ಓಣಂ ಹಬ್ಬಕ್ಕೆ ಕೇರಳಕ್ಕೆ ಹೋಗಿ ಬರೋರಿಗೆ ಶುಭ ಸುದ್ದಿ: ಕೆಎಸ್​ಆರ್​ಟಿಸಿ ಹೆಚ್ಚುವರಿ ಬಸ್, ವಿವರ ಇಲ್ಲಿದೆ

ಓಣಂ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಿಂದ ಕೇರಳದ ವಿವಿಧ ನಗರಗಳಿಗೆ ಕೆಎಸ್‌ಆರ್‌ಟಿಸಿ 90 ಹೆಚ್ಚುವರಿ ಬಸ್ ಸೇವೆಗಳನ್ನು ಒದಗಿಸುತ್ತಿದೆ. ಸೆಪ್ಟೆಂಬರ್ 2 ರಿಂದ 4 ರವರೆಗೆ ಈ ವಿಶೇಷ ಬಸ್‌ಗಳು ಸಂಚರಿಸಲಿವೆ. ಮೈಸೂರು ರಸ್ತೆ ಮತ್ತು ಶಾಂತಿನಗರ ಬಸ್ ನಿಲ್ದಾಣಗಳಿಂದ ಬಸ್‌ಗಳು ಹೊರಡಲಿವೆ. ಹಬ್ಬದ ನಂತರ ಹಿಂತಿರುಗುವವರಿಗೂ ಹೆಚ್ಚುವರಿ ಬಸ್ ಸೇವೆ ಲಭ್ಯವಿರುತ್ತದೆ.

ಓಣಂ ಹಬ್ಬಕ್ಕೆ ಕೇರಳಕ್ಕೆ ಹೋಗಿ ಬರೋರಿಗೆ ಶುಭ ಸುದ್ದಿ: ಕೆಎಸ್​ಆರ್​ಟಿಸಿ ಹೆಚ್ಚುವರಿ ಬಸ್, ವಿವರ ಇಲ್ಲಿದೆ
ಕೆಎಸ್​ಆರ್​ಟಿಸಿ ಬಸ್ಸುಗಳು (ಸಾಂದರ್ಭಿಕ ಚಿತ್ರ)

Updated on: Sep 01, 2025 | 7:49 AM

ಬೆಂಗಳೂರು, ಸೆಪ್ಟೆಂಬರ್ 1: ಬೆಂಗಳೂರು ಮತ್ತು ಕೇರಳದ (Kerala) ವಿವಿಧ ಊರುಗಳ ನಡುವೆ ಆಗಾಗ್ಗೆ ಪ್ರಯಾಣಿಸುವವರಿಗೆ ಓಣಂ ಹಬ್ಬದ (Onam Festival) ಸಂದರ್ಭದಲ್ಲಿ ಕೆಎಸ್​ಆರ್​ಟಿಸಿ ಶುಭ ಸುದ್ದಿ ನೀಡಿದೆ. ಓಣಂ ಸಂದರ್ಭದಲ್ಲಿ ಕೇರಳದ ವಿವಿಧ ಜಿಲ್ಲೆಗಳಿಗೆ 90 ಹೆಚ್ಚುವರಿ ಬಸ್ ಸೇವೆಗಳನ್ನು ಒದಗಿಸಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಘೋಷಿಸಿದೆ. ಈ ವಿಶೇಷ ಬಸ್‌ಗಳು ಸೆಪ್ಟೆಂಬರ್ 2 ರಿಂದ 4 ರವರೆಗೆ ಸಂಚರಿಸಲಿವೆ. ಹಬ್ಬಕ್ಕಾಗಿ ಊರುಗಳಿಗೆ ಹೋಗುವ ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಈ ಕ್ರಮ ಕೈಗೊಂಡಿರುವುದಾಗಿ ಕೆಎಸ್​ಆರ್​ಟಿಸಿ ತಿಳಿಸಿದೆ. ಸೆಪ್ಟೆಂಬರ್ 5 ರಂದು ಓಣಂ ಆಚರಿಸಲಾಗುತ್ತದೆ.

ಕೆಎಸ್‌ಆರ್‌ಟಿಸಿಯ ನಿಯಮಿತ ವೇಳಾಪಟ್ಟಿಗೆ ಪೂರಕವಾಗಿ ಮತ್ತು ಹಬ್ಬದ ಸಮಯದಲ್ಲಿ ಪ್ರಯಾಣಿಕರಿಗೆ ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ವಿಶೇಷ ಬಸ್​​ಗಳ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಬಸ್‌ಗಳು ಪ್ರಾಥಮಿಕವಾಗಿ ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರ ಬಸ್ ನಿಲ್ದಾಣ ಸೇರಿದಂತೆ ಬೆಂಗಳೂರಿನ ಪ್ರಮುಖ ಟರ್ಮಿನಲ್‌ಗಳಿಂದ ಹೊರಡಲಿವೆ ಎಂದು ಕೆಎಸ್​ಆರ್​​ಟಿಸಿ ಮೂಲಗಳನ್ನು ಉಲ್ಲೇಖಿಸಿ ‘ದಿ ಹಿಂದೂ’ ವರದಿ ಮಾಡಿದೆ .

ಬೆಂಗಳೂರಿನಿಂದ ಕೇರಳದ ಎಲ್ಲಿಗೆಲ್ಲ ಕೆಎಸ್​ಆರ್​ಟಿಸಿ ಬಸ್?

ಕೆಎಸ್​ಆರ್​ಟಿಸಿ ಹೆಚ್ಚುವರಿ ವಿಶೇಷ ಬಸ್‌ಗಳು ಬೆಂಗಳೂರಿನಿಂದ ಕೇರಳದ ಕಣ್ಣೂರು, ಕೋಝಿಕ್ಕೋಡ್, ಎರ್ನಾಕುಲಂ, ಪಾಲಕ್ಕಾಡ್, ತ್ರಿಶೂರ್, ಕೊಟ್ಟಾಯಂ ಮತ್ತು ತಿರುವನಂತಪುರಂನಂತಹ ಪ್ರಮುಖ ಸ್ಥಳಗಳಿಗೆ ಸಂಚರಿಸಲಿವೆ.

ಓಣಂ ಹಬ್ಬ ಮುಗಿಸಿ ಬೆಂಗಳೂರಿಗೆ ಬರುವವರಿಗೂ ಬಸ್ ವ್ಯವಸ್ಥೆ

ಓಣಂ ಪೂರ್ವ ಹೆಚ್ಚುವರಿ ಬಸ್ ಸೇವೆಗಳ ಜೊತೆಗೆ, ಹಬ್ಬದ ನಂತರ ಹಿಂದಿರುಗುವವರಿಗಾಗಿಯೂ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ ಸೇವೆ ಒದಗಿಸಲಿದೆ. ಸೆಪ್ಟೆಂಬರ್ 7 ರಂದು, ಕೇರಳದ ಅನೇಕ ನಗರಗಳಿಂದ ಬೆಂಗಳೂರಿಗೆ ಹಿಂತಿರುಗಲು ವಿಶೇಷ ಬಸ್‌ಗಳು ಲಭ್ಯವಿರಲಿವೆ.

ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ಎರಡು ಹೆದ್ದಾರಿ ಟೋಲ್​ಗಳಲ್ಲಿ ದರ ಏರಿಕೆ; ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿ

ದಕ್ಷಿಣ ಭಾರತದ ಅತ್ಯಂತ ಮಹತ್ವದ ಸಾಂಸ್ಕೃತಿಕ ಹಬ್ಬಗಳಲ್ಲಿ ಒಂದಾದ ಈ ಓಣಂ ಸಂದರ್ಭದಲ್ಲಿ ಪ್ರಯಾಣಿಕರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ಈ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಈ ಅವಧಿಯಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಬೇಡಿಕೆಯಿರುವುದರಿಂದ ಜನ ಮುಂಚಿತವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸುವುದು ಉತ್ತಮ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ