AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೌತಿ ಬಂಡುಕೋರರ ದಾಳಿ ಬಳಿಕ ಏರ್​​ಪೋರ್ಟ್​​ಗಳು ಕ್ಲೋಸ್​​: ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದ 500ಕ್ಕೂ ಹೆಚ್ಚು ಉಮ್ರಾ ಯಾತ್ರಿಕರು

ಸೌದಿ ಅರೇಬಿಯಾದಲ್ಲಿ ಹೌತಿ ಬಂಡುಕೋರರ ದಾಳಿ ಬಳಿಕ ವಿಮಾನ ನಿಲ್ದಾಣಗಳ ಬಂದ್‌ ಆಗಿರುವ ಕಾರಣ ಕರ್ನಾಟಕದ 500ಕ್ಕೂ ಹೆಚ್ಚು ಉಮ್ರಾ ಯಾತ್ರಿಕರು ಮದೀನಾ ಮತ್ತು ಮೆಕ್ಕಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ವಾಪಸಾಗಲು ಪರದಾಡುತ್ತಿದ್ದಾರೆ. ಕುಟುಂಬಸ್ಥರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರೆ, ಯಾತ್ರಿಕರೊಂದಿಗೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಹೌತಿ ಬಂಡುಕೋರರ ದಾಳಿ ಬಳಿಕ ಏರ್​​ಪೋರ್ಟ್​​ಗಳು ಕ್ಲೋಸ್​​: ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದ 500ಕ್ಕೂ ಹೆಚ್ಚು ಉಮ್ರಾ ಯಾತ್ರಿಕರು
ಸಾಂದರ್ಭಿಕ ಚಿತ್ರImage Credit source: Getty Images
ಪ್ರಸನ್ನ ಹೆಗಡೆ
|

Updated on: Oct 23, 2026 | 11:52 AM

Share

ಬೆಂಗಳೂರು, ಅಕ್ಟೋಬರ್​​ 23: ಹೌತಿ ಬಂಡುಕೋರರ ದಾಳಿಯ ಪರಿಣಾಮ ಸೌದಿ ಅರೇಬಿಯಾದ ಪ್ರಮುಖ ವಿಮಾನ ನಿಲ್ದಾಣಗಳನ್ನು ಮುಚ್ಚಿರುವ ಹಿನ್ನೆಲೆ, ಮದೀನಾ ಮತ್ತು ಮೆಕ್ಕಾದಲ್ಲಿ ಕರ್ನಾಟಕದ 500ಕ್ಕೂ ಹೆಚ್ಚು ಉಮ್ರಾ ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಎರಡು ವಾರಗಳಿಂದ ಬಹುತೇಕ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿರುವ ನಡುವೆ ಯಾತ್ರಿಕರನ್ನು ಸೌದಿ ಅರೇಬಿಯಾಕ್ಕೆ ಕರೆದೊಯ್ದಿದ್ದ ಖಾಸಗಿ ಪ್ರವಾಸ ನಿರ್ವಾಹಕರು ಕೂಡ ಸ್ಪಂದಿಸದ ಕಾರಣ ನೂರಾರು ಮಂದಿ ಅತಂತ್ರರಾಗಿದ್ದಾರೆ.

ಯಾತ್ರಿಕರ ಕುಟುಂಬಸ್ಥರ ಆತಂಕ

ಉಮ್ರಾ ಯಾತ್ರಿಕರು ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿರುವ ಕಾರಣ ಇತ್ತ ಕುಟುಂಬಸ್ಥರು ಆತಂಕದಲ್ಲಿದ್ದಾರೆ. ಯಾತ್ರಿಕರನ್ನು ಸುರಕ್ಷಿತವಾಗಿ ತವರಿಗೆ ಕರೆತರಲು ಇಂಡಿಗೋ, ಆಕಾಶ ಏರ್ ಮತ್ತು ಏರ್ ಇಂಡಿಯಾ ವಿಮಾನ ಸಂಸ್ಥೆಗಳಿಗೆ ರಿಯಾದ್ ಅಥವಾ ಜೆಡ್ಡಾಗೆ ತೆರಳಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಯಾತ್ರಿಕರನ್ನು ಸುರಕ್ಷಿತವಾಗಿ ಮತ್ತು ಆದಷ್ಟು ಬೇಗ ಕರ್ನಾಟಕಕ್ಕೆ ವಾಪಸ್ ಕರೆತರಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅಬ್ದುಲ್ ಅಜೀಂ ಹೇಳಿದ್ದಾರೆ. ಕಡಿಮೆ ವೆಚ್ಚದ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದ ಅನೇಕ ಯಾತ್ರಿಕರ ಟಿಕೆಟ್‌ಗಳು ಮರುಪಾವತಿಗೆ ಅರ್ಹವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಹೊಸ ಟಿಕೆಟ್‌ಗಳನ್ನು ಖರೀದಿಸಲು ಹಣದ ಕೊರತೆ ಎದುರಾಗಿರುವುದರಿಂದ ಅನೇಕ ಯಾತ್ರಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ವಾಪಸ್ ಬರಲು ಹೊಸ ಟಿಕೆಟ್‌ಗಳಿಗಾಗಿ ಹೆಚ್ಚುವರಿ ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಮಂಗಳೂರು–ಸೌದಿ ವಿಮಾನ ಸೇವೆ ವ್ಯತ್ಯಯ: ಕರಾವಳಿ ಕರ್ನಾಟಕದ ನೂರಾರು ಪ್ರಯಾಣಿಕರಿಗೆ ಸಮಸ್ಯೆ

ಯಾತ್ರಿಕರೊಂದಿಗೆ ಅಧಿಕಾರಿಗಳಿಂದ ನಿರಂತರ ಸಂಪರ್ಕ

ಯಾತ್ರಿಕರೊಂದಿಗೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಸೌದಿ ರಿಯಾಲ್‌ಗೆ ಭಾರತೀಯ ರೂಪಾಯಿಯ ವಿನಿಮಯ ಮೌಲ್ಯ ಸುಮಾರು 25 ರೂಪಾಯಿ ಇರುವುದರಿಂದ, ಒಬ್ಬರಿಗೆ ದಿನಕ್ಕೆ ಊಟಕ್ಕಾಗಿ ಸುಮಾರು 1,500 ರೂಪಾಯಿ ವೆಚ್ಚವಾಗುತ್ತಿದೆ. ಅಗತ್ಯವಿದ್ದರೆ ಯಾತ್ರಿಕರಿಗೆ ಆಹಾರದ ವ್ಯವಸ್ಥೆ ಮಾಡುತ್ತೇವೆ ಎಂದು ಖಾದರ್ ತಿಳಿಸಿದ್ದಾರೆ. ಅಕ್ಟೋಬರ್ 24 ಮತ್ತು 27ರಂದು ವಿಮಾನಗಳ ಮೂಲಕ ಯಾತ್ರಿಕರನ್ನು ವಾಪಸ್ ಕರೆತರಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More