ಬರೋಬ್ಬರಿ 3 ಕೋಟಿ ವೆಚ್ಚದಲ್ಲಿ ಪಾಲಿಕೆ ವ್ಯಾಪ್ತಿಯ ಶಾಲೆ ಬಿಟ್ಟ ಮಕ್ಕಳ ಸರ್ವೇ, ಬಿಬಿಎಂಪಿ ವಿರುದ್ಧ ಆಕ್ರೋಶ

| Updated By: ಆಯೇಷಾ ಬಾನು

Updated on: Jul 23, 2024 | 7:32 AM

ಬಿಬಿಎಂಪಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸದ ಪಾಲಿಕೆ, ಇದೀಗ ಕೋಟಿ ಕೋಟಿ ವೆಚ್ಚದಲ್ಲಿ ಶಾಲೆ ಬಿಟ್ಟ ಮಕ್ಕಳ ಸರ್ವೇ ಮಾಡೋಕೆ ಹೊರಟಿದೆ. ಬಿಬಿಎಂಪಿ ವ್ಯಾಪ್ತಿಯ ಸುಮಾರು 30 ಲಕ್ಷ ಮನೆಗಳ ಸರ್ವೇಗೆ ಖಾಸಗಿ ಸಂಸ್ಥೆಗಳ ಮೊರೆಹೋಗಿರೋ ಪಾಲಿಕೆ, ತನ್ನ ಶಾಲೆಗಳ ದಾಖಲಾತಿ ಇಳಿಕೆಗೆ ಇರೋ ಕಾರಣವನ್ನ ಕೂಡ ಪತ್ತೆ ಹಚ್ಚೋಕೆ ಮುಂದಾಗಿದೆ.

ಬರೋಬ್ಬರಿ 3 ಕೋಟಿ ವೆಚ್ಚದಲ್ಲಿ ಪಾಲಿಕೆ ವ್ಯಾಪ್ತಿಯ ಶಾಲೆ ಬಿಟ್ಟ ಮಕ್ಕಳ ಸರ್ವೇ, ಬಿಬಿಎಂಪಿ ವಿರುದ್ಧ ಆಕ್ರೋಶ
ಬಿಬಿಎಂಪಿ
Follow us on

ಬೆಂಗಳೂರು, ಜುಲೈ.23: ಇತ್ತೀಚೆಗಷ್ಟೇ ಬಿಬಿಎಂಪಿ ಶಾಲೆಗಳ (BBMP Schools) ದಾಖಲಾತಿ ಪ್ರಮಾಣ ಕುಸಿತವಾಗಿತ್ತು. ಅಲ್ಲದೇ SSLC ಪರೀಕ್ಷೆಯಲ್ಲೂ ಕೆಲ ಶಾಲೆಗಳ ಫಲಿತಾಂಶ ಕುಸಿತವಾಗಿತ್ತು. ಸದ್ಯ ಇದರಿಂದ ಅಲರ್ಟ್ ಆದ ಪಾಲಿಕೆ, ಇದೀಗ ಹೈಕೋರ್ಟ್ ಆದೇಶದಂತೆ ಪಾಲಿಕೆ ವ್ಯಾಪ್ತಿಯಲ್ಲಿನ ಶಾಲೆ ಬಿಟ್ಟ ಮಕ್ಕಳ ಸರ್ವೇಗೆ (Survey) ಮುಂದಾಗಿದೆ. ಸದ್ಯ ಗಾಂಧಿನಗರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಾಥಮಿಕವಾಗಿ ಸರ್ವೇಗೆ ತಯಾರಿ ನಡೆಸಿರೋ ಪಾಲಿಕೆ (BBMP), ಸರ್ವೇ ಜವಾಬ್ದಾರಿಯನ್ನ ಖಾಸಗಿ ಸಂಸ್ಥೆಗೆ ವಹಿಸಿದ್ದು ಪ್ರತಿ ಮನೆಗೆ ತಲಾ 10 ರೂಪಾಯಿಯಂತೆ 30 ಲಕ್ಷ ಮನೆಗಳಿಗೆ ಬರೋಬ್ಬರಿ 3 ಕೋಟಿ ಮೀಸಲಿಡಲು ಹೊರಟಿದೆ.

ಸದ್ಯ ಪಾಲಿಕೆ ವ್ಯಾಪ್ತಿಯ ಸ್ಲಂಗಳು, ಮಧ್ಯಮವರ್ಗದ ಜನರು ವಾಸಿಸೋ ಜಾಗಗಳಲ್ಲೂ ಸರ್ವೇಗೆ ಸಜ್ಜಾಗಿರೋ ಪಾಲಿಕೆ, ಮಕ್ಕಳು ಶಾಲೆ ಬಿಡಲು ಇರೋ ಕಾರಣ ಹಾಗೂ ಪೋಷಕರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕಲೆಹಾಕೋದಕ್ಕೆ ಪ್ಲಾನ್ ಮಾಡಿದೆ. ಗಾಂಧಿನಗರ ವಿಧಾನಸಭಾಕ್ಷೇತ್ರದ ಬಳಿಕ ಇತರೆ ಭಾಗಗಳಲ್ಲೂ ಸರ್ವೇ ನಡೆಸೋಕೆ ಚಿಂತನೆ ನಡೆಸಿರೋ ಪಾಲಿಕೆ ಇದಕ್ಕಾಗಿ ಖಾಸಗಿ ಸಂಸ್ಥೆಗಳಿಗೆ ಟೆಂಡರ್ ಕರೆದಿದೆ.

ಇದನ್ನೂ ಓದಿ: ಬಿಬಿಎಂಪಿ ಇನ್ಮುಂದೆ ಗ್ರೇಟರ್ ಬೆಂಗಳೂರು ಅಥಾರಿಟಿ? ರಾಮನಗರ, ಕನಕಪುರವನ್ನು ಬೆಂಗಳೂರಿಗೆ ಸೇರಿಸಲು ರೂಪುರೇಷೆ

ಇತ್ತ ಪಾಲಿಕೆ ನಡೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗ್ತಿದೆ. ಒಂದೆಡೆ ಪಾಲಿಕೆ ಶಾಲೆಗಳಿಗೆ ಮೂಲಸೌಕರ್ಯ ನೀಡದೇ ಸರ್ವೇಗೆ ಕೋಟಿ ಕೋಟಿ ಹಣ ಕೊಡಲು ಹೊರಟಿದ್ರೆ, ಮತ್ತೊಂದೆಡೆ ಈಗಾಗಲೇ ಸರ್ವೇ ಹೆಸರಲ್ಲಿ ಅಕ್ರಮ ಎಸಗಿದ್ದ ಚಿಲುಮೆ ಸಂಸ್ಥೆಯ ಹಗರಣದಿಂದ ಜನರು ತಮ್ಮ ಡೇಟಾ ನಿಡೋಕೆ ಆತಂಕಪಡುವಂತಾಗಿದೆ. ಸದ್ಯ ಮಕ್ಕಳ ಸರ್ವೇ ನೆಪದಲ್ಲಿ ಖಾಸಗಿ ಮಾಹಿತಿ ಕಲೆಹಾಕೋ ಖಾಸಗಿ ಸಂಸ್ಥೆ, ಅದನ್ನ ದುರುಪಯೋಗ ಮಾಡಿಕೊಳ್ಳಬಹುದು ಅನ್ನೋ ಆರೋಪ ಕೂಡ ಕೇಳಿಬರ್ತಿದೆ.

ಒಟ್ಟಿನಲ್ಲಿ ಸರ್ಕಾರಿ ಹಾಗೂ ಪಾಲಿಕೆ ಶಾಲಾ ಮಕ್ಕಳ ಮೂಲಸೌಕರ್ಯ, ಶಾಲೆಗಳ ಅಭಿವೃದ್ಧಿ ಕಡೆ ಗಮನ ಹರಿಸದೆ ಸರ್ಕಾರ ಹಾಗೂ ಪಾಲಿಕೆ, ಇದೀಗ ಶಾಲೆ ಬಿಟ್ಟ ಮಕ್ಕಳನ್ನ ಸರ್ವೇ ಮಾಡಲು ಹೊರಟಿದ್ದು, ಸದ್ಯ ಈ ಸರ್ವೇ ಬಳಿಕವಾದ್ರೂ ಮಕ್ಕಳು ಶಾಲೆಗಳಿಗೆ ಬರಲು ಸೂಕ್ತ ವಾತಾವರಣ ನಿರ್ಮಿಸ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ