ರಾಜಧಾನಿ ಬೆಂಗಳೂರಿನಲ್ಲಿ ಉದ್ಯೋಗ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಉದ್ಯೋಗದ ಹುಡುಕಾಟದಲ್ಲಿರುವ ಯುವಕರನ್ನು ಟಾರ್ಗೆಟ್ ಮಾಡಿ ಮೋಸ ಮಾಡಲಾಗುತ್ತಿದೆ. ಆನ್‌ಲೈನ್ ಪಾರ್ಟ್ ಟೈಮ್ ಜಾಬ್ ಕೊಡಿಸುವುದಾಗಿ ಹೇಳಿ ಮೋಸ ಮಾಡಲಾಗಿರುವ ನಾಲ್ಕು ಪ್ರಕರಣಗಳು ಒಂದೇ ದಿನ ದಾಖಲಾಗಿವೆ. ಏಪ್ರಿಲ್ 14ರ ಶುಕ್ರವಾರ ನಾಲ್ವರು ನಗರದ ಸೈಬರ್ ಕ್ರೈಂ ಪೊಲೀಸರಿಗೆ ಆನ್‌ಲೈನ್‌ನಲ್ಲಿ ಪಾರ್ಟ್ ಟೈಮ್ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಆಮಿಷ ಒಡ್ಡಿ ಹಣ ಪಡೆದು ವಂಚಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಇಂತಹ ಸೈಬರ್ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ವಿದ್ಯಾವಂತರೇ ಹೆಚ್ಚು ಬಲೆಗೆ ಬೀಳುತ್ತಿದ್ದಾರೆ ಎಂದು ಪೊಲೀಸರು ಬೇಸರ ವ್ಯಕ್ತಪಡಿಸಿದರು.
ಟೆಲಿಗ್ರಾಂ ಖಾತೆಯಿಂದ ಪಾರ್ಟ್ ಟೈಮ್ ಜಾಬ್ ಬಗ್ಗೆ ಒಂದು ಸಂದೇಶ ಬಂದಿದ್ದು, ಅದರಂತೆ ದೂರುದಾರರು ಮಾಹಿತಿ ವಿಚಾರಿಸಿದ್ದಾರೆ. ಇದಕ್ಕೆ ಆರೋಪಿ ಆನ್‌ಲೈನ್ ಮೂವಿ ಟಿಕೆಟ್ ರೇಟಿಂಗ್ ಉದ್ಯೋಗ ಎಂದು ನಂಬಿಸಿ, ಆ್ಯಪ್‌ವೊಂದನ್ನು ಇನ್‌ಸ್ಟಾಲ್ ಮಾಡಿ ಅದರಲ್ಲಿ ಖಾತೆ ತೆರೆದು ಅದರಲ್ಲಿ ಪ್ರಸಾರವಾಗುವ ವಿಡಿಯೋ ನೋಡಿ ರೇಟಿಂಗ್ ಹಾಕಿ ಕಮೀಷನ್ ಹಣ ಪಡೆದುಕೊಳ್ಳುವುದಾಗಿ ತಿಳಿಸಿದ್ದ. ಅದರಂತೆ ಮಾಡಿದಾಗ ದೂರುದಾರರಿಗೆ 1 ಸಾವಿರ ರೂ. ಕಮಿಷನ್ ನೀಡಿದ್ದಾರೆ. ನಂತರ ಜಾಬ್ ಮುಂದುವರಿಸಲು 10,500 ರೂ. ಪಾವತಿಸುವಂತೆ ಟೆಲಿಗ್ರಾಂ ಮೂಲಕ ಸಂದೇಶ ಕಳುಹಿಸಿದ್ದು, ಅದರಂತೆ ದೂರುದಾರರು ಪಾವತಿಸಿದ್ದಾರೆ. ನಂತರ ಅದೇ ದಿನ ಹೆಚ್ಚಿನ ಕಮಿಷನ್ ಪಡೆಯಬೇಕಾದರೆ, 29,936ರೂ. ಪಾವತಿಸುವಂತೆ ತಿಳಿಸಿದ್ದಾರೆ. ಅದನ್ನೂ ನಂಬಿ ಖಾತೆಗೆ ಜಮಾ ಮಾಡಿದ್ದಾರೆ. ಹೀಗೆ ದೂರುದಾರರು ಹಂತ ಹಂತದಲ್ಲಿ ಒಟ್ಟು 1,14,901 ರೂ. ಪಾವತಿಸಿ ವಂಚನೆಗೊಳಗಾಗಿದ್ದಾರೆ.
ಇದನ್ನೂ ಓದಿ: Indore: ಕೆಲಸದ ಅವಧಿ ಮುಗಿದಿದೆ ದಯವಿಟ್ಟು ಮನೆಗೆ ಹೋಗಿ: ಉದ್ಯೋಗಿಗಳಿಗೆ ಸಂದೇಶ ನೀಡುತ್ತೆ ಈ ಕಂಪನಿಯ ಲ್ಯಾಪ್ ಟಾಪ್
ಇನ್ನು ಮತ್ತೊಂದು ಪ್ರಕರಣದಲ್ಲಿ ಇದೇ ರೀತಿ ವಂಚಕನೊಬ್ಬ ಸಾಮಾಜಿಕ ಜಾಲತಾಣದ ಮೂಲಕ ಉದ್ಯೋಗ ಅಕಾಂಕ್ಷಿಗೆ ಹೆಚ್ಚಿನ ಸಂಬಳ ನೀಡುವುದಾಗಿ ನಂಬಿಸಿ ಆತನಿಂದ ಯೂಟ್ಯೂಬ್ ವಿಡಿಯೋಗಳಿಗೆ ಲೈಕ್, ಸಬ್ಸ್ಕ್ರೈಬ್ ಮಾಡಿಸುವುದು ಸೇರಿದಂತೆ ಆನ್‌ಲೈನ್ ಟಾಸ್ಕ್ ನೀಡಿದ್ದಾನೆ. ಮೊದಲಿಗೆ ಒಳ್ಳೆಯ ಲಾಭ ನೀಡಿ ಆಮಿಷ ಬರುವಂತೆ ಮಾಡಿ ಒಮ್ಮೆ ಅವರು ದೊಡ್ಡ ಹೂಡಿಕೆಯನ್ನು ಮಾಡಿದ ಮೇಲೆ ಮೋಸ ಮಾಡಲಾಗಿದೆ. ಈ ರೀತಿ 34 ವರ್ಷದ ಎಂಜಿನಿಯರ್ ಪವನ್ ಕುಮಾರ್ ಜಲವಾಡಿ ಎಂಬಾತ 12,35,000 ಹಣವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಶುಕ್ರವಾರ ವೈಟ್‌ಫೀಲ್ಡ್ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ದೂರದಾರನಿಗೆ ಟೆಲಿಗ್ರಾಮ್ ಲಿಂಕ್ ಕಳುಹಿಸಿ ಹಣವನ್ನು ತೊಡಗಿಸಿ ಆನ್‌ಲೈನ್ ಮೂಲಕ ದ್ವಿಗುಣ ಮಾಡಲು ಟಾಸ್ಕ್ ಕಂಪ್ಲೀಟ್ ಮಾಡಲು ತಿಳಿಸಿದ್ದಾರೆ. ಪ್ರತಿ ಟಾಸ್ಕ್‌ಗೆ 70ರೂ. ಹಣವನ್ನು ಹಾಕುವುದಾಗಿ ತಿಳಿಸಿದ್ದಾರೆ. ಈ ರೀತಿ 2-3 ದಿನ ಆರೋಪಿಯು ಇನ್ನೊಂದು ಟಾಸ್ಕ್ ಅಂತ 2 ಸಾವಿರ ರೂ. ಪಾವತಿಸಿದರೆ ಶೇ. 20 ಲಾಭ ಕೊಡುತ್ತೇವೆ, ದೊಡ್ಡ ಮೊತ್ತ ಕಳುಹಿಸಿದರೆ ಇನ್ನೂ ಹೆಚ್ಚಿನ ಲಾಭ ಕೊಡುತ್ತೇವೆ ಎಂದು ನಂಬಿಸಿ 2400 ರೂ. ಹಣವನ್ನು ದೂರುದಾರರ ಖಾತೆಗೆ ವರ್ಗಾಯಿಸಿದ್ದಾರೆ. ಇದನ್ನು ನಂಬಿದ ದೂರುದಾರರು ಹಂತಹಂತವಾಗಿ 5,52,800 ರೂ. ಪಾವತಿಸಿದ್ದಾರೆ. ಈ ರೀತಿ ಪಾರ್ಟ್ ಟೈಮ್ ಜಾಬ್ ಹೆಸರಲ್ಲಿ ಆನ್‌ಲೈನ್ ಟಾಸ್ಕ್ ನೀಡಿ ಮೋಸ ಮಾಡಲಾಗುತ್ತಿದೆ. ಒಂದೇ ದಿನ ನಾಲ್ಕು ಪ್ರಕರಣಗಳು ದಾಖಲಾಗಿದ್ದು ಪೊಲೀಸರು ತನಿಖೆಗೆ ಇಳಿದಿದ್ದಾರೆ.
ರಾಜ್ಯದ ಮತ್ತಷ್ಟು ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:32 am, Mon, 17 April 23