ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿ(Karnataka Assembly Elections 2023) ಬಿಜೆಪಿ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದ ಸಚಿವ ವಿ ಸೋಮಣ್ಣ(V Somanna) ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬ ಚರ್ಚೆ ಶುರುವಾಗಿತ್ತು. ಬಿಎಸ್ ಯಡಿಯೂರಪ್ಪ ಕೂಡ ಸೋಮಣ್ಣನವರ ಅಸಮಾಧಾನ ಶಮನಕ್ಕೆ ಮುಂದಾಗಿದ್ದರು. ಇದರ ನಡುವೆ ಸೋಮಣ್ಣ ದೆಹಲಿಗೆ ತೆರಳಿ ಕೇಂದ್ರ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿ ಅಸಮಾಧಾನ ಹೊರ ಹಾಕಿದ್ದರು. ಈ ಸಂಬಂಧ ಇಂದು ಮಾತನಾಡಿದ ಸೋಮಣ್ಣ ನಮ್ಮ ನಾಯಕರು ಗೊಂದಲ ನಿವಾರಣೆ ಮಾಡಿದ್ದಾರೆ. ಚುನಾವಣೆ ಹಿನ್ನೆಲೆ ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರು. ನಗರದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಇಲಾಖೆಗಳ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಸಚಿವ ವಿ. ಸೋಮಣ್ಣ ಉದ್ಘಾಟನೆ ಮಾಡಿದರು. ಈ ವೇಳೆ ಮಾತನಾಡಿದ ಅವರು ಅಸಮಾಧಾನದ ವಿಚಾರಕ್ಕೆ ತೆರೆ ಎಳೆದಿದ್ದಾರೆ. ಎಲ್ಲವೂ ಸುಖಾಂತ್ಯವಾಗಿದೆ ಎಂದಿದ್ದಾರೆ.
ನಮಗೆ ಏನು ಏನು ಆಗಬೇಕೋ ಅದೆಲ್ಲವೂ ಆಗಿದೆ. ಚುನಾವಣೆ ಇರುವ ಕಾರಣ ಗೊಂದಲ ನಿವಾರಣೆ ಮಾಡಿದ್ದಾರೆ. ಎಲ್ಲವೂ ಸುಖಾಂತ್ಯವಾಗಿದೆ. ವಿಜಯೇಂದ್ರ ಮಾತಾಡಿರೋದು ನನಗೆ ಸಂಬಂಧ ಇಲ್ಲದೇ ಇರೋದು. ಯಡಿಯೂರಪ್ಪ ಈ ರಾಜ್ಯದ ನಾಯಕರು. ಅನೇಕ ಗಣ್ಯರ ಸಾಲಿನಲ್ಲಿ ಯಡಿಯೂರಪ್ಪ ಕೂಡ ಒಬ್ಬರು. ನಾನು ಕೂಡ ಅವರ ಗರಡಿಯಲ್ಲಿ ಬೆಳೆದಿದ್ದೇನೆ. ನಾನು ಏನು ಮಾಡಬೇಕೋ ಅದರ ಕಡೆ ಅಷ್ಟೇ ಗಮನ ಕೊಟ್ಟಿದ್ದೇನೆ. ವಿಜಯೇಂದ್ರ ಕೂಡ ಏನೋ ಮಾಡಬೇಕೋ ಅದರ ಕಡೆ ಗಮನ ಕೊಡಲಿ. ನಾನು ಅವರಿಗೆ ಏನೂ ಹೇಳೋಕೆ ತಯಾರಿಲ್ಲ. ಯಡಿಯೂರಪ್ಪ ನಿಮಗೊಬ್ಬರಿಗೆ ನಾಯಕರಲ್ಲ. ನಮಗೂ ನಾಯಕರು, ಅವರು ನನಗೆ ತಂದೆ ಸಮಾನರು. ವಿಜಯೇಂದ್ರ ಯುವಕರು, ಅವರು ಬೆಳೆಯೋದಕ್ಕೆ ಅವಕಾಶ ಇದೆ. ಅದರ ಕಡೆ ಅವರ ಗಮನ ಕೊಟ್ಟರೆ ಅವರು ಬೆಳೆಯಬಹುದು. ಯಡಿಯೂರಪ್ಪಗೆ ಸರಿಸಟಿ ಯಡಿಯೂರಪ್ಪನೇ. ಸೋಮಣ್ಣಗೆ ಸರಿಸಾಟಿ ಸೋಮಣ್ಣನೇ ಎಂದು ಬೆಂಗಳೂರಿನಲ್ಲಿ ವಸತಿ ಇಲಾಖೆ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ನಾನು ನಿಂತ ನೀರಲ್ಲ, ಹರಿಯುವ ನೀರು: ಕಾಂಗ್ರೆಸ್ ಸೇರುವ ಸುಳಿವು ನೀಡಿದ ವಿ ಸೋಮಣ್ಣ
ಯಡಿಯೂರಪ್ಪ ಯಡಿಯೂರಪ್ಪಾನೇ, ಅವರ ಬಗ್ಗೆ ಮಾತಾಡಿದರೆ ನಮ್ಮ ಮುಖವನ್ನು ಮೇಲೆ ಮಾಡಿ ನಾವು ಉಗಿದಂತೆ. ಅದು ನಮಗೆ ಬಂದು ಬೀಳಲಿದೆ. ವಿಜಯೇಂದ್ರನಿಗೆ ನಾನು ಏನೂ ಹೇಳಲು ತಯಾರಿಲ್ಲ. ಪದೇ ಪದೇ ನಮ್ಮನ್ನು ನಾವೇ ಹೇಳಿಕೊಳ್ಳೋದು ಬೇಡ. ತಂದೆ ತಾಯಿ ಗುರುಗಳು ಕೊಟ್ಟ ಸಂಸ್ಕಾರ ಮೀರಿ ನಡೆಯಲು ನನ್ನಿಂದ ಆಗಲ್ಲ, ನನಗೆ ಬೇರೆ ಕೆಲಸಗಳಿವೆ. ನಾನು ಸ್ಟಾಟರ್ಜಿ ಮಾಸ್ಟರ್. ನಾನು ಏನು ಕೆಲಸ ತೆಗೆದುಕೊಳ್ಳುತ್ತೇನೋ ಹಿಂದೆ ತಿರುಗಿ ನೋಡಿದವನಲ್ಲ. ಒಂದು ಪಕ್ಷದಲ್ಲಿದ್ದಾಗ ಅಲ್ಲಿ ಮುಜುಗರ ತರುವ ಕೆಲಸ ಮಾಡುವವನಲ್ಲ. ನಾನು ಸ್ವತಂತ್ರ, ಕಾಂಗ್ರೆಸ್, ದಳ, ಬಿಜೆಪಿಯೂ ಇದ್ದೇನೆ. ಇಷ್ಟಕ್ಕೇ ತಿಲಾಂಜಲಿ ಹಾಕಿ ಒಳ್ಳೆಯ ಕೆಲಸ ಮಾಡೋಣ. ಯಡಿಯೂರಪ್ಪ ಯಾವಾಗ ಕರೆದರೂ ಹೋಗುತ್ತೇನೆ, ಏನು ಹೇಳಬೇಕೋ ಹೇಳುತ್ತೇನೆ. ನನಗೆ ಮಗ ಅಂತಾ ವ್ಯಾಮೋಹ ಇಲ್ಲ. ನನ್ನ ಅದೃಷ್ಟ ನನ್ನದು, ಅವನ ಅದೃಷ್ಟ ಅವನದ್ದು. ಯಡಿಯೂರಪ್ಪನವರ ಹೋರಾಟ ನಮಗೆಲ್ಲರಿಗೂ ಸಹಕಾರಿಯಾಗಲಿ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ