಳನ್ನ ಪಾಲನೆ ಮಾಡುವಂತೆ ದೇವಸ್ಥಾನ ಆಡಳಿತ ಮಂಡಳಿ ಭಕ್ತದಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Sabarimala Ayyappa Swamy Temple: ಹದಿನೆಂಟು ಮೆಟ್ಟಿಲುಗಳನ್ನು ಏರಿ ಮಲೆಯಲ್ಲಿ ನೆಲೆ ನಿಂತ ಅಯ್ಯಪ್ಪಸ್ವಾಮಿ ಜನ್ಮ ರಹಸ್ಯ
ಬನಶಂಕರಿ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಹರಿದು ಬರುತ್ತಿದೆ. ಬೆಳಗ್ಗೆಯಿಂದಲೇ ಬನಶಂಕರಿ ದೇವಸ್ಥಾನದಲ್ಲಿ ವಿವಿಧ ಪೂಜೆಗಳನ್ನು ಮಾಡಲಾಗುತ್ತಿದೆ. ದೇವಸ್ಥಾನದಲ್ಲಿ ಇಂದು ಬಳೆ ಅಲಂಕಾರ ಜೊತೆಗೆ ಹೋಮ ಹವನ ಮಾಡಲಾಗಿದೆ.
ಬೆಂಗಳೂರಿನ ರಾಜಾಜಿನಗರದಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ಬೆಳಗ್ಗೆ 4 ಗಂಟೆಯಿಂದಲೇ ವಿಶೇಷ ಪೂಜೆಗಳು ಆರಂಭವಾಗಿವೆ. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಇಸ್ಕಾನ್ನ ರಾಧ ಕೃಷ್ಣನಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಇಂದು ಇಸ್ಕಾನ್ ನಲ್ಲಿ 9 ಗಂಟೆಗೆ ಲೋಕಕಲ್ಯಾಣಕ್ಕಾಗಿ ಶ್ರೀ ನರಸಿಂಹಸ್ವಾಮಿ ಹೋಮ ಮಾಡಲಾಗಿದೆ. ನಾಳೆ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಕಳೆದ ವರ್ಷ 70 ರಿಂದ 80 ಸಾವಿರ ಭಕ್ತರು ಆಗಮಿಸಿ ದರ್ಶನ ಪಡೆದಿದ್ದರು.
ಹೊಸ ವರ್ಷ ಹಿನ್ನೆಲೆ ಚಾಮುಂಡಿಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಮೈಸೂರು, ಮಂಡ್ಯ, ಬೆಂಗಳೂರು, ಕೇರಳ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದಾರೆ. ವರ್ಷದ ಮೊದಲ ದಿನ ನಾಡದೇವತೆ ತಾಯಿ ದರ್ಶನ ಪಡೆದರೆ ಒಳಿತು ಅನ್ನೋ ನಂಬಿಕೆ ಇದೆ.
ಹೊಸ ವರ್ಷದಂದು ಮಲೆ ಮಹದೇಶ್ವರಬೆಟ್ಟಕ್ಕೆ ಜನಸಾಗರವೇ ಹರಿದುಬಂದಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದಲ್ಲಿ ಭಕ್ತರು ಮುಂಜಾನೆಯಿಂದಲೇ ಸಾಲಿನಲ್ಲಿ ಬಂದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಭಕ್ತಿ, ಶ್ರದ್ಧೆಯಿಂದ ಮಾದಪ್ಪನಿಗೆ ಕೈಮುಗಿದು ದರ್ಶನ ಪಡೆಯುತ್ತಿದ್ದಾರೆ. ಮಲೆ ಮಹದೇಶ್ವರನ ದರ್ಶನಕ್ಕೆ ಬರುವ ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಗೆ ನಿರ್ಬಂಧ ಹೇರಲಾಗಿದೆ. ಮೇಲುಕೋಟೆ ಧನುಷ್ ಕೋಟೆ, ರಾಯಗೋಪುರ, ಪಂಚಕಲ್ಯಾಣಿ, ತೊಟ್ಟಿಲಮಡು, ಬೆಟ್ಟದ ತಪ್ಪಲು, ಪಾಂಡವಪುರ ತಾಲೂಕಿನ ಕುಂತಿಬೆಟ್ಟ, ಕೆರೆತೊಣ್ಣೂರಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಪಾಂಡವಪುರ ತಹಶೀಲ್ದಾರ್ ಶ್ವೇತಾ ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:11 am, Sun, 1 January 23