AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು–ಸೌದಿ ವಿಮಾನ ಸೇವೆ ವ್ಯತ್ಯಯ: ಕರಾವಳಿ ಕರ್ನಾಟಕದ ನೂರಾರು ಪ್ರಯಾಣಿಕರಿಗೆ ಸಮಸ್ಯೆ

ಸೌದಿ ಅರೇಬಿಯಾದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆಗೆ ಅಡಚಣೆ ಉಂಟಾಗಿರುವುದರಿಂದ ಮಂಗಳೂರು ವಿಮಾನ ನಿಲ್ದಾಣವನ್ನು ಅವಲಂಬಿಸಿರುವ ಕರಾವಳಿ ಭಾಗದ ನೂರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೌದಿಯಲ್ಲಿ ಸಿಲುಕಿರುವ ಕೆಲ ಉಮ್ರಾ ಯಾತ್ರಿಕರು ರಸ್ತೆ ಮೂಲಕ ಕತಾರ್‌ಗೆ ತೆರಳಿ ಅಲ್ಲಿಂದ ಭಾರತಕ್ಕೆ ವಾಪಸ್ ಬರುತ್ತಿದ್ದಾರೆ.

ಮಂಗಳೂರು–ಸೌದಿ ವಿಮಾನ ಸೇವೆ ವ್ಯತ್ಯಯ: ಕರಾವಳಿ ಕರ್ನಾಟಕದ ನೂರಾರು ಪ್ರಯಾಣಿಕರಿಗೆ ಸಮಸ್ಯೆ
ಮಂಗಳೂರು ವಿಮಾನ ನಿಲ್ದಾಣImage Credit source: Mangaluru Airport
ಗಣಪತಿ ಶರ್ಮಾ
|

Updated on: Oct 21, 2026 | 12:53 PM

Share

ಮುಖ್ಯಾಂಶಗಳು

  • ಮಂಗಳೂರು–ಸೌದಿ ವಿಮಾನ ಸೇವೆಗಳಲ್ಲಿ ವ್ಯತ್ಯಯ
  • ಉಮ್ರಾ ಯಾತ್ರಿಕರು ಕತಾರ್ ಮೂಲಕ ತವರಿಗೆ ವಾಪಸ್
  • ಅಕ್ಟೋಬರ್ 24ರವರೆಗೆ ವಿಮಾನ ಸೇವೆ ಸ್ಥಗಿತ

ಮಂಗಳೂರು, ಅಕ್ಟೋಬರ್ 21: ಸೌದಿ ಅರೇಬಿಯಾದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಹೌತಿ ಬಂಡುಕೋರರ ದಾಳಿಗಳಿಂದ ವಿಮಾನ ಕಾರ್ಯಾಚರಣೆಗೆ ಅಡಚಣೆ ಉಂಟಾಗಿರುವ ಕಾರಣ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅವಲಂಬಿಸಿರುವ ಕರಾವಳಿ ಭಾಗದ ನೂರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೌದಿಯಲ್ಲಿ ಸಿಲುಕಿರುವ ಕೆಲ ಉಮ್ರಾ ಯಾತ್ರಿಕರು ರಸ್ತೆ ಮಾರ್ಗವಾಗಿ ಕತಾರ್‌ಗೆ ತೆರಳಿ, ಅಲ್ಲಿಂದ ಭಾರತಕ್ಕೆ ವಾಪಸ್ ಬರಲು ಪ್ರಯತ್ನಿಸುತ್ತಿದ್ದಾರೆ.

ಸೌದಿ ಅರೇಬಿಯಾದಿಂದ ತುರ್ತಾಗಿ ತವರಿಗೆ ಮರಳಬೇಕಿರುವ ಹಿರಿಯ ನಾಗರಿಕರು, ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಸೇರಿದಂತೆ ಹಲವು ಪ್ರಯಾಣಿಕರು ಪರ್ಯಾಯ ಮಾರ್ಗಗಳ ಮೂಲಕ ಪ್ರಯಾಣ ಬೆಳೆಸುತ್ತಿದ್ದಾರೆ. ಸೌದಿಯಿಂದ ರಸ್ತೆ ಮೂಲಕ ಕತಾರ್ ತಲುಪಿ, ಅಲ್ಲಿಂದ ವಿಮಾನದಲ್ಲಿ ಭಾರತಕ್ಕೆ ಬರುವ ಪ್ರಯತ್ನ ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಪ್ರಯಾಣಿಕರಿಗೆ ಸಂಕಷ್ಟ

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೌದಿ ಅರೇಬಿಯಾದ ಜೆಡ್ಡಾ ಮತ್ತು ದಮ್ಮಾಮ್‌ಗೆ ವಾರದಲ್ಲಿ ಮೂರು ಬಾರಿ ವಿಮಾನ ಸೇವೆ ನಡೆಸುತ್ತಿದೆ. ಈ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕಾಸರಗೋಡಿನಿಂದ ಭಟ್ಕಳದವರೆಗಿನ ಕರಾವಳಿ ಭಾಗದ ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ.

ಮಂಗಳೂರಿನಿಂದ ಸೌದಿ ಅರೇಬಿಯಾಕ್ಕೆ ತೆರಳಲು ಸಿದ್ಧರಾಗಿದ್ದವರು ಹಾಗೂ ಸೌದಿಯಿಂದ ತವರಿಗೆ ಮರಳಲು ವಿಮಾನಕ್ಕಾಗಿ ಕಾಯುತ್ತಿರುವವರು ತೊಂದರೆ ಅನುಭವಿಸುತ್ತಿದ್ದಾರೆ. ನಿಯಮಿತ ವಿಮಾನ ಸೇವೆಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಕೆಲವರು ಕತಾರ್ ಮತ್ತು ಬಹ್ರೇನ್ ಮೂಲಕ ಪ್ರಯಾಣಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.

ತುರ್ತು ಕೆಲಸಗಳಿಗಾಗಿ ಮರಳಬೇಕಿರುವವರಿಗೂ ತೊಂದರೆ

ಉಮ್ರಾ ಯಾತ್ರಿಕರಷ್ಟೇ ಅಲ್ಲದೆ, ವಿಸಿಟ್ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿರುವವರು ಹಾಗೂ ತುರ್ತು ಕೆಲಸಗಳಿಗಾಗಿ ಭಾರತಕ್ಕೆ ಮರಳಬೇಕಿರುವವರ ಪ್ರಯಾಣ ಯೋಜನೆಗಳೂ ಅಸ್ತವ್ಯಸ್ತವಾಗಿವೆ. ಕೆಲವರು ಪರ್ಯಾಯ ಪ್ರಯಾಣದ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರೆ, ಇನ್ನು ಕೆಲವರು ವಿಮಾನ ಸೇವೆಗಳು ಪುನರಾರಂಭವಾಗುವುದನ್ನು ಕಾಯುತ್ತಿದ್ದಾರೆ.

ಇದನ್ನೂ ಓದಿ: ಹೌತಿಗಳ ವಿರುದ್ಧದ ಸಮರಕ್ಕೆ ಇಸ್ರೇಲ್ ಎಂಟ್ರಿಗೆ ಸೌದಿ ಬ್ರೇಕ್: ನೆತನ್ಯಾಹು ಜಂಟಿ ಸೇನಾ ಪ್ರಸ್ತಾಪವನ್ನು ಸಾರಾಸಗಟಾಗಿ ತಿರಸ್ಕರಿಸಿದ ಪ್ರಿನ್ಸ್

ವಿಮಾನ ಸೇವೆಗಳ ಮೇಲಿನ ನಿರ್ಬಂಧವನ್ನು ಅಕ್ಟೋಬರ್ 24ರವರೆಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಲ್ಲಿ ಅನಿಶ್ಚಿತತೆ ಮುಂದುವರಿದಿದೆ. ವಿಮಾನ ಕಾರ್ಯಾಚರಣೆ ಸಹಜ ಸ್ಥಿತಿಗೆ ಮರಳುವುದನ್ನೇ ಪ್ರಯಾಣಿಕರು ಎದುರು ನೋಡುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More