ರೈಲ್ವೆಗೂ ಬಂತು ಮೆಟ್ರೋ ಮಾದರಿ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ: ಬೆಂಗಳೂರಿನ 108 ಸ್ಟೇಷನ್​ಗಳಲ್ಲೂ ಲಭ್ಯ

| Updated By: Ganapathi Sharma

Updated on: Sep 02, 2024 | 7:26 AM

ಡಿಜಿಟಲ್ ಇಂಡಿಯಾ ಅಭಿಯಾನದಡಿ ದೇಶಕ್ಕೆ ದೇಶವೇ ಈಗಾಗಲೇ ಡಿಜಿಟಲ್ ಪಾವತಿ ಮಾಡುತ್ತಿದೆ. ಬೆಂಗಳೂರಿನ ನಮ್ಮ ಮೆಟ್ರೋದಲ್ಲಂತೂ ನಗದು ಪಾವತಿಸಿ ಪ್ರಯಾಣ ಮಾಡುವವರ ಸಂಖ್ಯೆ ತುಂಬಾ ಕಡಿಮೆ ಆಗಿದೆ. ಇದೀಗ ಬೆಂಗಳೂರಿನ ಎಲ್ಲಾ ರೈಲ್ವೆ ಸ್ಟೇಷನ್​ಗಳಲ್ಲೂ ಕ್ಯುಆರ್ ಕೋಡ್ ಮೂಲಕ ಪಾವತಿ ಮಾಡುವ ಆನ್ಲೈನ್ ಪೇಮೆಂಟ್​ಗೆ ಅವಕಾಶ ನೀಡಲಾಗಿದೆ.

ರೈಲ್ವೆಗೂ ಬಂತು ಮೆಟ್ರೋ ಮಾದರಿ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ: ಬೆಂಗಳೂರಿನ 108 ಸ್ಟೇಷನ್​ಗಳಲ್ಲೂ ಲಭ್ಯ
ರೈಲು ನಿಲ್ದಾಣಗಳಲ್ಲಿಯೂ ಬಂತು ಮೆಟ್ರೋ ಮಾದರಿ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ
Follow us on

ಬೆಂಗಳೂರು, ಸೆಪ್ಟೆಂಬರ್ 2: ಬೆಂಗಳೂರು ರೈಲ್ವೆ ವ್ಯಾಪ್ತಿಯ 108 ನಿಲ್ದಾಣಗಳಲ್ಲಿ ಇನ್ನುಮುಂದೆ ಆನ್ಲೈನ್ ಪೇಮೆಂಟ್ ಮೂಲಕ ಹಣ ಪಾವತಿ ಮಾಡಿ ಟಿಕೆಟ್ ಖರೀದಿಸಿ ಪ್ರಯಾಣ ಮಾಡಬಹುದಾಗಿದೆ. ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣ, ಯಶವಂತಪುರ ರೈಲ್ವೆ ಸ್ಟೇಷನ್, ಎಸ್ಎಂವಿಟಿ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಸೇರಿದಂತೆ ಬೆಂಗಳೂರು ವ್ಯಾಪ್ತಿಯ ಎಲ್ಲಾ ರೈಲ್ವೆ ಸ್ಟೇಷನ್​ಗಳಲ್ಲೂ ಕ್ಯೂಆರ್ ಕೋಡ್​​ಗಳನ್ನು ಅಳವಡಿಸಲಾಗಿದೆ.

ಪ್ರಯಾಣಿಕರು ಇನ್ನು ಮುಂದೆ ರೈಲು ಟಿಕೆಟ್‌ಗಾಗಿ ಗಂಟೆಗಟ್ಟಲೆ ಕಾಯಬೇಕಿಲ್ಲ. ಟಿಕೆಟ್ ಕೌಂಟರ್‌ಗಳಲ್ಲಿ ಚಿಲ್ಲರೆ ಸಮಸ್ಯೆಯೂ ಉಧ್ಬವಿಸಲ್ಲ. ಎಲ್ಲದಕ್ಕೂ ಪರಿಹಾರ ಎಂಬಂತೆ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಬೆಂಗಳೂರು ರೈಲ್ವೆ ವ್ಯಾಪ್ತಿಯಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ಬಂದಿದ್ದು, ಹೊಸ ವ್ಯವಸ್ಥೆಗೆ ಪ್ರಯಾಣಿಕರು ಖುಷಿಯಾಗಿದ್ದಾರೆ.

140 ಯುಟಿಎಸ್ (ಅನ್ ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಂ) ಕೌಂಟರ್​​ಗಳಲ್ಲಿ ಹೊಸ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಸಾಮಾನ್ಯ ದರ್ಜೆಯ ಟಿಕೆಟ್ ಮೊತ್ತದ ಪಾವತಿಗೆ ಕ್ಯೂಆರ್ ಕೋಡ್ ಸ್ಕ್ಯಾನ್ ವ್ಯವಸ್ಥೆ ತರಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿ ತ್ರಿನೇತ್ರಾ ತಿಳಿಸಿದ್ದಾರೆ.

ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್​ನಲ್ಲಿ 20 ಕೌಂಟರ್, ಯಶವಂತಪುರದಲ್ಲಿ 10 ಕೌಂಟರ್ ಸೇರಿದಂತೆ ಬೆಂಗಳೂರು ವ್ಯಾಪ್ತಿಯ 108 ರೈಲ್ವೇ ಸ್ಟೇಷನ್​​ಗಳ 140 ಟಿಕೆಟ್ ಕೌಂಟರ್ ಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್​​​ಗಳನ್ನು ಅಳವಡಿಸಲಾಗಿದೆ. ಪ್ರತಿದಿನ 4 ಸಾವಿರ ಪ್ರಯಾಣಿಕರು ಆನ್ಲೈನ್ ಪೇಮೆಂಟ್ ಮೂಲಕ ಟಿಕೆಟ್ ಖರೀದಿ ಮಾಡಿ ಪ್ರಯಾಣ ಮಾಡುತ್ತಿದ್ದಾರೆ.

ಈ ಬಗ್ಗೆ ‌ಪ್ರತಿಕ್ರಿಯಿಸಿದ ಪ್ರಯಾಣಿಕರು, ತುಂಬಾ ಸಲ ಚಿಲ್ಲರೆ ಹಣವಿಲ್ಲದೆ ಟ್ರೈನ್ ಮಿಸ್ ಆಗಿದೆ. ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆಯಿಂದ ಟಿಕೆಟ್ ಕೌಂಟರ್​ಗಳಲ್ಲಿ ಜಗಳ ತಪ್ಪುತ್ತದೆ. ತುಂಬಾ ಒಳ್ಳೆಯ ಕೆಲಸ, ಡಿಜಿಟಲ್ ಆಗಬೇಕಿತ್ತು ಆಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಆರಂಭ: ​ಎರಡೇ ದಿನಕ್ಕೆ ಶತಕ ದಾಟಿದ ವಾಹನಗಳ ಸಂಖ್ಯೆ

ಒಟ್ಟಿನಲ್ಲಿ ರೈಲು ಟಿಕೆಟ್ ಖರೀದಿ ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿ ಜೊತೆಗೆ ಚಿಲ್ಲರೆಗಾಗಿ ಯಾವಾಗಲೂ ಕಿರಿಕ್ ಆಗುತ್ತಿತ್ತು. ಇದೀಗ ಆನ್ಲೈನ್ ಪೇಮೆಂಟ್​ಗೆ ಅವಕಾಶ ನೀಡಿರುವುದರಿಂದ ಅದಕ್ಕೆ ಬ್ರೇಕ್ ಬೀಳಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ