ಬೆಂಗಳೂರು, ಜನವರಿ 13: ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ವಿವಿಧೆಡೆ ವಿಧ್ವಂಸಕ ಕೃತ್ಯ ಮತ್ತು ಆತ್ಮಾಹುತಿ ದಾಳಿ ಎಸಗಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆ ಲಷ್ಕರ್ ಎ ತೊಯ್ಬಾ ಎಂಟು ಶಂಕಿತ ಉಗ್ರರ (Suspected terrorists) ವಿರುದ್ಧ ರಾಷ್ಟ್ರೀಯ ತನಿಖಾ ದಳ (NIA) ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದೆ. 8 ಮಂದಿಯಲ್ಲಿ 6 ಮಂದಿಯನ್ನ ಬಂಧಿಸಲಾಗಿದ್ದು, ಇನ್ನೂ ಇಬ್ಬರು ಉಗ್ರರು ತಲೆ ಮರೆಸಿಕೊಂಡಿದ್ದಾರೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಇವರ ವಿರುದ್ಧ ಉಗ್ರವಾದಕ್ಕೆ ಪಿತೂರಿ, ಆತ್ಮಾಹುತಿ ದಾಳಿ ನಡೆಸಲು ಯೋಜನೆ ರೂಪಿಸಿರುವ ಆರೋಪವಿದೆ.
ಈ ಪ್ರಕರಣದ ಪ್ರಮುಖ ಆರೋಪಿ ಕೇರಳ ಮೂಲದ ನಸೀರ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಇಬ್ಬರು ಉಗ್ರರಾದ ಜುನೈದ್ ಅಹ್ಮದ್ ಮತ್ತು ಸಲ್ಮಾನ್ ಖಾನ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಇನ್ನು ಕಳೆದ ಜುಲೈ 19ರಂದು ಬೆಂಗಳೂರಲ್ಲಿ ಬಂಧಿತರಾಗಿದ್ದ ಸೈಯದ್ ಸುಹೇಲ್ ಖಾನ್, ಮೊಹಮ್ಮದ್ ಉಮರ್, ಝಹೀದ್ ತಬ್ರೇಜ್, ಸೈಯದ್ ಮುದಾಸಿರ್ ಮತ್ತು ಫೈಸಲ್ ರಬ್ಬಾನಿ ಹೆಸರುಗಳನ್ನು ಚಾರ್ಜ್ ಶೀಟ್‌ನಲ್ಲಿದೆ. ಇವರೆಲ್ಲರ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ, ಸ್ಫೋಟಕಗಳ ಸಾಗಣೆ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಸ್ಫೋಟ ಕೃತ್ಯ ನಡೆಸಲು ಸಂಚು ರೂಪಿಸಲಾಗುತ್ತಿದೆ ಎಂಬ ಅನುಮಾನದ ಮೇಲೆ ಕಳೆದ ವರ್ಷ ಜು.18ರಂದು ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.19ರಂದು ದಾಳಿ ನಡೆಸಿದ ಪೊಲೀಸರು ಐವರು ಲಷ್ಕರ್ ಉಗ್ರರನ್ನು ಬಂಧಿಸಿದ್ದರು. ಈ ವೇಳೆ ಇವರಿಂದ ಏಳು ನಾಡ ಪಿಸ್ತೂಲುಗಳು, 45 ಜೀವಂತ ಗುಂಡುಗಳು, ವಾಕಿಟಾಕಿಗಳು, ಡ್ರಾಗರ್‌ಗಳು ಮತ್ತು 12 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ: ನಕಲಿ ನೋಟು ತಯಾರಿಸುವ ಜಾಲದ ಮೇಲೆ NIA ಅಧಿಕಾರಿಗಳ ದಾಳಿ; ಆರೋಪಿ ಬಂಧನ
ನಂತರ ಈ ಪ್ರಕರಣವನ್ನು 2023ರ ಅಕ್ಟೋಬರ್‌ನಲ್ಲಿ ಎನ್‌ಐಎ ತನಿಖೆಗೆ ವಹಿಸಿಕೊಂಡಿತ್ತು. ಈ ಉಗ್ರರು ಅನ್ಯ ಕೆಸಿನಲ್ಲಿ ಬಂಧಿತರಾಗಿದ್ದಾಗ 2017ರಲ್ಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಟ್ಟಾಗಿ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದರು. ಬಳಿಕ 7 ಮಂದಿ ಜೈಲಿಂದ ಬಿಡುಗಡೆ ಆಗಿದ್ದರು. ನಂತರ ಜೈಲಿನಲ್ಲೇ ಇದ್ದ ನಸೀರ್ಗೆ ಅನ್ಯ ಕೆಸಿನಲ್ಲಿ ಶಿಕ್ಷೆಯಾದರೇ, ಇಬ್ಬರು ಪರಾರಿಯಾಗಿದ್ದರು. 3 ಜನರು ಕಳೆದ ವರ್ಷ ಜು.18ರಂದು ಮತ್ತೆ ಬಂಧಿತರಾಗಿದ್ದರು.
ಇವರು ಯುವಕರ ಬ್ರೈನ್‌ವಾಶ್ ಮಾಡಿ ಉಗ್ರ ಸಂಘಟನೆಗಳಿಗೆ ಸೇರಿಸುತ್ತಿದ್ದರು. ಅಕ್ರಮವಾಗಿ ಉಗ್ರ ಸಂಘಟನೆಗಳಿಗೆ ಹಣ ರವಾನೆ ಮಾಡುತ್ತಿದ್ದರು ಎಂದು ಪತ್ತೆ ಆಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:24 am, Sat, 13 January 24