ಒಮಿಕ್ರಾನ್ ಪತ್ತೆ ಹಿನ್ನೆಲೆ ಹೊಸ ಮಾರ್ಗಸೂಚಿ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಿರ್ಧಾರ; ಆರೋಗ್ಯ ಸಚಿವ ಡಾ. ಸುಧಾಕರ್

| Updated By: ಸುಷ್ಮಾ ಚಕ್ರೆ

Updated on: Dec 03, 2021 | 2:43 PM

Omicron in Karnataka: ದಕ್ಷಿಣ ಆಫ್ರಿಕಾದಿಂದ ಬಂದ 10 ಪ್ರಯಾಣಿಕರು ನಾಪತ್ತೆಯಾಗಿರುವ ಮಾಹಿತಿ ಇದೆ. ಆದಷ್ಟು ಬೇಗ ಆ ಪ್ರಯಾಣಿಕರನ್ನು ಪತ್ತೆ ಹಚ್ಚಲಿದ್ದೇವೆ. ಹೊಸ ಕೊರೊನಾ ಮಾರ್ಗಸೂಚಿ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ಒಮಿಕ್ರಾನ್ ಪತ್ತೆ ಹಿನ್ನೆಲೆ ಹೊಸ ಮಾರ್ಗಸೂಚಿ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಿರ್ಧಾರ; ಆರೋಗ್ಯ ಸಚಿವ ಡಾ. ಸುಧಾಕರ್
ಡಾ. ಕೆ. ಸುಧಾಕರ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ದಕ್ಷಿಣ ಆಫ್ರಿಕಾದಿಂದ ಕರ್ನಾಟಕಕ್ಕೆ ಬಂದ ಕೆಲವರು ನಾಪತ್ತೆಯಾಗಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ದಕ್ಷಿಣ ಆಫ್ರಿಕಾದಿಂದ ಬಂದ 10 ಪ್ರಯಾಣಿಕರು ನಾಪತ್ತೆಯಾಗಿರುವ ಮಾಹಿತಿ ಇದೆ. ಆದಷ್ಟು ಬೇಗ ಆ ಪ್ರಯಾಣಿಕರನ್ನು ಪತ್ತೆ ಹಚ್ಚಲಿದ್ದೇವೆ. ವಿದೇಶಗಳಿಂದ ಬಂದ ಯಾರೂ ಮೊಬೈಲ್ ಸ್ವಿಚ್ ಆಫ್ ಮಾಡಬಾರದು. ಇದರಿಂದ ಬೇರೆಯವರಿಗೂ ತೊಂದರೆ ಆಗುತ್ತದೆ. ನಾಪತ್ತೆಯಾದವರನ್ನು ಪೊಲೀಸರು ಪತ್ತೆಹಚ್ಚುತ್ತಾರೆ ಎಂದು ಹೇಳಿದ್ದಾರೆ. ಕರ್ನಾಟಕಕ್ಕೆ ಈಗಾಗಲೇ ಕೊವಿಡ್ ಮೊದಲ ಹಾಗೂ ಎರಡನೇ ಅಲೆ ಅಪ್ಪಳಿಸಿದಾಗ ಏನೆಲ್ಲ ಆಗಿತ್ತು ಎಂಬ ಅನುಭವ ಇದೆ. ಸೋಂಕಿತರನ್ನು ಯಾವ ರೀತಿ ಟ್ರೇಸ್ ಮಾಡಬೇಕು ಎಂಬುದು ಗೊತ್ತಿದೆ. ಹೊಸ ಕೊರೊನಾ ಮಾರ್ಗಸೂಚಿ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ನಿರ್ದೇಶಕರ ಜೊತೆ ಸಂವಾದ ನಡೆಸಲಾಗಿದ್ದು, ಸಭೆಯಲ್ಲಿ ಕೆಲ ಸಲಹೆ, ಸೂಚನೆಗಳನ್ನು ನೀಡಲಾಗಿದೆ. ಒಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದ ಐವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಐವರ ಸ್ಯಾಂಪಲ್ಸ್ ಜಿನೋಮಿಕ್ ಸೀಕ್ವೆನ್ಸ್‌ಗೆ ಕಳಿಸಲಾಗಿದೆ. ಪ್ರೊಫೆಸರ್‌ಗಳು, ಹೆಚ್‌ಒಡಿಗಳು, ಹಿರಿಯ ವೈದ್ಯರಿಗೆ ಕೊರೊನಾ ದೃಢಪಟ್ಟಿದ್ದು, ಎಲ್ಲರೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಸೋಂಕಿತರೆಲ್ಲರಿಗೂ ಪರಿಣಾಮಕಾರಿ ಆಗಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಆಸ್ಪತ್ರೆಗಳಲ್ಲಿ ದಾದಿಯರ ಸಂಖ್ಯೆ ಹೆಚ್ಚಿಸುವ ಸಂಬಂಧ ಚರ್ಚಿಸಲಾಗಿದೆ. ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ಅಗತ್ಯ. ಮೆಡಿಕಲ್ ಕಾಲೇಜಿನ 18 ಸಾವಿರ ವಿದ್ಯಾರ್ಥಿಗಳಿಗೆ ರಾಜೀವ್ ಗಾಂಧಿ ವೈದ್ಯಕೀಯ ವಿವಿಯಲ್ಲಿ ತರಬೇತಿ ನೀಡಲಾಗಿದೆ ಎಂದು ಸಚಿವ ಡಾ. ಸುಧಾಕರ್ ಮಾಹಿತಿ ನೀಡಿದ್ದಾರೆ.

ಗೃಹ ವೈದ್ಯರಿಗೆ ಕೊವಿಡ್ ರಿಸ್ಕ್ ಅನುದಾನ ಬಿಡುಗಡೆ ಮಾಡಲಾಗುವುದು. ಒಂದೆರಡು ದಿನದಲ್ಲಿ 73 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು. ಒಮಿಕ್ರಾನ್ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ 1ರಿಂದ 2 ತಿಂಗಳಲ್ಲಿ ಏನು ಮಾಡಬೇಕೆಂದು ಚರ್ಚೆ ನಡೆಸಲಾಗಿದೆ. ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿದ್ದೇವೆ. ಒಮಿಕ್ರಾನ್ ತಡೆಯ ಬಗ್ಗೆ ಸಾಕಷ್ಟು ಸಲಹೆಗಳು ಬಂದಿವೆ. ಹಿರಿಯ ವೈದ್ಯರ ಜೊತೆ ಪ್ಯಾರಾ ಮೆಡಿಕಲ್, ನರ್ಸಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸೂಚಿಸಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಗೃಹ ವೈದ್ಯರಿಗೆ ಕೊವಿಡ್ ರಿಸ್ಕ್ ಅನುದಾನವಾಗಿ 55 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. 73 ಕೋಟಿ ರೂಪಾಯಿ ಹಣ ಬೇಕಿತ್ತು. ಆದರೆ, ಸದ್ಯಕ್ಕೆ 55 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ICUಗಳಲ್ಲಿ ಚಿಕಿತ್ಸೆ ನೀಡುವುದಕ್ಕೆ ನರ್ಸಿಂಗ್ ಸೇವೆ ಮುಖ್ಯ. ಹೀಗಾಗಿ, 18 ಸಾವಿರ MSC ನರ್ಸಿಂಗ್ ಸ್ಟಾಫ್‌ಗೆ ತರಬೇತಿ ನೀಡಲಾಗುತ್ತದೆ. ಉಪಕರಣ ಖರೀದಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಡಾ. ಸುಧಾಕರ್ ತಿಳಿಸಿದ್ದಾರೆ.

ಇದನ್ನೂ ಓದಿ: Omicron in Karnataka: ದೇಶದಲ್ಲಿ ನಾವು ವೇಗವಾಗಿ ಒಮಿಕ್ರಾನ್ ಸೋಂಕನ್ನು ಪತ್ತೆ ಹಚ್ಚಿದ್ದೇವೆ; ಆರೋಗ್ಯ ಸಚಿವ ಸುಧಾಕರ್

ಕರ್ನಾಟಕದಲ್ಲಿ ಒಮಿಕ್ರಾನ್ ಸೋಂಕು ಪತ್ತೆ: ಗೃಹಕಚೇರಿಯಲ್ಲಿ ತುರ್ತು ಸಭೆ ಕರೆದ ಸಿಎಂ ಬಸವರಾಜ ಬೊಮ್ಮಾಯಿ

Published On - 2:43 pm, Fri, 3 December 21