ಬೆಂಗಳೂರು: ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ಇಂದು 50ಕ್ಕೂ ಹೆಚ್ಚು ಸ್ವಾಮೀಜಿಗಳ ನೇತೃತ್ವದಲ್ಲಿ ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್ನಲ್ಲಿ ಬೃಹತ್ ಸಮಾವೇಶ ಕೈಗೊಳ್ಳಲಾಗಿದೆ. ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಿಂದ ಸ್ವಾಮೀಜಿಗಳು ಬಂದಿದ್ದಾರೆ. ಸದ್ಯ ರಾಜ್ಯ ರಾಜಕೀಯದಲ್ಲಿ ಎದ್ದಿರುವ ಬಿರುಗಾಳಿಯನ್ನು ನಿಯಂತ್ರಿಸಲು ಸ್ವಾಮೀಜಿಗಳು ಹರ ಸಾಹಸ ಪಡುತ್ತಿದ್ದಾರೆ. ಯಡಿಯೂರಪ್ಪರನ್ನ ಕೆಳಗಿಳಿಸೋ ನಿರ್ಧಾರಕ್ಕೆ ಹಲವು ಮಠಾಧೀಶರು ಕೆಂಡಕಾರಿದ್ದಾರೆ. ಈ ಬಗ್ಗೆ ಇಂದು ನಿಡುಮಾಮಿಡಿ ಸ್ವಾಮೀಜಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಬಿಎಸ್ ಯಡಿಯೂರಪ್ಪ ಸರ್ವ ಸಮುದಾಯಗಳ ಸದ್ಭಾವನೆ ಪಡೆದು ಸಿಎಂ ಆಗಿದ್ದಾರೆ. ಬಿಜೆಪಿ ಸರ್ಕಾರವನ್ನು ಕಷ್ಟಪಟ್ಟು ಕಟ್ಟಿದ್ದಾರೆ. ಆದ್ರೆ ಅವರನ್ನು ಅವಧಿಪೂರ್ವದಲ್ಲಿಯೇ ಕೆಳಗೆ ಇಳಿಸಲಿದ್ದಾರೆ ಎಂಬ ವದಂತಿ ಇದೆ. ಸಿಎಂ ಸ್ಥಾನದಿಂದ ಹೈಕಮಾಂಡ್ ಕೆಳಗಿಳಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಗಳು ತಮ್ಮ ನಿಲುವನ್ನು ತಿಳಿಸಲು ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಬಿಎಸ್‌ವೈ ಕೇವಲ ಲಿಂಗಾಯತ ನಾಯಕರಾಗಲಿಲ್ಲ. ಸರ್ವ ಜನಾಂಗದ ಪ್ರೀತಿ ವಿಶ್ವಾಸ ಗಳಿಸಿದ್ರು. ಸರ್ಕಾರದ ರಚನೆಯ ಸಂದರ್ಭದಲ್ಲಿ ಅಪಕೀರ್ತಿಗೂ ಒಳಗಾದ್ರು. ಅತ್ಯಂತ ದಕ್ಷತೆ, ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ನೆರೆ, ಬರ ಬಂದಾಗ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದರು.
ಬಿಎಸ್‌ವೈಗೆ ಸರಿಸಾಟಿಯಿಲ್ಲದ ನಾಯಕ ಸದ್ಯಕ್ಕೆ ಇಲ್ಲ
ಸಿಎಂ ಬಿಎಸ್ವೈಗೆ ವಯಸ್ಸು ಮೀರಿದೆ ಎಂದು ಬಿಜೆಪಿ ವರಿಷ್ಠರು ಕೆಳಗಿಳಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಬದಲಾವಣೆ ಅವಶ್ಯಕತೆ ಏನಿದೆ? ಬಿಎಸ್‌ವೈಗೆ ಸರಿಸಾಟಿಯಿಲ್ಲದ ನಾಯಕ ಸದ್ಯಕ್ಕೆ ಇಲ್ಲ. ರಾಜ್ಯದಲ್ಲಿ ಕೊರೊನಾ 3ನೇ ಅಲೆಯ ಬರುವ ಸಾಧ್ಯತೆ ಇದೆ ಜೊತೆಗೆ ನೆರೆ ಪರಿಸ್ಥಿತಿ ಇರುವ ಸಮಯದಲ್ಲಿ ಬದಲಾವಣೆ ಏಕೆ? ಹೀಗಾಗಿ ಸಿಎಂ ಆಗಿ ಬಿಎಸ್‌ವೈರನ್ನು ಮುಂದುವರಿಸಬೇಕು. ಜಾತಿ, ಮತ ಎಲ್ಲವನ್ನೂ ಮೀರಿದ ನಾಯಕ ಬಿಎಸ್‌ವೈ. BJP ವರಿಷ್ಠರು ಮಠಾಧೀಶರ ಮಾತಿಗೆ ಗೌರವ ನೀಡಬೇಕು. ಬಿಜೆಪಿ ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನಿಡುಮಾಮಿಡಿ ಸ್ವಾಮೀಜಿಗಳು ಬಿಜೆಪಿ ಹೈಕಮಾಂಡ್ಗೆ ಒತ್ತಾಯಿಸಿದ್ದಾರೆ.
ವಯಸ್ಸಿನ ವಿಚಾರ, ಪಕ್ಷದ ವಿಚಾರ ನಾನು ಒಪ್ಪುತ್ತೇನೆ. ತಮಿಳುನಾಡಿನಲ್ಲಿ 75 ಮೀರಿದ ವ್ಯಕ್ತಿಯನ್ನು ಸಿಎಂ ಎಂದು ಬಿಂಬಿಸಿ ಚುನಾವಣೆ ಎದುರಿಸಿತ್ತು. ಪಕ್ಷ ಒಂದೊಂದು ಕಡೆ ಒಂದೊಂದು ನಿಯಮ ಪಾಲಿಸಬಾರದು. 6 ತಿಂಗಳಾದರೂ ಸಿಎಂ ಬಿಎಸ್‌ವೈರನ್ನು ಮುಂದುವರಿಸಿ. ಮಠಾಧೀಶರ ಮಾತಿಗೆ ಬೆಲೆ ಕೊಡಿ ಎಂದು ನಿಡುಮಾಮಿಡಿ ಸ್ವಾಮೀಜಿಗಳು ಮನವಿ ಮಾಡಿಕೊಂಡಿದ್ದು ನಂತರ ನಿಮ್ಮ ಇಚ್ಛೆಯಂತೆ ನಡೆದುಕೊಳ್ಳಿ. ಹಸ್ತಕ್ಷೇಪ ರಹಿತ ಹಾಗೂ ಆರೋಪ ರಹಿತ ಉತ್ತಮ ಆಡಳಿತ ನೆರವೇರಿಸಿ ಎಂದು ಸೂಚಿಸಿದ್ದಾರೆ.
ಮಠಾಧೀಶರ ಮಾತಿಗೆ ಗೌರವ ಕೊಟ್ಟಾಗ ನಿಮಗೂ ಒಳ್ಳೆಯದಾಗುತ್ತೆ. ವೀರಶೈವ ಲಿಂಗಾಯತ ಅನ್ನೋದು ನೂರಾರು ಸಮುದಾಯ ಹಾಗು ಉಪಜಾತಿಗಳ ಧರ್ಮ ಇದು. ಆ ಕಾರಣಕ್ಕೆ ಈ ಧರ್ಮದವರನ್ನೇ ಸಿಎಂ ಮಾಡಿ ಅನ್ನೋದು 2ನೇ ವಿನಂತಿ. ಸಮರ್ಥರು ಅನೇಕರಿದ್ದಾರೆ. ನಿರಾಣಿ, ಬೊಮ್ಮಾಯಿ, ಸೋಮಣ್ಣ, ಮಾಧುಸ್ವಾಮಿ ಇದ್ದಾರೆ ಎಂದು ನಿಡುಮಾಮಿಡಿ ಸ್ವಾಮೀಜಿ ಸುದ್ದಿಗೋಷ್ಠಿ ವೇಳೆ ಮಾತನಾಡಿದ್ರು.
ಇದನ್ನೂ ಓದಿ: ‘ಬಿಜೆಪಿಯೆಂದರೆ ಬ್ಯುಸಿನೆಸ್ ಜನತಾ ಪಾರ್ಟಿ’: ಮಾಜಿ ಶಾಸಕ ಮಧು ಬಂಗಾರಪ್ಪ ಆರೋಪ