ಬೆಂಗಳೂರು: ಕಳೆದ ವಾರ ಆರಂಭಗೊಂಡ ಬೆಂಗಳೂರು-ಧಾರವಾಡ(Bengaluru-Dharwad Vande Bharat Express) ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಇದೀಗ ವಂದೇ ಭಾರತ್ ರೈಲಿನ ಪ್ರಯೋಜನಗಳನ್ನು ಬೆಳಗಾವಿಯ ಜನರಿಗೆ ವಿಸ್ತರಿಸಲು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಹುಬ್ಬಳ್ಳಿ ಮತ್ತು ಧಾರವಾಡದಿಂದ ಐಷಾರಾಮಿ ಬಸ್‌ಗಳನ್ನು ಪ್ರಾರಂಭಿಸಿದೆ. ರೈಲಿನ ಆಗಮನ ಮತ್ತು ನಿರ್ಗಮನದ ಸಮಯಕ್ಕೆ ತಕ್ಕಂತೆ ಐಷಾರಾಮಿ ಎಸಿ ಬಸ್‌ಗಳನ್ನು ಬಿಡಲಾಗಿದೆ.
ಜೂನ್ 27 ರಂದು, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಪ್ರಧಾನಿ ನರೇಂದ್ರ ಮೋದಿಯವರು ಆನ್ ಲೈನ್ ಮೂಲಕ ಉದ್ಘಾಟಿಸಿದರು. 8 ಬೋಗಿಗಳಿರುವ ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ಪ್ರತಿ ದಿನ ಬೆಂಗಳೂರು-ಧಾರವಾಡ ನಡುವೆ ಸಂಚರಿಸುತ್ತದೆ. ಈಗ, ಧಾರವಾಡದ ಹೊರಗಿನ ಜನರಿಗೆ ಸಹಾಯ ಮಾಡಲು, NWKRTC ಹುಬ್ಬಳ್ಳಿಯಿಂದ ಬೆಳಗಾವಿಗೆ ಮತ್ತು ಬೆಳಗಾವಿಯಿಂದ ಹುಬ್ಬಳ್ಳಿಗೆ ಮಲ್ಟಿ-ಆಕ್ಸಲ್ ವೋಲ್ವೋ ಬಸ್‌ಗಳನ್ನು ರಸ್ತೆಗಿಳಿಸಿದೆ.
ಇದನ್ನೂ ಓದಿ: Vande Bharat Express: ದಾವಣಗೆರೆಯಲ್ಲಿ ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ಕಲ್ಲು
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಳಿಗ್ಗೆ 11:30 ಕ್ಕೆ ಹುಬ್ಬಳ್ಳಿಯನ್ನು ತಲುಪುತ್ತದೆ ಮತ್ತು ವೋಲ್ವೋ ಬಸ್ ಬೆಳಗಾವಿಗೆ ಬಹುತೇಕ ಅದೇ ಸಮಯದಲ್ಲಿ ಹೊರಡುತ್ತದೆ ಮತ್ತು ಎರಡು ಗಂಟೆಗಳೊಳಗೆ ಬಸ್ ನಿಲ್ದಾಣವನ್ನು ತಲುಪುತ್ತದೆ. ಅದೇ ರೀತಿ ವಂದೇ ಭಾರತ್ ರೈಲು ಮಧ್ಯಾಹ್ನ 12:10 ಕ್ಕೆ ತಲುಪಿದ ನಂತರ 12:25 ಕ್ಕೆ ಧಾರವಾಡ ಬಸ್ ನಿಲ್ದಾಣದಿಂದ ರಾಜಹಂಸ ಬಸ್ ಹೊರಡಲಿದೆ.
ಬೆಳಗಾವಿಯಿಂದ ವೋಲ್ವೋ ಬಸ್ ಬೆಳಿಗ್ಗೆ 11 ಗಂಟೆಗೆ ಹೊರಟು ಮಧ್ಯಾಹ್ನ 1:10 ಕ್ಕೆ ಹುಬ್ಬಳ್ಳಿ ತಲುಪುತ್ತದೆ ಮತ್ತು ರಾಜಹಂಸ ಬಸ್ 11:20 ಕ್ಕೆ ಹೊರಟು ಮಧ್ಯಾಹ್ನ 12:50 ಕ್ಕೆ ಧಾರವಾಡ ತಲುಪುತ್ತದೆ.
ಧಾರವಾಡದಿಂದ ಬೆಂಗಳೂರಿಗೆ ನೂತನವಾಗಿ ಪ್ರಾರಂಭಿಸಿದ ವಂದೇ ಭಾರತ್ ರೈಲ್ವೆ ಅನ್ನು ಸಂಪರ್ಕಿಸಲು ಬೆಳಗಾವಿಯಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ನೂತನ ಮಲ್ಟಿ ಆಕ್ಸೆಲ್ ಸಾರಿಗೆ ಸೇವೆಯನ್ನು ಪ್ರಾರಂಭಿಸಲಾಗಿದೆ. ಹಾಗೂ ಬೆಳಗಾವಿಯಿಂದ ಧಾರವಾಡ ರೈಲ್ವೆ ನಿಲ್ದಾಣಕ್ಕೆ ನೂತನ ರಾಜಹಂಸ ಸಾರಿಗೆ ಸೇವೆಯನ್ನು ಪ್ರಾರಂಭಿಸಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ